ADVERTISEMENT

ಏಕದಿನ ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ: ಹುಮ್ಮಸ್ಸಿನಿಂದ ವಿಶ್ವಕಪ್‌ನತ್ತ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2023, 7:59 IST
Last Updated 25 ಸೆಪ್ಟೆಂಬರ್ 2023, 7:59 IST
   

ಇಂದೋರ್: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಎರಡು ಪಂದ್ಯಗಳನ್ನು ಜಯಿಸಿರುವ ಭಾರತ ತಂಡ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದು, ವಿಶ್ವಕಪ್ ಕ್ರೀಡಾಕೂಟಕ್ಕೆ ಲಗ್ಗೆ ಇಡಲು ಸಜ್ಜಾಗಿದೆ.

ಆಸ್ಟ್ರೇಲಿಯಾ ಸರಣಿ ಆರಂಭಕ್ಕೂ ಮುನ್ನ ಭಾರತ ಏಕದಿನ ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಲು ಎರಡು ಪಂದ್ಯ ಗೆಲ್ಲಬೇಕಾದ ಅಗತ್ಯ ಇತ್ತು. ಇದೀಗ, ಸರಣಿಯ ಮೊದಲ ಎರಡು ಪಂದ್ಯ ಗೆದ್ದಿರುವ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳುವ ಜೊತೆಗೆ ರ್‍ಯಾಂಕಿಂಗ್‌ನಲ್ಲೂ ಅಗ್ರ ಸ್ಥಾನಕ್ಕೇರಿದೆ.

ಟೆಸ್ಟ್ ಮತ್ತು ಟಿ–20 ರ್‍ಯಾಂಕಿಂಗ್‌ನಲ್ಲಿ ಈಗಾಗಲೇ ಅಗ್ರಸ್ಥಾನ ಕಾಯ್ದುಕೊಂಡಿರುವ ಭಾರತ ತಂಡ 117 ಪಾಯಿಂಟ್ಸ್‌ಗಳೊಂದಿಗೆ ಏಕದಿನ ಕ್ರಿಕೆಟ್‌ನಲ್ಲೂ ಆಧಿಪತ್ಯ ಸಾಧಿಸಿದೆ. 115 ಪಾಯಿಂಟ್ಸ್‌ ಗಳಿಸಿರುವ ಪಾಕಿಸ್ತಾನ 2ನೇ ಸ್ಥಾನಕ್ಕೆ ಮತ್ತು 110 ಪಾಯಿಂಟ್ಸ್ ಇರುವ ಆಸ್ಟ್ರೇಲಿಯಾ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿವೆ.

ADVERTISEMENT

ಎಲ್ಲ ಮಾದರಿಯ ಕ್ರಿಕೆಟ್‌ನ ರ್‍ಯಾಂಕಿಂಗ್‌ನಲ್ಲಿ ತಂಡವೊಂದು ಅಗ್ರಸ್ಥಾನಕ್ಕೇರಿರುವುದು ಇದು ಎರಡನೇ ಬಾರಿಯಾಗಿದೆ. ಆಗಸ್ಟ್ 2012ರಲ್ಲಿ ದಕ್ಷಿಣ ಆಫ್ರಿಕಾ ಈ ಸಾಧನೆ ಮಾಡಿತ್ತು.

ಇಂದೋರ್‌ನಲ್ಲಿ ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 99 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ತಂಡ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 399 ರನ್ ಗಳಿಸಿತ್ತು. ಮಳೆ ಸುರಿದ ಕಾರಣ ಡಕ್ವರ್ಥ್ ಲೂಯಿಸ್ ನಿಯಮದನ್ವಯ ಗುರಿಯನ್ನು ಪರಿಷ್ಕರಿಸಲಾಯಿತು. 33 ಓವರ್‌ಗಳಲ್ಲಿ 317 ರನ್‌ಗಳ ಗುರಿ ನಿಗದಿ ನೀಡಲಾಯಿತು. ಆದರೆ, ಭಾರತದ ಬೌಲರ್‌ಗಳ ದಾಳಿಯ ಮುಂದೆ ಆಸ್ಟ್ರೇಲಿಯಾ ತಂಡವು 28.2 ಓವರ್‌ಗಳಲ್ಲಿ 217 ರನ್‌ ಗಳಿಸಿ ಆಲೌಟ್ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.