ಕೊಲಂಬೊ: ಶ್ರೀಲಂಕಾ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯವು ಶುಕ್ರವಾರ ನಡೆಯಲಿದೆ.
ಇದರಲ್ಲಿ ವಿಕೆಟ್‌ಕೀಪಿಂಗ್ ಹೊಣೆಯನ್ನು ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್ ಅವರಲ್ಲಿ ಯಾರಿಗೆ ನೀಡಬೇಕೆಂಬ ಕುರಿತು ತಂಡದ ಮ್ಯಾನೇಜ್‌ಮೆಂಟ್ ಯೋಚಿಸುತ್ತಿದೆ. ಈ ಹಿಂದೆ ರಾಹುಲ್ ದ್ರಾವಿಡ್ ಅವರು ಮುಖ್ಯ ಕೋಚ್ ಆಗಿದ್ದ ಸಂದರ್ಭದಲ್ಲಿ ಕೆ.ಎಲ್. ರಾಹುಲ್ ಕೀಪಿಂಗ್ ಹೊಣೆ ನಿಭಾಯಿಸಿದ್ದರು. ರಿಷಭ್ ಪಂತ್ ಅವರು ಏಕದಿನ ವಿಶ್ವಕಪ್‌ಗೆ ಅಲಭ್ಯರಾಗಿದ್ದಾಗಲೂ ರಾಹುಲ್ ಕೀಪಿಂಗ್ ಮಾಡಿದ್ದರು.
ಹೋದ ವರ್ಷದಲ್ಲಿ ರಾಹುಲ್ ಅವರು 21 ಪಂದ್ಯಗಳಿಂದ 834 ರನ್ ಗಳಿಸಿದ್ದರು. ಅದರಲ್ಲಿ ಎರಡು ಶತಕಗಳೂ ಸೇರಿದ್ದವು. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ರಾಹುಲ್ ನಾಯಕತ್ವ ಕೂಡ ನಿಭಾಯಿಸಿದ್ದರು.
ರಿಷಭ್ ಈಚೆಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉತ್ತಮವಾಗಿ ಕೀಪಿಂಗ್ ಮಾಡಿದ್ದರು. ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದರು. ಇದರಿಂದಾಗಿ ಇವರಿಬ್ಬರಲ್ಲಿ ಯಾರಿಗೆ ಕೀಪಿಂಗ್ ಹೊಣೆ ನೀಡಬೇಕೆಂಬ ಬಗ್ಗೆ ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ವ್ಯವಸ್ಥಾಪಕ ಸಮಿತಿಯು ಲೆಕ್ಕಾಚಾರ ಹಾಕುತ್ತಿದೆ.
ಒಂದೊಮ್ಮೆ ಇಬ್ಬರಿಗೂ 11ರ ಬಳಗದಲ್ಲಿ ಸ್ಥಾನ ನೀಡಿದರೆ, ಶ್ರೇಯಸ್ ಅಯ್ಯರ್ ಅವರಿಗೆ ಸ್ಥಾನ ನೀಡುವುದು ತುಸು ಕಷ್ಟವಾಗಬಹುದು. ರಾಹುಲ್, ಪಂತ್ ಮತ್ತು ಶ್ರೇಯಸ್ ಅವರೆಲ್ಲರಿಗೂ ಸ್ಥಾನ ನೀಡಿದರೆ ಐವರು ಬೌಲರ್‌ಗಳೊಂದಿಗೆ ಕಣಕ್ಕಿಳಿಯಬಹುದು. ವೈಯಕ್ತಿಕ ಕಾರಣಗಳಿಗಾಗಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈ ಸರಣಿಯಿಂದ ಹೊರಗುಳಿದಿದ್ದಾರೆ.
ಆರನೇ ಕ್ರಮಾಂಕದಲ್ಲಿ ಆಡಲು ಶಿವಂ ದುಬೆ ಅಥವಾ ರಿಯಾನ್ ಪರಾಗ್ ಅವರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು. ದುಬೆ ಐದು ವರ್ಷದ ಹಿಂದೆ ಏಕದಿನ ಪಂದ್ಯ ಆಡಿದ್ದರು. ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್, ಆರ್ಷದೀಪ್ ಸಿಂಗ್, ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಟಿ20 ವಿಶ್ವಕಪ್ ವಿಜಯದ ನಂತರ ಮತ್ತೆ ಕಣಕ್ಕೆ ಮರಳುತ್ತಿರುವ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ಉಪನಾಯಕ ಶುಭಮನ್ ಗಿಲ್ ಅವರು ಮೂರನೇ ಕ್ರಮಾಂಕದಲ್ಲಿ ಆಡಬಹುದು.
ಚರಿತ ಅಸಲಂಕಾ ನಾಯಕತ್ವದ ಶ್ರೀಲಂಕಾ ತಂಡವು ತವರಿನಂಗಳದಲ್ಲಿ ಗೆಲುವಿನ ಆರಂಭ ಮಾಡಲು ಕಾತರಿಸಿದೆ. ಆತಿಥೇಯ ತಂಡವು ಟಿ20 ಸರಣಿಯಲ್ಲಿ ಸೋತಿದ್ದು ಏಕದಿನ ಸರಣಿಯಲ್ಲಿ ಪುಟಿದೇಳುವ ನಿರೀಕ್ಷೆಯಲ್ಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 2.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.