ADVERTISEMENT

ಭಾರತಕ್ಕೆ ಆರಂಭಿಕ ಆಟಗಾರರ ‘ಸಂಕಟ’: ಎಲ್ಲೆಡೆ ಟೀಕೆ

ರನ್‌ ಗಳಿಸಲು ಪರದಾಡುತ್ತಿರುವ ರಾಹುಲ್‌–ಮುರಳಿ ವಿಜಯ್‌ ಜೋಡಿ

ರಾಯಿಟರ್ಸ್
Published 19 ಡಿಸೆಂಬರ್ 2018, 17:37 IST
Last Updated 19 ಡಿಸೆಂಬರ್ 2018, 17:37 IST
ಕೆ.ಎಲ್‌.ರಾಹುಲ್‌
ಕೆ.ಎಲ್‌.ರಾಹುಲ್‌   

ನವದೆಹಲಿ: ಭಾರತ ತಂಡ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಸೋತ ನಂತರ ಆರಂಭಿಕರ ವೈಫಲ್ಯದ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ.

ಕರ್ನಾಟಕದ ಕೆ.ಎಲ್.ರಾಹುಲ್‌ ಮತ್ತು ಮುರಳಿ ವಿಜಯ್‌ ಅವರು ಎರಡು ಪಂದ್ಯಗಳಲ್ಲೂ ರನ್‌ ಗಳಿಸಲು ಪರದಾಡಿದ್ದರು. ಇದರಿಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಮೇಲೆ ಅತಿಯಾದ ಒತ್ತಡ ಬೀಳುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪರ್ತ್‌ನಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಮಾರ್ಕಸ್‌ ಹ್ಯಾರಿಸ್‌ ಮತ್ತು ಆ್ಯರನ್‌ ಫಿಂಚ್‌ ಅವರು ಆಸ್ಟ್ರೇಲಿಯಾ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಇವರು ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ 112ರನ್‌ ಕಲೆಹಾಕಿದ್ದರು. ಹೀಗಾಗಿ ತಂಡ ಸವಾಲಿನ ಮೊತ್ತ ಪೇರಿಸಿತ್ತು. ದ್ವಿತೀಯ ಇನಿಂಗ್ಸ್‌ನಲ್ಲೂ ಈ ಜೋಡಿ 59ರನ್‌ ಸೇರಿಸಿತ್ತು. ಹೀಗಾಗಿ ತಂಡದ ಗೆಲುವಿನ ಹಾದಿ ಸುಗಮಗೊಂಡಿತ್ತು.

ADVERTISEMENT

ಈ ಪಂದ್ಯದ ಎರಡು ಇನಿಂಗ್ಸ್‌ಗಳಲ್ಲೂ ಭಾರತದ ಆರಂಭಿಕ ಜೋಡಿ ವೈಫಲ್ಯ ಕಂಡಿತ್ತು. ಮೊದಲ ಇನಿಂಗ್ಸ್‌ನ ಆರಂಭದ ಆರು ಓವರ್‌ಗಳಲ್ಲೇ ರಾಹುಲ್‌ ಮತ್ತು ವಿಜಯ್‌ ಪೆವಿಲಿಯನ್‌ ಸೇರಿದ್ದರು. ಎರಡನೇ ಇನಿಂಗ್ಸ್‌ನಲ್ಲೂ ಇವರು ವಿಕೆಟ್‌ ನೀಡಲು ಅವಸರಿಸಿದ್ದರು. ಇದು ವಿರಾಟ್‌ ಕೊಹ್ಲಿ ಬಳಗದ ಹಿನ್ನಡೆಗೆ ಕಾರಣವಾಗಿತ್ತು.

26 ವರ್ಷ ವಯಸ್ಸಿನ ರಾಹುಲ್‌ ಈ ಸರಣಿಯ ನಾಲ್ಕು ಇನಿಂಗ್ಸ್‌ಗಳಿಂದ ಕೇವಲ 48ರನ್‌ ಗಳಿಸಿದ್ದಾರೆ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಬೇಕು ಎಂಬ ಮಾತುಗಳು ಕೇಳಿಬಂದಿದ್ದವು. ಹೀಗಿದ್ದರೂ ತಂಡದ ಆಡಳಿತ ಮಂಡಳಿ ರಾಹುಲ್‌ಗೆ ಅವಕಾಶ ನೀಡುತ್ತಿರುವುದು ಹಿರಿಯ ಕ್ರಿಕೆಟಿಗರ ಕೋಪಕ್ಕೆ ಕಾರಣವಾಗಿತ್ತು.

