ಸಿಡ್ನಿ:ಆಸ್ಟ್ರೇಲಿಯಾ ಮತ್ತು ಭಾರತ ನಡುವಣ ಸಿಡ್ನಿ ಟೆಸ್ಟ್ ಪಂದ್ಯದ ಐದನೇ ದಿನದ ಆಟದಲ್ಲಿ ಆರಂಭದಿಂದಲೇ ಉತ್ತಮ ಬ್ಯಾಟಿಂಗ್ ಮುನ್ನಡೆ ಕಾಯ್ದುಕೊಂಡ ಟೀಮ್ ಇಂಡಿಯಾ, ಪಂದ್ಯ ಡ್ರಾ ಮಾಡಿಕೊಂಡಿದೆ. ಮೂರನೇ ಟೆಸ್ಟ್ ಇದಾಗಿದ್ದು, ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದ್ದರಿಂದ, ಪ್ರಸ್ತುತ ಭಾರತ-ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು 1—1 ಸಮಬಲ ದಾಖಲಿಸಿವೆ. ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಸೋಮವಾರ ದಿನದ ಆಟ ಆರಂಭಿಸಿದ ಟೀಮ್ ಇಂಡಿಯಾ, 98—2 ಮೂಲಕ ಗೆಲುವಿನ ಗುರಿಯಾಗಿದ್ದ 407 ರನ್ ಬೆನ್ನಟ್ಟಲು ಆರಂಭಿಸಿತು.
ಗಾಯಾಳು ಟೀಮ್ ಇಂಡಿಯಾ
ಟೀಮ್ ಇಂಡಿಯಾ ಆಟಗಾರರಿಗೆ ಗಾಯದ ಸಮಸ್ಯೆ ಕಾಡುತ್ತಿದ್ದು, ಹನುಮ ವಿಹಾರಿ ಮತ್ತು ರವಿಚಂದ್ರನ್ ಅಶ್ವಿನ್ ಇಬ್ಬರೂ ಚಿಕಿತ್ಸೆ ಪಡೆದುಕೊಂಡು ಸಿಡ್ನಿ ಟೆಸ್ಟ್‌ಗೆ ಸಜ್ಜಾಗಿದ್ದರು. ಹನುಮ ವಿಹಾರಿ 161 ಎಸೆತಗಳಲ್ಲಿ 23 ರನ್ ಗಳಿಸಿ ದೃಢವಾಗಿ ನಿಂತರೆ, ರವಿ ಆಶ್ವಿನ್ 39 ರನ್ ಗಳಿಸಿದರು. ದೇಶದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಆವರ ಜನ್ಮದಿನದಂದೇ ಹನುಮ ವಿಹಾರಿ ಗೋಡೆಯಂತೆ ತಂಡಕ್ಕೆ ಆಸರೆಯಾಗಿದ್ದು ಕೂಡ ವಿಶೇಷವಾಗಿತ್ತು.
ಉತ್ತಮ ಬ್ಯಾಟಿಂಗ್
ಆರಂಭದಲ್ಲಿ ರಿಷಬ್ ಪಂತ್ ಸ್ಪೋಟಕ 97 ರನ್ ಗಳಿಸಿದರೆ, ಚೇತೆಶ್ವರ ಪೂಜಾರ 77 ರನ್ ಪೇರಿಸಿದರು. ಅಲ್ಲದೆ, ಪೂಜಾರ ಟೆಸ್ಟ್ ಪಂದ್ಯದಲ್ಲಿ 6000 ರನ್ ಗಳಿಸಿದ 11ನೇ ಭಾರತೀಯ ಕ್ರಿಕೆಟಿಗ ಎಂಬ ಸಾಧನೆಯನ್ನೂ ತಮ್ಮದಾಗಿಸಿಕೊಂಡರು.
ಮುಂದಿನ ಪಂದ್ಯದತ್ತ ಎಲ್ಲರ ಚಿತ್ತ
ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದ್ದು, ಉಭಯ ತಂಡಗಳು ಸರಣಿ ಸಮಬಲ ಸಾಧಿಸಿರುವುದರಿಂದ, ಮುಂದಿನ ಪಂದ್ಯ ಹೆಚ್ಚು ಮಹತ್ವದ್ದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.