ಶಾರ್ಜಾ (ಪಿಟಿಐ): ಶ್ರೀಲಂಕಾ ತಂಡದ ಸವಾಲನ್ನು ಸುಲಭವಾಗಿ ಅಡಗಿಸಿದ ಉತ್ಸಾಹದಲ್ಲಿರುವ ಭಾರತ ತಂಡಕ್ಕೆ ಮಹಿಳೆಯರ ಟಿ20 ವಿಶ್ವಕಪ್ ಕೊನೆಯ ಲೀಗ್ ಪಂದ್ಯದಲ್ಲಿ ಪ್ರಬಲ ಎದುರಾಳಿಯ ಸವಾಲು ಕಾದಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಭಾನುವಾರ ನಡೆಯಲಿರುವ ಅಂತಿಮ ಲೀಗ್ ಪಂದ್ಯ ನಾಕೌಟ್ ಪ್ರವೇಶದ ದೃಷ್ಟಿಯಿಂದ ಭಾರತದ ಪಾಲಿಗೆ ಮಾಡು–ಇಲ್ಲವೇ– ಮಡಿ ಎಂಬ ರೀತಿಯಲ್ಲಿದೆ.
ನ್ಯೂಜಿಲೆಂಡ್ ಎದುರು ಆರಂಭದ ಪಂದ್ಯ ಸೋತು ಹಿನ್ನಡೆ ಕಂಡಿದ್ದ ಭಾರತಕ್ಕೆ, ಲಂಕಾ ವಿರುದ್ಧ 82 ರನ್‌ಗಳ ಭರ್ಜರಿ ಗೆಲುವು ಸೆಮಿಫೈನಲ್ ಸಾಧ್ಯತೆಗೆ ಬಲತುಂಬಿದೆ. ಮುಖ್ಯವಾಗಿ ರರೇಟ್ ಸುಧಾರಣೆಯಾಗಿದ್ದು ‘ಎ’ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿದೆ.
ಒಂದೆಡೆ, ಆಸ್ಟ್ರೇಲಿಯಾ ಮೂರು ಪಂದ್ಯಗಳಿಂದ ಆರು ಪಾಯಿಂಟ್ಸ್ ಸಂಗ್ರಹಿಸಿ (ನಿವ್ವಳ ರನ್ ದರ: +2.786) ನಾಕೌಟ್ ಖಚಿತಪಡಿಸಿಕೊಂಡಿದೆ. ಇನ್ನೊಂದೆಡೆ, ಗುಂಪಿನಿಂದ ಎರಡನೇ ತಂಡವಾಗಿ ಸೆಮಿಫೈನಲ್ ಸ್ಥಾನ ಪಡೆಯಲು ಭಾರತ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪೈಪೋಟಿಯಿದೆ.
ಆದರೆ, ಅಜೇಯ ಆಸ್ಟ್ರೇಲಿಯಾ ತಂಡಕ್ಕೆ ಗಾಯಾಳುಗಳ ಸಮಸ್ಯೆ ಕಾಡುತ್ತಿದೆ. ನಾಯಕಿ ಅಲಿಸಾ ಹೀಲಿ ಶುಕ್ರವಾರ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಬಲಗಾಲಿನಲ್ಲಿ ಕಾಣಿಸಿಕೊಂಡ ತೀವ್ರ ನೋವಿನ ಪರಿಣಾಮ ಅರ್ಧದಲ್ಲೇ ಫೀಲ್ಡ್‌ನಿಂದ ನಿರ್ಗಮಿಸಿದ್ದರು. ವೇಗದ ಬೌಲರ್ ಟೈಲಾ ವ್ಲೇಮಿಂಗ್ ಅವರಿಗೆ ಭುಜದ ಕೀಲುನೋವು ಕಾಡಿದೆ. ಇವರಿಬ್ಬರು ಈ ಪಂದ್ಯದಲ್ಲಿ ಆಡುವುದು ಅನುಮಾನ. ಹೀಗಾಗಿ ಆಸ್ಟ್ರೇಲಿಯಾದ ‘ಬೆಂಚ್ ಸಾಮರ್ಥ್ಯ’ಕ್ಕೆ ಈ ಪಂದ್ಯ ಪರೀಕ್ಷೆಯಾಗಿದೆ.
