ಪರ್ತ್: ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲನೇ ದಿನ ಹದಿನೇಳು ವಿಕೆಟ್‌ಗಳು ಪತನಗೊಂಡಿದ್ದ ಅಂಕಣದಲ್ಲಿ ಎರಡನೇ ದಿನ ಬ್ಯಾಟ್ ಮತ್ತು ಚೆಂಡಿನ ಹದವಾದ ಪೈಪೋಟಿ ಮನಮುದಗೊಳಿಸಿತು. ಈ ದಿನ ಕೇವಲ ಮೂರು ವಿಕೆಟ್‌ಗಳು ಪತನವಾದವು. ಅದಕ್ಕೆ ಕ್ರಿಕೆಟ್ ಆಟವನ್ನು ‘ಮಹಾನ್ ಸಮಾನತೆಯ ವೇದಿಕೆ’ ಎಂದು ಕರೆಯಲಾಗುತ್ತದೆ.
ಶನಿವಾರ ಬೆಳಿಗ್ಗೆ ಆಸ್ಟ್ರೇಲಿಯಾ ತಂಡದ ಕೊನೆಯ 3 ವಿಕೆಟ್ ಉರುಳಿಸಲು ಭಾರತದ ಬೌಲರ್‌ಗಳೂ 25 ಓವರ್‌ಗಳನ್ನು ಹಾಕಿದರು. ಶುಕ್ರವಾರ ದಿನದಾಟದ ಮುಕ್ತಾಯಕ್ಕೆ ಆತಿಥೇಯ ತಂಡವು 27 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ 46 ರನ್‌ಗಳ ಹಿನ್ನಡೆ ಅನುಭವಿಸಿದ ಆತಿಥೇಯರು ಎರಡನೇ ದಿನದಾಟದ ಮುಕ್ತಾಯದವರೆಗೂ ಹಾಕಿದ 57 ಓವರ್‌ಗಳಲ್ಲಿ ಒಂದೂ ವಿಕೆಟ್ ಗಳಿಸಲು ಸಾಧ್ಯವಾಗಲಿಲ್ಲ.
ಇದರಿಂದಾಗಿ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್ ಭಾರತದ ಹಿಡಿತಕ್ಕೆ ಸಿಕ್ಕಂತಾಗಿದೆ. ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡದ ಬ್ಯಾಟರ್‌ಗಳು ಎಡವಿದ್ದರಿಂದ 150 ರನ್‌ಗಳಿಗೆ ಆಲೌಟ್ ಆಗಿತ್ತು. ಆದರೆ ನಾಯಕ, ವೇಗಿ ಜಸ್‌ಪ್ರೀತ್ ಬೂಮ್ರಾ (30ಕ್ಕೆ5) ಬಿರುಗಾಳಿ ವೇಗಕ್ಕೆ ಆತಿಥೇಯ ತಂಡವು 67 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತು. ಇನಿಂಗ್ಸ್‌ನಲ್ಲಿ ಒಟ್ಟು 104 ರನ್ ಗಳಿಸಿ ಆಲೌಟ್ ಆಯಿತು.
ಇದರಿಂದಾಗಿ ಅತ್ಮವಿಶ್ವಾಸ ತುಂಬಿಕೊಂಡ ಭಾರತ ತಂಡವು ಎರಡನೇ ಇನಿಂಗ್ಸ್‌ನಲ್ಲಿ 57 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 172 ರನ್ ಕಲೆಹಾಕಿತು. ಒಟ್ಟು 218 ರನ್‌ಗಳ ಮುನ್ನಡೆ ಸಾಧಿಸಿದೆ. ಪಿಚ್ ಕೂಡ ಬ್ಯಾಟರ್‌ಗಳಿಗೆ ಪೂರ್ಣ ನೆರವು ನೀಡುತ್ತಿದೆ. ಯಶಸ್ವಿ ಜೈಸ್ವಾಲ್ (ಬ್ಯಾಟಿಂಗ್ 90) ಮತ್ತು ಕೆ.ಎಲ್. ರಾಹುಲ್ (ಬ್ಯಾಟಿಂಗ್ 62) ಅವರ ಚೆಂದದ ಆಟ ಕಣ್ಮನ ಸೆಳೆಯುವಂತಿದೆ. ಅದೇ ಆಸ್ಟ್ರೇಲಿಯಾದವರಿಗೆ ಪುಟಿದೇಳುವ ಅವಕಾಶ ನೀಡದ ಮತ್ತು ಅವರಿಗೆ ತುಸು ಬೇಸರ ತರಿಸುವಂತಹ ಆಟವನ್ನು ಭಾರತದ ಜೋಡಿ ಆಡಿತು.
