ADVERTISEMENT

ಮಹಿಳಾ ಕ್ರಿಕೆಟ್: ಇಂಗ್ಲೆಂಡ್‌ ಎದುರು ಮತ್ತೆ ಮುಗ್ಗರಿಸಿದ ಮಂದಾನ ಬಳಗ

ವೈಟ್ ಮಿಂಚು; ಇಂಗ್ಲೆಂಡ್‌ಗೆ 2–0ಯಿಂದ ಸರಣಿ ಮುನ್ನಡೆ

ಪಿಟಿಐ
Published 7 ಮಾರ್ಚ್ 2019, 12:51 IST
Last Updated 7 ಮಾರ್ಚ್ 2019, 12:51 IST
ಇಂಗ್ಲೆಂಡ್‌ನ ಡೇನಿಯಲ್ ವೈಟ್ ಅವರು ಒಂದು ರನ್‌ ಓಡುವ ಸಂದರ್ಭದಲ್ಲಿ ರನ್‌ಔಟ್‌ಗಾಗಿ ಪ್ರಯತ್ನಿಸುತ್ತಿರುವ ಭಾರತದ ಬೌಲರ್ ಶಿಖಾ ಪಾಂಡೆ  –ಎಎಫ್‌ಪಿ ಚಿತ್ರ
ಇಂಗ್ಲೆಂಡ್‌ನ ಡೇನಿಯಲ್ ವೈಟ್ ಅವರು ಒಂದು ರನ್‌ ಓಡುವ ಸಂದರ್ಭದಲ್ಲಿ ರನ್‌ಔಟ್‌ಗಾಗಿ ಪ್ರಯತ್ನಿಸುತ್ತಿರುವ ಭಾರತದ ಬೌಲರ್ ಶಿಖಾ ಪಾಂಡೆ  –ಎಎಫ್‌ಪಿ ಚಿತ್ರ   

ಗುವಾಹಟಿ: ಬ್ಯಾಟ್ಸ್‌ವುಮನ್‌ಗಳ ಕಳಪೆ ಆಟದಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು ಗುರುವಾರ ಇಂಗ್ಲೆಂಡ್ ವಿರುದ್ಧದ ಟ್ವೆಂಟಿ–20 ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಸೋಲನುಭವಿಸಿತು.

‍ಪ್ರವಾಸಿ ತಂಡವು 2–0ಯಿಂದ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿತು.ಆತಿಥೇಯ ತಂಡವು ಚುಟುಕು ಮಾದರಿಯಲ್ಲಿ ಸತತ ಆರನೇ ಪಂದ್ಯದಲ್ಲಿ ಸೋಲನ್ನು ಅನುಭವಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಸ್ಮೃತಿ ಮಂದಾನ ನಾಯಕತ್ವದ ಬಳಗವು 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳಿಗೆ 111 ರನ್‌ ಗಳಿಸಿತು. ಆದರೆ, ಬೌಲರ್‌ಗಳು ಮಾತ್ರ ಉತ್ತಮವಾಗಿ ಆಡಿದರು. ಎದುರಾಳಿ ತಂಡವು ಸುಲಭ ಜಯ ಸಾಧಿಸಲು ಆಸ್ಪದ ನೀಡಲಿಲ್ಲ. ಡೇನಿಯಲ್ ವೈಟ್ (64; 55ಎಸೆತ) ಮತ್ತು ಲಾರೆನ್ ವಿನ್‌ಫೀಲ್ಡ್‌ (29 ರನ್) ಅವರ ಬ್ಯಾಟಿಂಗ್‌ನಿಂದಾಗಿ ಇಂಗ್ಲೆಂಡ್‌ ತಂಡವು 19.1 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 112 ರನ್‌ ಗಳಿಸಿ ಜಯಿಸಿತು. ವೈಟ್ ಅವರು ಚುಟುಕು ಕ್ರಿಕೆಟ್ ನಲ್ಲಿ ದಾಖಲಿಸಿದ ನಾಲ್ಕನೇ ಅರ್ಧಶತಕ ಇದಾಗಿದೆ.