ಪಾಕಿಸ್ತಾನ ತನ್ನ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದ್ದು, ಆ ಪಂದ್ಯದಲ್ಲಿ ಪಾಕ್ ಗೆದ್ದರೆ ಮತ್ತು ಭಾರತವು, ಆಸ್ಟ್ರೇಲಿಯಾ ಎದುರು ಸೋತಲ್ಲಿ ಮೂರು ತಂಡಗಳ ನಡುವೆ ಸೆಮಿಫೈನಲ್ ಪೈಪೋಟಿ ಏರ್ಪಡಲಿದೆ. ಆಗ ನಿವ್ವಳ ರನ್ ದರ ನಿರ್ಣಾಯಕವಾಗಲಿದೆ.
ಹೀಗಾಗಿ ಹರ್ಮನ್‌ಪ್ರೀತ್ ಬಳಗ, ಗೆಲುವಿಗೆ ತೀವ್ರ ಪ್ರಯತ್ನ ನಡೆಸಬೇಕಾಗಿದೆ. ಜೊತೆಗೆ ನ್ಯೂಜಿಲೆಂಡ್ ಮಹಿಳೆಯರಿಂದ ಸಂಭವನೀಯ ಅಪಾಯ ನಿವಾರಿಸಲು ರನ್‌ರೇಟ್ ಕೂಡ ಸುಧಾರಿಸಬೇಕಾಗಿದೆ.
ಅಗ್ರ ಆಟಗಾರ್ತಿಯರಾದ ಶಫಾಲಿ ವರ್ಮಾ, ಸ್ಮೃತಿ ಮಂದಾನ, ನಾಯಕಿ ಹರ್ಮನ್‌ಪ್ರೀತ್ ಅವರು ಲಯ ಕಂಡುಕೊಂಡಿರುವುದು ಸಕಾರಾತ್ಮಕ ಅಂಶ. ಶಾರ್ಜಾದಲ್ಲಿ ಭಾರತ ಮೊದಲ ಬಾರಿ ಆಡುತ್ತಿದ್ದು, ಇಲ್ಲಿನ ಪಿಚ್‌ನಲ್ಲಿ ಬ್ಯಾಟರ್‌ಗಳಿಗೆ ಸವಾಲಿನದ್ದು. ಹೀಗಾಗಿ ಮೇಲಿನ ಮೂವರ ಜೊತೆ ರನ್ ಬರ ಎದುರಿಸುತ್ತಿರುವ ಜೆಮಿಮಾ ರಾಡ್ರಿಗಸ್ ಮೇಲೂ ಹೆಚ್ಚು ಹೊಣೆಯಿದೆ.
ಪಾಕ್ ಮತ್ತು ನ್ಯೂಜಿಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಬೌಲರ್‌ಗಳು ಉತ್ಸಾಹದಿಂದ ಇದ್ದಾರೆ.
ಆಲಿಸಾ ಹೀಲಿ ಅಲಭ್ಯರಾದಲ್ಲಿ, ಹೊಸ ನಾಯಕಿ, ವಿಕೆಟ್ ಕೀಪರ್, ಆರಂಭ ಆಟಗಾರ್ತಿಯರನ್ನು ತಂಡ ಕಂಡುಕೊಳ್ಳಬೇಕಿದೆ. ಅನುಭವಿ ಬೆತ್ ಮೂನಿ ವಿಕೆಟ್ ಕೀಪಿಂಗ್ ಹೊಣೆ ವಹಿಸಲಿದ್ದಾರೆ. ತಹ್ಲಿಯಾ ಮೆಕ್‌ಗ್ರಾತ್ ತಂಡದ ನಾಯಕತ್ವ ವಹಿಸುವ ನಿರೀಕ್ಷೆಯಿದೆ.
‘ಈ ಆಸ್ಟ್ರೇಲಿಯಾ ತಂಡದ ವಿಶೇಷವೆಂದರೆ ನಾವು ಹೊಂದಿರುವ ಪ್ರಬಲ ಬೆಂಚ್ ಪಡೆ. ಅದನ್ನು ಬಳಸಲು ಈಗ ಸಕಾಲ’ ಎಂದು ತಹ್ಲಿಯಾ ಹೇಳಿದ್ದಾರೆ.
ಪಂದ್ಯ ಆರಂಭ: ರಾತ್ರಿ 7.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.