ADVERTISEMENT

ದಕ್ಷಿಣ ಆಫ್ರಿಕಾ ವಿರುದ್ಧ ODI ಕ್ರಿಕೆಟ್ ಸರಣಿ: ಕನ್ನಡಿಗ KL ರಾಹುಲ್‌ಗೆ ಪರೀಕ್ಷೆ

ಕ್ರಿಕೆಟ್: ಭಾರತ–ದಕ್ಷಿಣ ಆಫ್ರಿಕಾ ಮೊದಲ ಏಕದಿನ ಇಂದು

ಪಿಟಿಐ
Published 16 ಡಿಸೆಂಬರ್ 2023, 20:59 IST
Last Updated 16 ಡಿಸೆಂಬರ್ 2023, 20:59 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   

ಇನ್ಪುಟ್: ಜೋಹಾನ್ಸ್‌ಬರ್ಗ್:ಕನ್ನಡಿಗ ಕೆ.ಎಲ್. ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಈ ಸರಣಿಯ ಮೊದಲ ಪಂದ್ಯವು ಭಾನುವಾರ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೋದ ತಿಂಗಳು ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ನಂತರ ತಂಡವು ಆಡುತ್ತಿರುವ ಮೊದಲ ಏಕದಿನ ಪಂದ್ಯ ಇದಾಗಿದೆ.

ಅಹಮದಾಬಾದ್‌ನಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಭಾರತ ಸೋತಿತ್ತು. ಅದರ ನಂತರ ರಾಹುಲ್ ಕೂಡ ವಿಶ್ರಾಂತಿಗೆ ತೆರಳಿದ್ದರು. ಆ ಟೂರ್ನಿಯಲ್ಲಿ ರಾಹುಲ್ ವಿಕೆಟ್‌ಕೀಪಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದರು. ಅಲ್ಲದೇ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದರು.

ADVERTISEMENT

ಮುಂದಿನ ವರ್ಷ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆಯಲಿದೆ. ಆದ್ದರಿಂದ ಈಗ ಏಕದಿನ ಕ್ರಿಕೆಟ್ ಸರಣಿ ಆಯೋಜಿಸಿರುವುದರ ಬಗ್ಗೆ ಟೀಕೆಗಳೂ ವ್ಯಕ್ತವಾಗಿವೆ. ಆದರೆ 2025ರಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಆಡುವ ತಂಡ ಕಟ್ಟಲು ಈಗಿನಿಂದಲೇ ತಯಾರಿ ಮಾಡಲು ಈ ಸರಣಿ ಮುಖ್ಯ ಎಂದೂ ಹೇಳಲಾಗಿದೆ.

ತಮ್ಮ ವೃತ್ತಿಜೀವನದ ಸಂಧ್ಯಾಕಾಲದಲ್ಲಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದ ನಿಧಾನಕ್ಕೆ ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಆದ್ದರಿಂದಲೇ ಅವರು ಕಳೆದ ಎರಡು ಟಿ20 ಸರಣಿಯಲ್ಲಿ ಆಡಿರಲಿಲ್ಲ. ಈ ಏಕದಿನ ಸರಣಿಯಲ್ಲಿ ಆಡುತ್ತಿಲ್ಲ. ಭವಿಷ್ಯದಲ್ಲಿ ಅವರ ಸ್ಥಾನಗಳನ್ನು ತುಂಬುವ ಸಮರ್ಥ ಯುವ ಆಟಗಾರರ ಹುಡುಕಾಟವೂ ಈಗ ಆರಂಭವಾಗಿದೆ.

ರಾಹುಲ್, ಶ್ರೇಯಸ್ ಅಯ್ಯರ್, ಋತುರಾಜ್ ಗಾಯಕವಾಡ್ ಸೇರಿದಂತೆ ಕೆಲವು ಆಟಗಾರರು ಈ ಪೈಪೋಟಿಯಲ್ಲಿದ್ದಾರೆ. ಈ ಸರಣಿಯಲ್ಲಿ ಭಾರತವು ಜಯಿಸಿದರೆ, ರಾಹುಲ್ ಭವಿಷ್ಯದ ನಾಯಕನಾಗುವ ಅವಕಾಶದ ಬಾಗಿಲು ತೆರೆಯಲಿದೆ. ಈ ಹಿಂದೆಯೂ ಕೆಲವು ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ಅನುಭವ ಅವರಿಗೆ ಇದೆ.

