ಮುಂಬೈ: ಸುಷ್ಮಾ ಪಟೇಲ್ ಅವರ ಬಿರುಸಿನ ಬ್ಯಾಟಿಂಗ್ (45; 37 ಎ) ನೆರವಿನಿಂದ ಭಾರತ ತಂಡವು ಗುರುವಾರ ಇಲ್ಲಿ ನಡೆದ ಅಂಧ ಮಹಿಳೆಯರ ಟಿ20 ಕ್ರಿಕೆಟ್ ಸರಣಿಯಲ್ಲಿ ನೇಪಾಳ ಎದುರು ಏಳು ವಿಕೆಟ್‌ಗಳಿಂದ ಜಯಿಸಿತು.
ಇದರೊಂದಿಗೆ ಭಾರತ ತಂಡವು ಐದು ಪಂದ್ಯಗಳ ಸರಣಿಯಲ್ಲಿ 3–1ರ ಮುನ್ನಡೆ ಸಾಧಿಸಿತು.
ಪೊಲೀಸ್ ಜಿಮ್‌ಖಾನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ನಾಯಕಿ ಬಿಂಟಾ ಪುನ್ 69 ರನ್ ಗಳಿಸಿದರು. ಅವರು ಮಂಕೇಶಿ ಚೌಧರಿ ಅವರೊಂದಿಗೆ 101 ರನ್ ಗಳ ಜೊತೆಯಾಡಿದರು.
ಪುನ್ ಔಟಾದ ಬಳಿಕ ನೇಪಾಳ ಕೊನೆಯ ನಾಲ್ಕು ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಗುರಿ ಬೆನ್ನತ್ತಿದ ಭಾರತ, ಮೂರು ವಿಕೆಟ್ ಕಳೆದುಕೊಂಡು 19ನೇ ಓವರ್‌ನಲ್ಲಿ ದಡ ಸೇರಿತು. ಸುಷ್ಮಾ ಪಂದ್ಯ ಆಟಗಾರ್ತಿ ಗೌರವಕ್ಕೆ ಪಾತ್ರರಾದರು.
ಸರಣಿಯ ಕೊನೆಯ ಪಂದ್ಯ ಶುಕ್ರವಾರ ನಡೆಯಲಿದೆ. ಮೊದಲ ಎರಡು ಟಿ20 ಪಂದ್ಯವನ್ನು ಭಾರತ ಮತ್ತು ಮೂರನೇ ಪಂದ್ಯವನ್ನು ನೇಪಾಳ ಗೆದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.