ADVERTISEMENT

ಇಲ್ಲಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಅನುಭವಿ ಬೌಲರ್ ಕ್ಯಾಥರಿನ್ ಬ್ರಂಟ್ (17ಕ್ಕೆ3) ಅವರು ಭಾರತದ ನಾಯಕಿ ಸ್ಮೃತಿ ಮಂದಾನ (12) ಮತ್ತು ಜೆಮಿಮಾ ರಾಡ್ರಿಗಸ್ (2)ಅವರನ್ನು ಬೇಗ ಪೆವಿಲಿಯನ್‌ಗೆ ಕಳಿಸುವ ಮೂಲಕ ಇಂಗ್ಲೆಂಡ್‌ಗೆ ವಿಜಯದ ಹಾದಿ ತೋರಿಸಿದರು. ಆರಂಭಿಕ ಬ್ಯಾಟ್ಸ್‌ವುಮನ್ ಹರ್ಲಿನ್ ಡಿಯೊಲ್ ಅವರನ್ನು ಎಡಗೈ ಸ್ಪಿನ್ನರ್ ಲಿನ್ಸೆ ಸ್ಮಿತ್ ಔಟ್ ಮಾಡಿದರು. ಇದರಿಂದಾಗಿ ಆತಿಥೇಯ ಬಳಗವು 34 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು.

ಅನುಭವಿ ಬ್ಯಾಟ್ಸ್‌ವುಮನ್ ಮಿಥಾಲಿ ರಾಜ್ (20; 27ಎಸೆತ) ತುಸುಹೋರಾಟ ಮಾಡಿದರು. ಅವರೊಂದಿಗೆ ಭಾರತಿ ಫೂಲ್‌ಮಾಲಿ ಮತ್ತು ದೀಪ್ತಿ ಶರ್ಮಾ ಅವರು ತಲಾ 18 ರನ್ ಗಳಿಸಿ ಸ್ಕೋರ್ ಹೆಚ್ಚಲು ಕಾರಣರಾದರು. ಇದರಿಂದಾಗಿ ಭಾರತ ತಂಡವು 100 ಗಡಿ ದಾಟಿತು. ಇಲ್ಲದಿದ್ದರೆ ಅಲ್ಪಮೊತ್ತಕ್ಕೆ ಪತನ ಕಾಣವು ಸಂಭವವಿತ್ತು.

ಸಣ್ಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಆರಂಭವೇನೂ ಚೆನ್ನಾಗಿರಲಿಲ್ಲ. ಐದನೇ ಓವರ್‌ನಲ್ಲಿಯೇ ಟ್ಯಾಮಿ ಬೆಮೌಂಟ್ ವಿಕೆಟ್ ಕಳೆದುಕೊಂಡ ತಂಡವು ಸಂಕಷ್ಟಕ್ಕೀಡಾಯಿತು. ಎಂಟನೇ ಓವರ್‌ನಲ್ಲಿ ಎಮಿ ಜೋನ್ಸ್‌ ಕೂಡ ಔಟಾದರು. ಬೌಲರ್ ಏಕ್ತಾ ಬಿಷ್ಠ್ ತಮ್ಮ ಎರಡು ಓವರ್‌ಗಳಲ್ಲಿ ನಥಾಲಿಯಾ ಶಿವರ್ ಮತ್ತು ಹೀಥರ್ ನೈಟ್ ಅವರ ವಿಕೆಟ್‌ಗಳನ್ನು ಗಳಿಸಿ ಮಧ್ಯಮ ಕ್ರಮಾಂಕಕ್ಕೆ ಪೆಟ್ಟುಕೊಟ್ಟರು. ಇದರಿಂದಾಗಿ ತಂಡವು 10.4 ಓವರ್‌ಗಳಲ್ಲಿ 56 ರನ್‌ಗಳಿಗೆ 4 ವಿಕೆಟ್ಗಳನ್ನು ಕಳೆದುಕೊಂಡಿತು. ಆದರೆ ಮತ್ತೊಂದೆಡೆ ದಿಟ್ಟತನದಿಂದ ಆಡುತ್ತಿದ್ದ ಡೇನಿಯಲ್ ವೈಟ್ ಅವರೊಂದಿಗೆ ಸೇರಿದ ವಿನ್‌ಫೀಲ್ಡ್‌ ಐದನೇ ವಿಕೆಟ್‌ಗೆ 47 ರನ್‌ ಸೇರಿಸಿದರು. ಆದರೂ ರನ್‌ ಗಳಿಕೆಯ ವೇಗ ಕಡಿಮೆಯ ಇತ್ತು. ಭಾರತದ ಗೆಲುವಿನ ಆಸೆ ಇನ್ನೂ ಇತ್ತು. ಆದರೆ ವಿನ್‌ಫೀಲ್ಡ್‌ ಅವರು ಒಂದೇ ಓವರ್‌ನಲ್ಲಿ ಸತತ ಮೂರು ಬೌಂಡರಿ ಬಾರಿಸುವ ಮೂಲಕ ತಮ್ಮ ತಂಡವನ್ನು ಜಯದ ಹಾದಿಗೆ ತಂದು ನಿಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.