‘ರಾಹುಲ್‌ ಭಾರತಕ್ಕೆ ಬಂದು ಕರ್ನಾಟಕದ ಪರ ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡುವುದು ಒಳಿತು. ಅವರಲ್ಲಿ ಹೋರಾಟದ ಕಿಚ್ಚು ಆರಿದಂತಿದೆ’ ಎಂದು ಹಿರಿಯ ಆಟಗಾರ ಸುನಿಲ್‌ ಗಾವಸ್ಕರ್‌ ಆಜ್‌ ತಕ್‌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ರಾಹುಲ್‌ ಅವರು ಹಿಂದಿನ ಏಳು ಟೆಸ್ಟ್‌ ಪಂದ್ಯಗಳ ಪೈಕಿ ಒಂದರಲ್ಲೂ ಅರ್ಧಶತಕ ಸಿಡಿಸಿಲ್ಲ. ಹಿಂದಿನ 14 ಇನಿಂಗ್ಸ್‌ಗಳ ಪೈಕಿ 11 ಸಲ ಬೌಲ್ಡ್‌ ಇಲ್ಲವೇ ಎಲ್‌ಬಿಡಬ್ಲ್ಯು ಮೂಲಕವೇ ವಿಕೆಟ್‌ ನೀಡಿದ್ದಾರೆ.

ಈ ಕಾರಣದಿಂದಲೇ ಆಸ್ಟ್ರೇಲಿಯಾ ಎದುರಿನ ಸರಣಿಗೂ ಮುನ್ನ ಭಾರತ ತಂಡದ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಂಗಾರ್‌ ‘ವಿಕೆಟ್‌ ನೀಡಲು ರಾಹುಲ್‌ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ’ ಎಂದು ವ್ಯಂಗ್ಯವಾಡಿದ್ದರು.

ಶಿಖರ್‌ ಧವನ್‌ ಬದಲಿಗೆ ತಂಡದಲ್ಲಿ ಸ್ಥಾನ ಗಳಿಸಿರುವ ವಿಜಯ್‌, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ವಿಫಲರಾಗುತ್ತಿದ್ದಾರೆ. ಸರಣಿಯ ನಾಲ್ಕು ಇನಿಂಗ್ಸ್‌ಗಳಿಂದ ಅವರು ಗಳಿಸಿರುವುದು ಕೇವಲ 49ರನ್‌.

ಮೂರು ಮತ್ತು ನಾಲ್ಕನೇ ಟೆಸ್ಟ್‌ ಪಂದ್ಯಗಳಿಗೆ ಪ್ರಕಟಿಸಲಾಗಿರುವ ತಂಡದಲ್ಲಿ ಕರ್ನಾಟಕದ ಮಯಂಕ್‌ ಅಗರವಾಲ್‌ಗೆ ಸ್ಥಾನ ನೀಡಲಾಗಿದೆ. ಮೆಲ್ಬರ್ನ್‌ನಲ್ಲಿ ಡಿಸೆಂಬರ್‌ 26ರಿಂದ ನಡೆಯುವ ‘ಬಾಕ್ಸಿಂಗ್‌ ಡೇ’ ಟೆಸ್ಟ್‌ನಲ್ಲಿ ರಾಹುಲ್‌ ಅವರನ್ನು ಕೈಬಿಟ್ಟು ಮಯಂಕ್‌ಗೆ ಮಣೆ ಹಾಕಬೇಕೆಂದು ಹಲವರು ಒತ್ತಾಯಿಸಿದ್ದಾರೆ.

ಕೊಹ್ಲಿ ಪರ ಜಹೀರ್‌, ಪ್ರವೀಣ್ ಬ್ಯಾಟಿಂಗ್
ನವದೆಹಲಿ (ಪಿಟಿಐ):
’ಆಟದಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಆಕ್ರಮಣಕಾರಿ ಗುಣ ಭಾರತ ಕ್ರಿಎಕಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ವ್ಯಕ್ತಿತ್ವ. ಆದ್ದರಿಂದ ಅದನ್ನು ಮುಂದುವರಿಸಿಕೊಳ್ಳಬೇಕು’ ಎಂದು ವೇಗದ ಬೌಲರ್‌ಗಳಾದ ಜಹೀರ್ ಖಾನ್ ಮತ್ತು ಪ್ರವೀಣ್‌ ಕುಮಾರ್ ಹೇಳಿದ್ದಾರೆ.

ಬುಧವಾರ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅವರು ‘ರಣಜಿ ಸೇರಿದಂತೆ ಸಾಕಷ್ಟು ದೇಶಿ ಕ್ರಿಕೆಟ್‌ನಲ್ಲಿ ಕೊಹ್ಲಿ ಆಡಿದ್ದಾರೆ. ಆ ಸಂದರ್ಭದಲ್ಲೆಲ್ಲ ಅವರು ಆಕ್ರಮಣಕಾರಿಯೇ ಆಗಿದ್ದರು. ಆಸ್ಟ್ರೇಲಿಯಾದಲ್ಲಿ ಇಂಥ ಗುಣ ಇಲ್ಲದೆ ಪಂದ್ಯಗಳನ್ನು ಗೆಲ್ಲಲು ಸಾಧ್ಯವಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.