ADVERTISEMENT

ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗೆ ಕೋವಿಡ್: ಏಷ್ಯಾ ಕಪ್‌ಗೆ ಅಲಭ್ಯ

ಪಿಟಿಐ
Published 23 ಆಗಸ್ಟ್ 2022, 6:29 IST
Last Updated 23 ಆಗಸ್ಟ್ 2022, 6:29 IST
ರಾಹುಲ್ ದ್ರಾವಿಡ್‌
ರಾಹುಲ್ ದ್ರಾವಿಡ್‌   

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕೋವಿಡ್–19 ದೃಢಪಟ್ಟಿದೆ. ಹೀಗಾಗಿ ಅವರು ದುಬೈಯಲ್ಲಿ ನಡೆಯಲಿರುವ ಏಷ್ಯಾ ಕಪ್ ಟೂರ್ನಿಗೆ ತಂಡದ ಜತೆ ತೆರಳುವುದಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು ತಿಳಿಸಿವೆ.

ಜಿಂಬಾಬ್ವೆ ವಿರುದ್ಧ ಸೋಮವಾರ ಕೊನೆಗೊಂಡ ಏಕದಿನ ಕ್ರಿಕೆಟ್ ಸರಣಿಗೂ ತಂಡದ ಜತೆ ದ್ರಾವಿಡ್ ಇರಲಿಲ್ಲ. ಸತತ ಪಂದ್ಯಗಳ ಕಾರಣ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪಾರಸ್‌ ಮಾಂಬ್ರೆ ಹಾಗೂ ಇತರ ಕೋಚಿಂಗ್ ಸಿಬ್ಬಂದಿಗೆ ಬಿಸಿಸಿಐ ವಿಶ್ರಾಂತಿ ನೀಡಿತ್ತು. ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನು ಭಾರತ ಕ್ಲೀನ್‌ಸ್ವೀಪ್ ಮಾಡಿದೆ.

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 27ರಂದು ಆರಂಭಗೊಳ್ಳಲಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು 28ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ.

ಟೂರ್ನಿಗೆ ಭಾರತ ತಂಡವನ್ನು ಬಿಸಿಸಿಐ ಈಗಾಗಲೇ ಪ್ರಕಟಿಸಿದ್ದು, ವೇಗಿ ಜಸ್‌ಪ್ರೀತ್ ಬೂಮ್ರಾ ಅವರು ಬೆನ್ನು ನೋವಿನ ಕಾರಣದಿಂದ ತಂಡದಿಂದ ಹೊರಗುಳಿದಿದ್ದಾರೆ. ಮಾಜಿ ನಾಯಕ ವಿರಾಟ್‌ ಕೊಹ್ಲಿ ಮತ್ತು ಗಾಯದಿಂದ ಚೇತರಿಸಿಕೊಂಡಿರುವ ಕೆ.ಎಲ್‌.ರಾಹುಲ್‌ ಅವರು ತಂಡಕ್ಕೆ ಮರಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.