ಈಚೆಗೆ ಮುಗಿದ ದಕ್ಷಿಣ ಆಫ್ರಿಕಾ ಎದುರಿನ   ಟಿ20 ಸರಣಿಯಲ್ಲಿ ಭಾರತವು 1–1ರ ಸಮಬಲ ಸಾಧಿಸಿತ್ತು.  ರಿಂಕು ಸಿಂಗ್ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಅವರು ಮತ್ತು ತಿಲಕ್ ವರ್ಮಾ ಈ ಸರಣಿಯಲ್ಲಿಯೂ ಸ್ಥಾನ ಪಡೆದಿದ್ದಾರೆ. ಕೇರಳದ ಸಂಜು ಸ್ಯಾಮ್ಸನ್ ಎರಡನೇ ವಿಕೆಟ್‌ಕೀಪರ್ ಆಗಿದ್ದಾರೆ. ದೀಪಕ್ ಚಾಹರ್ ಗಾಯಗೊಂಡು ಹೊರಬಿದ್ದ ಕಾರಣ ಆಕಾಶ್ ದೀಪ್ ಸ್ಥಾನ ಪಡೆದಿದ್ದಾರೆ.

ಆತಿಥೇಯ ತಂಡವು ತವರಿನಲ್ಲಿ ಸರಣಿ ಜಯದ ಛಲದಲ್ಲಿದೆ. ಏಡನ್ ಮರ್ಕರಂ ನಾಯಕತ್ವದ ತಂಡದಲ್ಲಿ ಸ್ಪಿನ್ನರ್ ಕೇಶವ್ ಮಹಾರಾಜ, ತಬ್ರೇಜ್ ಶಂಶಿ, ಬ್ಯಾಟರ್‌ಗಳಾದ ಹೆನ್ರಿಚ್ ಕ್ಲಾಸನ್, ರೀಜಾ ಹೆನ್ರಿಕ್ಸ್ ಮತ್ತು ಡೇವಿಡ್ ಮಿಲ್ಲರ್ ಅವರು ಪಂದ್ಯ ಗೆಲ್ಲಿಸಬಲ್ಲ ಸಮರ್ಥ ಆಟಗಾರರಾಗಿದ್ದಾರೆ. ಈ ತಂಡದಲ್ಲಿಯೂ ಕೆಲವು ಯುವ ಆಟಗಾರರು ತಮ್ಮ ಪ್ರತಿಭೆ ಮೆರಯಲು ಸಿದ್ಧರಾಗಿದ್ದಾರೆ.

ಬಲಾಬಲ

ಪಂದ್ಯಗಳು: 91

ಭಾರತ ಜಯ: 38

ದ.ಆಫ್ರಿಕಾ ಜಯ: 50

ಫಲಿತಾಂಶವಿಲ್ಲ;3

ದಕ್ಷಿಣ ಆಫ್ರಿಕಾ ತಂಡದ ನಾಯಕ ಏಡನ್ ಮರ್ಕರಂ  –ಪಿಟಿಐ ಚಿತ್ರ

ತಂಡಗಳು

ಭಾರತ: ಕೆ.ಎಲ್. ರಾಹುಲ್ (ನಾಯಕ/ವಿಕೆಟ್‌ಕೀಪರ್) ಋತುರಾಜ್ ಗಾಯಕವಾಡ್ ಸಾಯಿ ಸುದರ್ಶನ್ ತಿಲಕ್ ವರ್ಮಾ ರಜತ್ ಪಾಟೀದಾರ್ ರಿಂಕು ಸಿಂಗ್ ಶ್ರೇಯಸ್ ಅಯ್ಯರ್ ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್) ಅಕ್ಷರ್ ಪಟೇಲ್ ವಾಷಿಂಗ್ಟನ್ ಸುಂದರ್ ಕುಲದೀಪ್ ಯಾದವ್ ಯಜುವೇಂದ್ರ ಚಾಹಲ್ ಮುಕೇಶ್ ಕುಮಾರ್ ಆವೇಶ್ ಖಾನ್ ಆರ್ಷದೀಪ್ ಸಿಂಗ್ ಆಕಾಶ್ ದೀಪ್

