ADVERTISEMENT

ಗಂಭೀರ್ ಕ್ರಿಕೆಟ್‌ನ ಅದ್ಭುತ ಚಿಂತಕ: ಆಸ್ಟ್ರೇಲಿಯಾದ ಸ್ಟಾರ್ಕ್ ಹೀಗೆ ಹೇಳಿದ್ದೇಕೆ?

ಪಿಟಿಐ
Published 14 ಅಕ್ಟೋಬರ್ 2024, 12:48 IST
Last Updated 14 ಅಕ್ಟೋಬರ್ 2024, 12:48 IST
<div class="paragraphs"><p>ಗೌತಮ್‌ ಗಂಭೀರ್‌ ಹಾಗೂ ಮಿಚೇಲ್‌ ಸ್ಟಾರ್ಕ್‌</p></div>

ಗೌತಮ್‌ ಗಂಭೀರ್‌ ಹಾಗೂ ಮಿಚೇಲ್‌ ಸ್ಟಾರ್ಕ್‌

   

ಪಿಟಿಐ ಚಿತ್ರಗಳು

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮುಖ್ಯಕೋಚ್ ಗೌತಮ್‌ ಗಂಭೀರ್‌ ಅವರ ಬಗ್ಗೆ ಆಸ್ಟ್ರೇಲಿಯಾದ ವೇಗದ ಬೌಲರ್‌ ಮಿಚೇಲ್‌ ಸ್ಟಾರ್ಕ್‌ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ತಂಡದ ಅಗತ್ಯಗಳಿಗೆ ಆದ್ಯತೆ ನೀಡಬಲ್ಲ ಗಂಭೀರ್‌ ಅವರು ಕ್ರಿಕೆಟ್‌ನ ಅದ್ಭುತ ಚಿಂತಕ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಗಂಭೀರ್‌ ಅವರು ಐಪಿಎಲ್‌ನ 2024ರ ಆವೃತ್ತಿಯಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್‌ (ಕೆಕೆಆರ್‌) ತಂಡದ ಮೆಂಟರ್ ಆಗಿದ್ದರು. ಅವರ ಮಾರ್ಗದರ್ಶನದಲ್ಲಿ ಕೆಕೆಆರ್‌ ಈ ಬಾರಿ ಚಾಂಪಿಯನ್‌ ಪಟ್ಟಕ್ಕೇರಿದೆ.

ಕೆಕೆಆರ್‌ನ ಪ್ರಮುಖ ವೇಗಿಯಾಗಿರುವ ಸ್ಟಾರ್ಕ್‌ ಅವರು ಗಂಭೀರ್‌ ಜೊತೆಗಿನ ಒಡನಾಟದ ಬಗ್ಗೆ 'ಸ್ಟಾರ್‌ ಸ್ಪೋರ್ಟ್‌' ಜೊತೆ ಮಾತನಾಡಿದ್ದಾರೆ.

'ಕೋಲ್ಕತ್ತ ತಂಡದಲ್ಲಿದ್ದಾಗಿನ ಅನುಭವದ ಬಗ್ಗೆ ಹೇಳುವುದಾದರೆ, ಅವರು (ಗೌತಮ್‌ ಗಂಭೀರ್‌) ಕ್ರಿಕೆಟ್‌ನ ಅದ್ಭುತ ಚಿಂತಕ. ಬೌಲಿಂಗ್‌ ವಿಭಾಗವಾಗಿ ಎದುರಾಳಿ ಆಟಗಾರರನ್ನು ಹೇಗೆ ಔಟ್ ಮಾಡಬೇಕು ಮತ್ತು ಬ್ಯಾಟಿಂಗ್‌ ವಿಭಾಗವಾಗಿ ರನ್‌ ಗಳಿಸುವುದು ಹೇಗೆ ಎಂಬ ಬಗ್ಗೆ ಸದಾ ಆಲೋಚನೆ ನಡೆಸುತ್ತಾರೆ. ಒಬ್ಬ ಆಟಗಾರನ ಮೇಲಷ್ಟೇ ಅಲ್ಲ, ಇಡೀ ತಂಡದ ಆದ್ಯತೆ, ತಂತ್ರಗಾರಿಕೆ, ಫೀಲ್ಡ್‌ನಲ್ಲಿ ಆಟಗಾರರ ನಿಯೋಜನೆ ಅಥವಾ ಅಂತಹ ಯಾವುದೇ ಅಂಶವಾಗಲಿ. ಅದರ ಮೇಲೆ ಗಮನ ಹರಿಸುತ್ತಾರೆ' ಎಂದು ತಿಳಿಸಿದ್ದಾರೆ.

'ಗಂಭೀರ್‌ ಅವರೊಂದಿಗೆ ಕಳೆದ 9 ವಾರಗಳು ಅದ್ಭುತವಾಗಿದ್ದವು. ಟಿ20 ತಂಡದ ವಿಚಾವಾಗಿ ಸಾಕಷ್ಟು ಉತ್ತಮ ಅಂಶಗಳನ್ನು ಹೊಂದಿದ್ದಾರೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಬಾರಿಯ ಐಪಿಎಲ್‌ ಹರಾಜನಲ್ಲಿ ₹ 24.75 ಕೋಟಿ ನೀಡಿ ಸ್ಟಾರ್ಕ್‌ ಅವರನ್ನು ಕೆಕೆಆರ್ ಖರೀದಿಸಿತ್ತು. ಇದು ಐಪಿಎಲ್‌ ಇತಿಹಾಸದಲ್ಲಿ ಆಟಗಾರನೊಬ್ಬ ಜೇಬಿಗಿಳಿಸಿದ ಅತಿ ದುಬಾರಿ ಮೊತ್ತವೆನಿಸಿದೆ.

2024ರ ಟೂರ್ನಿಯುದ್ದಕ್ಕೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಸ್ಟಾರ್ಕ್‌, ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ನಡೆದ ಫೈನಲ್‌ ಪಂದ್ಯದಲ್ಲಿ ಮಿಂಚಿದ್ದರು. ಮೂರು ಓವರ್‌ಗಳಲ್ಲಿ ಕೇವಲ 14 ರನ್‌ ನೀಡಿ, 2 ವಿಕೆಟ್‌ ಪಡೆದು ಪಂದ್ಯಶ್ರೇಷ್ಠ ಎನಿಸಿದ್ದರು.

ಮುಂದಿನ ತಿಂಗಳು ಭಾರತ ಹಾಗೂ ಆಸ್ಟ್ರೇಲಿಯಾ ಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಐದು ಪಂದ್ಯಗಳ ಸರಣಿಯು ಪರ್ತ್‌ನಲ್ಲಿ ನವೆಂಬರ್‌ 22ರಂದು ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.