ADVERTISEMENT

ಇಂಗ್ಲೆಂಡ್ ಎದುರಿನ ಏಕದಿನ ಸರಣಿ: ಜಯದ ಮುನ್ನುಡಿಗೆ ಭಾರತ ಕಾತರ

ಇಂಗ್ಲೆಂಡ್ ಎದುರಿನ ಏಕದಿನ ಸರಣಿ ಮಂಗಳವಾರ ಆರಂಭ; ಶಿಖರ್ ಧವನ್ ಮೇಲೆ ಎಲ್ಲರ ಕಣ್ಣು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 19:45 IST
Last Updated 22 ಮಾರ್ಚ್ 2021, 19:45 IST
ಸೋಮವಾರ ಅಭ್ಯಾಸದ ನಡುವೆ ಭಾರತ ತಂಡದ ರೋಹಿತ್ ಶರ್ಮಾ (ಮುಂದೆ ಇರುವವರು) ಮತ್ತು ಟಿ.ನಟರಾಜನ್ –ಪಿಟಿಐ ಚಿತ್ರ
ಸೋಮವಾರ ಅಭ್ಯಾಸದ ನಡುವೆ ಭಾರತ ತಂಡದ ರೋಹಿತ್ ಶರ್ಮಾ (ಮುಂದೆ ಇರುವವರು) ಮತ್ತು ಟಿ.ನಟರಾಜನ್ –ಪಿಟಿಐ ಚಿತ್ರ   

ಪುಣೆ: ಟೆಸ್ಟ್ ಮತ್ತು ಚುಟುಕು ಕ್ರಿಕೆಟ್‌ನಲ್ಲಿ ಅಮೋಘ ಸಾಧನೆ ಮಾಡಿ ಸರಣಿ ಗೆದ್ದಿರುವ ಭಾರತ ತಂಡ ಇಂಗ್ಲೆಂಡ್ ಎದುರಿನ ಏಕದಿನ ಕ್ರಿಕೆಟ್ ಸರಣಿಗೆ ಸಜ್ಜಾಗಿದ್ದು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಮೂರು ಪಮದ್ಯಗಳ ಸರಣಿಯ ಮೊದಲ ಹಣಾಹಣಿ ಮಂಗಳವಾರ ನಡೆಯಲಿದೆ.

ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಟೆಸ್ಟ್ ಮತ್ತು ಟಿ20 ಸರಣಿಯಲ್ಲಿ ಅನುಭವಿಸಿದ ಸೋಲಿನಿಂದ ಕಂಗೆಟ್ಟಿದೆ. ಆದ್ದರಿಂದ ತಿರುಗೇಟು ನೀಡುವ ಗುರಿಯೊಂದಿಗೆ ಕಣಕ್ಕೆ ಇಳಿಯಲಿದ್ದು ಭಾರತ ಶುಭಾರಂಭದ ನಿರೀಕ್ಷೆಯಲ್ಲಿದೆ. ಆದರೆ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಕಳಪೆ ಫಾರ್ಮ್ ತಂಡದಲ್ಲಿ ಆತಂಕ ಮೂಡಿಸಿದೆ. ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಕಳಪೆ ಆಟವಾಡಿದ ಧವನ್ ಉಳಿದ ಪಂದ್ಯಗಳಲ್ಲಿ ಬೆಂಚು ಕಾದಿದ್ದರು. ತಂಡದ ಆಡಳಿತದ ಮುಂದೆ ಈಗ ಸಾಕಷ್ಟು ಆಯ್ಕೆಗಳಿವೆ. ತಂಡದ ಒಳಗೇ ಇರುವ ಶುಭಮನ್ ಗಿಲ್‌, ಹೊರಗಿರುವ ಪೃಥ್ವಿ ಶಾ ಮತ್ತು ದೇವದತ್ತ ಪಡಿಕ್ಕಲ್ ಮೇಲೆ ಕಣ್ಣಿಟ್ಟಿರುವುದರಿಂದ ಧವನ್ ಅಸ್ತಿತ್ವ ಉಳಿಸಿಕೊಳ್ಳಲು ಈ ಪಂದ್ಯದಲ್ಲಿ ಉತ್ತಮ ಸಾಮರ್ಥ್ಯ ತೋರಲೇಬೇಕು.

ಈ ವರ್ಷ ವಿಶ್ವದಲ್ಲಿ ಯಾವುದೇ ಪ್ರಮುಖ ಏಕದಿನ ಟೂರ್ನಿ ಇಲ್ಲ. ಆದ್ದರಿಂದ ಈ ಸರಣಿ ಅಷ್ಟೊಂದು ಮಹತ್ವ ಪಡೆದುಕೊಂಡಿಲ್ಲ. ಭಾರತಕ್ಕೆ ಈ ಸರಣಿಯನ್ನು ವಿಶ್ವಕಪ್‌ ಟೂರ್ನಿಯ ಸಿದ್ಧತೆಗಳ ಮುಂದುವರಿದ ಭಾಗ ಎಂದೇ ತಿಳಿದು ಆಡಲಿದೆ.