ದಕ್ಷಿಣ ಆಫ್ರಿಕಾ: ಏಡನ್ ಮರ್ಕರಂ (ನಾಯಕ) ಒಟ್ನೀಲ್ ಬಾರ್ಥ್‌ಮನ್ ನಾಂದ್ರೆ ಬರ್ಗರ್ ಟೋನಿ ಡಿ ಝಾರ್ಜಿ ರೀಜಾ ಹೆನ್ರಿಕ್ಸ್ ಹೆನ್ರಿಚ್ ಕ್ಲಾಸೆನ್ ಕೇಶವ್ ಮಹಾರಾಜ್ ಮಿಹಾಲಾಲಿ ಎಂಪಾಂಗ್ವಾನಾ ಡೇವಿಡ್ ಮಿಲ್ಲರ್ ವಿಯಾನ್ ಮುಲ್ಡರ್ ಆ್ಯಂಡಿಲೆ ಪಿಶುವಾಯೊ ತಬ್ರೇಜ್ ಶಂಸಿ ರಸಿ ವ್ಯಾನ್ ಡೆರ್ ಡಸೆ ಕೈಲ್ ವೆರೆಯನ್ ಲಿಜಾದ್ ವಿಲಿಯಮ್ಸ್ ಪಂದ್ಯ ಆರಂಭ: ಮಧ್ಯಾಹ್ನ 1.30 ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್.

ಮೊಹಮ್ಮದ್ ಶಮಿ ಅಲಭ್ಯ ಮುಂಬೈ (ಪಿಟಿಐ): ವೇಗಿ ಮೊಹಮ್ಮದ್ ಶಮಿ ಮತ್ತು ದೀಪಕ್ ಚಾಹರ್ ಅವರು ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ. ಸರಣಿಯಲ್ಲಿ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ಪಾದದ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿರುವ ಶಮಿ ವಿಶ್ರಾಂತಿಯಲ್ಲಿದ್ದಾರೆ. ಅವರು ಈಗಲೇ ಆಡಲು ಫಿಟ್‌ ಆಗಿಲ್ಲವೆಂದು ತಂಡದ ವೈದ್ಯರು ಹೇಳಿದ್ದಾರೆ. ಹೋದ ತಿಂಗಳು ಮುಗಿದ ವಿಶ್ವಕಪ್ ಟೂರ್ನಿಯಲ್ಲಿ  ಶಮಿ ಅಮೋಘ ಬೌಲಿಂಗ್ ಮಾಡಿದ್ದರು. ಹಿಂದೆ ಸರಿದ ದೀಪಕ್‌: ಮಧ್ಯಮವೇಗಿ ದೀಪಕ್ ಚಾಹರ್ ಅವರು ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ. ತಮ್ಮ ಕುಟುಂಬದಲ್ಲಿ ತುರ್ತು ವೈದ್ಯಕೀಯ ಪರಿಸ್ಥಿತಿ ಇರುವುದರಿಂದ ತಾವು ಸರಣಿಯಲ್ಲಿ ಆಡುವುದಿಲ್ಲವೆಂದು ದೀಪಕ್ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ. ಅವರ ಬದಲಿಗೆ ಆಕಾಶ್ ದೀಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕೋಚ್ ದ್ರಾವಿಡ್ ಟೆಸ್ಟ್‌ ಸಿದ್ಧತೆ  ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನೆರವು ಸಿಬ್ಬಂದಿಯು ಟೆಸ್ಟ್ ಸರಣಿಯಲ್ಲಿ ಆಡುವ ತಂಡದೊಂದಿಗೆ ಕಾರ್ಯನಿರ್ವಹಿಸುವರು. ಏಕದಿನ ಸರಣಿಯಲ್ಲಿ ಆಡುವ ತಂಡಕ್ಕೆ ಅವರ ಮಾರ್ಗದರ್ಶನ ಲಭ್ಯವಿಲ್ಲ. ದ್ರಾವಿಡ್ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಹಾಗೂ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರು ಟೆಸ್ಟ್ ತಂಡಕ್ಕೆ ಮಾರ್ಗದರ್ಶನ ನೀಡುವರು. ಏಕದಿನ ತಂಡಕ್ಕೆ ‘ಎ‘ ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಬೌಲಿಂಗ್ ಕೋಚ್ ರಾಜೀವ್ ದತ್ತಾ ಮತ್ತು ಫೀಲ್ಡಿಂಗ್ ತರಬೇತುದಾರ ಅಜಯ್ ರಾತ್ರಾ ಕಾರ್ಯನಿರ್ವಹಿಸುವರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.