ADVERTISEMENT

ಏಷ್ಯಾ ಕಪ್‌–2018: ರೋಹಿತ್‌ ಬಳಗಕ್ಕೆ ರೋಚಕ ಜಯ

ಏಳನೇ ಪ್ರಶಸ್ತಿ ಗೆದ್ದ ಭಾರತ

ಏಜೆನ್ಸೀಸ್
Published 28 ಸೆಪ್ಟೆಂಬರ್ 2018, 20:41 IST
Last Updated 28 ಸೆಪ್ಟೆಂಬರ್ 2018, 20:41 IST
ಭಾರತ ಕ್ರಿಕೆಟ್‌ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು. –ಎಎಫ್‌ಪಿ ಚಿತ್ರ
ಭಾರತ ಕ್ರಿಕೆಟ್‌ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು. –ಎಎಫ್‌ಪಿ ಚಿತ್ರ   

ದುಬೈ: ಏಷ್ಯಾ ಕಪ್‌–2018 ಫೈನಲ್‌ ಪಂದ್ಯದಲ್ಲಿ ಭಾರತ ತಂಡ ರೋಚಕ ಜಯ ಸಾಧಿಸಿತು. ಬಾಂಗ್ಲಾದೇಶದ ವಿರುದ್ಧ ಶುಕ್ರವಾರ ತಡರಾತ್ರಿ ಮುಗಿದ ಪಂದ್ಯದಲ್ಲಿ ಭಾರತ ಮೂರು ವಿಕೆಟ್‌ಗಳಿಂದ ಗೆದ್ದಿತು.

ಕೊನೆಯ ಎಸೆತದವರೆಗೂ ಬಾಂಗ್ಲಾದೇಶ ತಂಡವು ದಿಟ್ಟ ಹೋರಾಟ ನಡೆಸಿತು. ಆದರೆ, ಸ್ನಾಯು ಸೆಳೆತದ ನೋವಿನಲ್ಲೂ ಕೇದಾರ್‌ ಜಾಧವ್‌ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತದ ಗೆಲುವಿಗಾಗಿ ಕೈ ಮುಗಿದು ಪ್ರಾರ್ಥಿಸುತ್ತಿದ್ದ ಅಭಿಮಾನಿಗಳು ಸಂಭ್ರಮದಿಂದ ಕುಣಿದಾಡಿದರು.

ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ, 48.3 ಓವರ್‌ಗಳಲ್ಲಿ 222 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಭಾರತ 50 ಓವರ್‌ಗಳಲ್ಲಿ ಏಳು ವಿಕೆಟ್‌ಗಳನ್ನು ಕಳೆದುಕೊಂಡು 223 ರನ್‌ ಗಳಿಸಿತು. ಕೇದಾರ್‌ ಜಾಧವ್‌ (ಔಟಾಗದೆ 23) ಹಾಗೂ ಕುಲದೀಪ್‌ ಯಾದವ್‌ (ಔಟಾಗದೆ 5) ರನ್‌ ಗಳಿಸಿದರು.

ADVERTISEMENT

ಲಿಟನ್‌ ದಾಸ್‌ ಶತಕ ವ್ಯರ್ಥ: ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ಆಡಿದ ಲಿಟನ್ ದಾಸ್‌ (121; 117 ಎಸೆತ, 2 ಸಿಕ್ಸರ್ಸ್‌, 12 ಬೌಂಡರಿ) ಮತ್ತು ಮೆಹದಿ ಹಸನ್‌ ಉತ್ತಮ ಆರಂಭ ನೀಡಿದರು. ಆದರೆ, 21ನೇ ಓವರ್‌ನಲ್ಲಿ ಕೇದಾರ್‌ ಜಾಧವ್‌ ಈ ಜೊತೆಯಾಟವನ್ನು ಮುರಿದು ಭಾರತದ ಪಾಳಯದಲ್ಲಿ ಸಂಭ್ರಮ ಮೂಡಿಸಿದರು. 32 ರನ್ ಗಳಿಸಿದ್ದ ಮೆಹದಿ ಹಸನ್‌ ಅವರು ಅಂಬಟಿ ರಾಯುಡು ಅವರಿಗೆ ಕ್ಯಾಚ್ ನೀಡಿ ಮರಳಿದರು.

ನಂತರ ಬಂದ ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಆಗಲಿಲ್ಲ. ಇಮ್ರುಲ್ ಕೈಸ್‌, ಮುಷ್ಫಿಕುರ್ ರಹೀಮ್‌, ಮೊಹಮ್ಮದ್ ಮಿಥುನ್ ಮತ್ತು ಮೊಹಮ್ಮದುಲ್ಲಾ ಎರಡಂಕಿ ಮೊತ್ತ ದಾಟಲಾಗದೆ ವಾಪಸಾದರು. ಈ ನಡುವೆ ಲಿಟನ್
ದಾಸ್‌ ಶತಕ ಪೂರೈಸಿದರು.

ಮುಂದೆ ಕುಲದೀಪ್ ಯಾದವ್ ಮತ್ತು ಕೇದಾರ್ ಜಾಧವ್ ಅವರ ಪರಿಣಾಮಕಾರಿ ದಾಳಿಗೆ ನಲುಗಿದ ಇತರ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಪರೇಡ್ ನಡೆಸಿದರು. ಹೀಗಾಗಿ ಬಾಂಗ್ಲಾದೇಶ ತಂಡ ಸಾಧಾರಣ ಮೊತ್ತ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.