ಊಟ ಮತ್ತು ಚಹಾ ವಿರಾಮದ ಮಧ್ಯದ ಅವಧಿಯಲ್ಲಿ ಈ ಜೋಡಿಯು 86 ರನ್ ಸೇರಿಸಲು 26 ಓವರ್‌ಗಳನ್ನು ಆಡಿತು. ಚಹಾ ವಿರಾಮದ ನಂತರ ಈ ಜೋಡಿಯು ಮತ್ತಷ್ಟು ತಾಳ್ಮೆಯಿಂದ ಆಡಿ, ಎದುರಾಳಿಗಳು ಕಠಿಣ ಶ್ರಮಪಡುವಂತೆ ಮಾಡಿದರು. ಏಕೆಂದರೆ; 17 ಓವರ್‌ಗಳನ್ನು ಆಡಿದ ಇಬ್ಬರೂ ಬ್ಯಾಟರ್‌ಗಳು ಗಳಿಸಿದ್ದು 22 ರನ್ ಮಾತ್ರ. ಈ ಹಂತದಲ್ಲಿ ಇಬ್ಬರೂ ಪಿಚ್‌ನಲ್ಲಿ ಪೂರ್ಣವಾಗಿ ಕಾಲೂರಿದ್ದರು. ಯಾವುದೇ ಹಂತದಲ್ಲಿಯೂ ಗಡಿಬಿಡಿ ಮಾಡಲಿಲ್ಲ. ಯಶಸ್ವಿ, 51 ರನ್ ಗಳಿಸಿದ್ದ ಸಂದರ್ಭದಲ್ಲಿ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಕ್ಯಾಚ್ ಆಗುವ ಸಾಧ್ಯತೆ ಇತ್ತು. ಆದರೆ ಫೀಲ್ಡರ್ ಉಸ್ಮಾನ್ ಖ್ವಾಜಾ ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ.
ಬೆಳಗಿನ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡದ ಹೋರಾಟಕ್ಕೆ ತಡೆಯೊಡ್ಡಲು ದಿನದಾಟದ ಆರಂಭದಲ್ಲಿಯೇ ಬೂಮ್ರಾ ತಮ್ಮ ಶಕ್ತಿ ಪ್ರದರ್ಶಿಸಿದರು. ಆಸ್ಟ್ರೇಲಿಯಾದ ಸಾಲಿನಲ್ಲಿದ್ದ ಕೊನೆಯ ಪರಿಣತ ಬ್ಯಾಟರ್ ಅಲೆಕ್ಸ್ ಕ್ಯಾರಿ ವಿಕೆಟ್ ಕಬಳಿಸಿದರು. ಬೂಮ್ರಾ ಎಸೆತವು ಕ್ಯಾರಿ ಬ್ಯಾಟ್ ಅಂಚು ಸವರಿಕೊಂಡು ಹೋಗಿ ರಿಷಭ್ ಪಂತ್ ಕೈಗವಸು ಸೇರಿಕೊಂಡಿತು. ಇದರೊಂದಿಗೆ ಬೂಮ್ರಾ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 11ನೇ ಸಲ ಐದು ವಿಕೆಟ್ ಗೊಂಚಲು ಗಳಿಸಿದರು. ಆಸ್ಟ್ರೇಲಿಯಾದ ನೆಲದಲ್ಲಿ ಎರಡನೇಯದ್ದು. 2018–19ರಲ್ಲಿ ಮೆಲ್ಬರ್ನ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ 33ಕ್ಕೆ6 ವಿಕೆಟ್ ಗಳಿಸಿದ್ದರು. ಕ್ರೀಸ್‌ಗೆ ಬಂದ ನೇಥನ್ ಲಯನ್ ಅವರನ್ನು ಪದಾರ್ಪಣೆ ಆಟಗಾರ ಹರ್ಷಿತ್ ರಾಣಾ (48ಕ್ಕೆ3) ಪೆವಿಲಿಯನ್‌ಗೆ ಮರಳಿಸಿದರು. ಆದರೆ ಕೊನೆಯ ವಿಕೆಟ್ ಒಲಿಯುವುದು ತುಸು ತಡವಾಯಿತು.