ADVERTISEMENT

ನಾಯಕ ವಿರಾಟ್ ಕೊಹ್ಲಿ ಈಗ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಟಿ20 ಸರಣಿಯಲ್ಲಿ ಅವರು ಭರ್ಜರಿ ಬ್ಯಾಟಿಂಗ್ ಮಾಡಿ ಮಿಂಚಿದ್ದಾರೆ. ಅದೇ ಲಯದಲ್ಲಿ ಇಲ್ಲೂ ಆಡುವ ನಿರೀಕ್ಷೆ ಇದೆ. ಏಕದಿನ ಕ್ರಿಕೆಟ್‌ನಲ್ಲಿ 2019ರಲ್ಲಿ ಕೊಹ್ಲಿ ಕೊನೆಯದಾಗಿ ಶತಕ ಸಿಡಿಸಿದ್ದರು. ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 114 ರನ್ ಗಳಿಸಿದ್ದರು.

ಕೆ.ಎಲ್‌.ರಾಹುಲ್ ಅಗ್ರ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವುದು ಸಂದೇಹ. ಮಧ್ಯಮ ಕ್ರಮಾಂಕದಲ್ಲಿ ಅವರು ಆಡಿದರೆ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ಬಲ ತುಂಬಲಿದೆ. ಮುಂಬೈನವರಾದ ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಪೈಕಿ ಯಾರಿಗೆ ಮಣೆ ಹಾಕಬೇಕು ಎಂಬ ಗೊಂದಲ ತಂಡವನ್ನು ಕಾಡಬಹುದು.

ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್‌ ಅವರ ಶಕ್ತಿ ವರ್ಧಿಸಲು ಶಾರ್ದೂಲ್ ಠಾಕೂರ್ ಇದ್ದಾರೆ. ಕೊಹ್ಲಿ ಮೆಚ್ಚುಗೆಗೆ ಪಾತ್ರರಾಗಿರುವ ಕರ್ನಾಟಕದ ಪ್ರಸಿದ್ಧ ಕೃಷ್ಣ ಅಂತಿಮ 11ರಲ್ಲಿ ಸ್ಥಾನ ಗಳಿಸುವ ಸಾಧ್ಯತೆ ನಿಚ್ಚಳವಾಗಿದೆ. ಸ್ಪಿನ್ನರ್‌ಗಳ ಪೈಕಿ ಕೃಣಾಲ್ ಪಾಂಡ್ಯ ಮತ್ತು ಕುಲದೀಪ್ ಯಾದವ್ ಬದಲಿಗೆ ಯಜುವೇಂದ್ರ ಚಾಹಲ್ ಮತ್ತು ವಾಷಿಂಗ್ಟನ್ ಸುಂದರ್‌ಗೆ ಸ್ಥಾನ ಸಿಗಬಹುದು.

ಇಂಗ್ಲೆಂಡ್‌ ತಂಡ ಭಾರತ ಪ್ರವಾಸದ ಕೊನೆಯ ಸರಣಿಯಲ್ಲಿ ಜಯದ ಸಿಹಿ ಹೊತ್ತುಕೊಂಡು ತವರಿಗೆ ಮರಳುವ ಪ್ರಯತ್ನ ನಡೆಸಲಿದೆ. ಜೋಸ್ ಬಟ್ಲರ್‌, ಜೇಸನ್ ರಾಯ್ ಮತ್ತು ಬೆನ್ ಸ್ಟೋಕ್ಸ್ ತಂಡದ ಆಧಾರ. ನೋವಿನಿಂದ ಬಳಲುತ್ತಿರುವ ಜೊಫ್ರಾ ಆರ್ಚರ್ ಬದಲಿಗೆ ಬೌಲಿಂಗ್ ವಿಭಾಗದ ಜವಾಬ್ದಾರಿ ಮಾರ್ಕ್‌ ವುಡ್, ಕ್ರಿಸ್ ಜೋರ್ಡಾನ್ ಮತ್ತು ಸ್ಯಾಮ್ ಕರನ್ ಮೇಲಿದೆ. ಟಿ20 ಸರಣಿಯಲ್ಲಿ ಭಾರತದ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಲು ಸಾಧ್ಯವಾಗದ ಸ್ಪಿನ್ನರ್‌ಗಳಾದ ಮೋಯಿನ್ ಅಲಿ ಮತ್ತು ಆದಿಲ್ ರಶೀದ್‌ಗೆ ಈ ಸರಣಿ ಸವಾಲಿನದ್ದಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.