ಮಿಚೆಲ್ ಸ್ಟಾರ್ಕ್ (26; 112ಎಸೆತ, 4X2) ಮತ್ತು ಜೋಶ್ ಹ್ಯಾಜಲ್‌ವುಡ್ ಪಿಚ್‌ನಲ್ಲಿ ಬಿಡಾರ ಹೂಡಲು ನಿರ್ಧರಿಸಿದರು. ಇಬ್ಬರೂ ಸೇರಿ 110 ಎಸೆತಗಳನ್ನು ಎದುರಿಸಿ 25 ರನ್ ಸೇರಿಸಿದರು. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದಾಖಲಾದ ಅತಿ ದೀರ್ಘ ಜೊತೆಯಾಟ ಇದಾಯಿತು. ಆದರೆ ಭಾರತವು ಮುನ್ನಡೆ ಪಡೆಯುವುದನ್ನು ತಡೆಯಲು ಈ ಜೊತೆಯಾಟಕ್ಕೂ ಸಾಧ್ಯವಾಗಲಿಲ್ಲ. ಸ್ಟಾರ್ಕ್ ವಿಕೆಟ್ ಗಳಿಸಿ ಜೊತೆಯಾಟಕ್ಣೆ ತೆರೆ ಎಳೆಯುವಲ್ಲಿ ರಾಣಾ ಸಫಲರಾದರು.
ಮೊದಲ ಇನಿಂಗ್ಸ್
ಭಾರತ: 150 (49.4 ಓವರುಗಳಲ್ಲಿ)
ಆಸ್ಟ್ರೇಲಿಯಾ: 104 (51.2 ಓವರುಗಳಲ್ಲಿ)
(ಶುಕ್ರವಾರ: 7ಕ್ಕೆ67)
ಕ್ಯಾರಿ ಸಿ ಪಂತ್ ಬಿ ಬೂಮ್ರಾ 21 (31ಎ, 4x3)
ಸ್ಟಾರ್ಕ್ ಸಿ ಪಂತ್ ಬಿ ರಾಣಾ 26 (112ಎ, 4x2)
ಲಯನ್ ಸಿ ರಾಹುಲ್ ಬಿ ರಾಣಾ 5 (16ಎ)
ಹೇಜಲ್‌ವುಡ್ ಔಟಾಗದೇ 7 (31ಎ, 4x1)
ಇತರೆ: 5 (ಲೆಗ್‌ಬೈ 1, ನೋಬಾಲ್ 4)
ವಿಕೆಟ್ ಪತನ:8–70 (ಅಲೆಕ್ಸ್ ಕ್ಯಾರಿ, 28.1), 9–79 (ನೇಥನ್ ಲಯನ್, 33.2), 10–104 (ಮಿಚೆಲ್ ಸ್ಟಾರ್ಕ್, 51.2).
ಬೌಲಿಂಗ್: ಜಸ್‌ಪ್ರೀತ್ ಬೂಮ್ರಾ 18–6–30–5; ಮೊಹಮ್ಮದ್ ಸಿರಾಜ್ 13–7–20–2; ಹರ್ಷಿತ್ ರಾಣಾ 15.2–3–48–3; ನಿತೀಶ್ ಕುಮಾರ್ ರೆಡ್ಡಿ 3–0–4–0; ವಾಷಿಂಗ್ಟನ್ ಸುಂದರ್ 2–1–1–0.
ಎರಡನೇ ಇನಿಂಗ್ಸ್
ಭಾರತ: ವಿಕೆಟ್ ನಷ್ಟವಿಲ್ಲದೇ 172
(57 ಓವರುಗಳಲ್ಲಿ)
ಜೈಸ್ವಾಲ್ ಔಟಾಗದೇ 90 (193ಎ, 4x7, 6x2)
ರಾಹುಲ್ ಔಟಾಗದೇ 62 (153ಎ, 4x4)
ಇತರೆ: 20 (ಬೈ 11, ನೋಬಾಲ್ 4, ವೈಡ್ 5)
ಬೌಲಿಂಗ್: ಮಿಚೆಲ್ ಸ್ಟಾರ್ಕ್
12–2–43–0; ಜೋಶ್ ಹ್ಯಾಜಲ್‌ವುಡ್ 10–5–9–0; ಪ್ಯಾಟ್ ಕಮಿನ್ಸ್ 13–2–44–0; ಮಿಚೆಲ್ ಮಾರ್ಷ್ 6–0–27–0; ನೇಥನ್ ಲಯನ್ 13–3–28–0; ಮಾರ್ನಸ್ ಲಾಬುಷೇನ್ 2–0–2–0;
ಟ್ರಾವಿಸ್ ಹೆಡ್ 1–0–8–0
Close
Selected
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.