ಬ್ಲೂಮ್‌ಫೌಂಟೇನ್, ದಕ್ಷಿಣ ಆಫ್ರಿಕಾ: ಭಾರತದ ಯುವಪಡೆಯು ಇಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಬಾಂಗ್ಲಾದೇಶ ತಂಡದ ವಿರುದ್ಧ ಆಡಲಿದೆ.
ಎ ಗುಂಪಿನ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಭಾರತ ತಂಡವು ಉದಯ್ ಸಹರಾನ್ ನಾಯಕತ್ವದಲ್ಲಿ ಆಡಲಿದೆ. ಇದೇ ಗುಂಪಿನಲ್ಲಿ ಐರ್ಲೆಂಡ್ ಮತ್ತು ಅಮೆರಿಕ ತಂಡಗಳೂ ಇವೆ.
2002ರಲ್ಲಿ ಭಾರತ ತಂಡವು ಮೊಹಮ್ಮದ್ ಕೈಫ್ ನಾಯಕತ್ವದಲ್ಲಿ ಮೊದಲ ಬಾರಿಗೆ ಟ್ರೋಫಿ ಜಯಿಸಿತ್ತು. ನಂರ 2008, 2012, 2018 ಮತ್ತು 2022ರಲ್ಲಿ ಜಯಿಸಿತ್ತು.
ಈ ಬಾರಿಯ ತಂಡದಲ್ಲಿ ಕರ್ನಾಟಕದ ಧನುಷ್ ಗೌಡ, ಮಹಾರಾಷ್ಟ್ರದ ಆಲ್‌ರೌಂಡರ್ ಅರಷಿಣ್ ಕುಲಕರ್ಣಿ, ವಿಕೆಟ್‌ಕೀಪರ್ ಅರವೆಲ್ಲಿ ಅವನೀಶ್, ಎಡಗೈ ಸ್ಪಿನ್ನರ್ ಸೌಮ್ಯ ಕುಮಾರ್ ಪಾಂಡೆ ಮತ್ತು ಉದಯ್ ಸಹರಾನ್ ಅವರು ತಂಡಕ್ಕೆ ಗೆಲುವು ತಂದುಕೊಡಬಲ್ಲ ಪ್ರಮುಖರಾಗಿದ್ದಾರೆ.
ಇದರಲ್ಲಿ ಅರಷಿಣ್ ಕುಲಕರ್ಣಿ ಹಾಗೂ ಅವನೀಶ್ ಅವರನ್ನು ಈಚೆಗೆ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕ್ರಮವಾಗಿ ಲಖನೌ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಖರೀದಿಸಿದ್ದವು.
ನಾಯಕ ಸಹರಾನ್, ತಾವು ಆಡಿದ ಕಳೆದ ಮೂರು ಇನಿಂಗ್ಸ್‌ಗಳಲ್ಲಿ ಒಂದು ಶತಕ ಮತ್ತು ಅರ್ಧಶತಕ ಗಳಿಸಿದ್ದಾರೆ.
ಮೂಲತಃ ರಾಜಸ್ಥಾನದ ಸಹರಾನ್ ಅವರು ಹೋದ ನವೆಂಬರ್‌ನಲ್ಲಿ ಪಂಜಾಬ್ ರಾಜ್ಯಕ್ಕೆ ವಲಸೆ ಹೋಗಿದ್ದಾರೆ. 19 ವರ್ಷದೊಳಗಿನವರ ಚಾಲೆಂಜರ್ ಟ್ರೋಫಿಯಲ್ಲಿ ಅವರು ಒಟ್ಟು 297 ರನ್‌ಗಳನ್ನು ಗಳಿಸಿದ್ದರು.
ಮುಂಬೈನ ಮುಷೀರ್ ಖಾನ್ ಕೂಡ ತಮ್ಮ ತೋಳ್ಬಲ ಪ್ರದರ್ಶಿಸಲು ಸಿದ್ಧರಾಗಿದ್ದಾರೆ. ದೇಶಿ ಋತುವಿನಲ್ಲಿ ಅವರು 268 ರನ್‌ಗಳನ್ನು ಗಳಿಸಿದ್ದಾರೆ. ಅದರಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕಗಳು ಸೇರಿವೆ.
ಬೌಲಿಂಗ್‌ನಲ್ಲಿ ಆರಾಧ್ಯಾ ಶುಕ್ಲಾ, ಪಾಂಡೆ ಮತ್ತು ಕುಲಕರ್ಣಿ ತಂಡದ ಶಕ್ತಿಯಾಗಿದ್ದಾರೆ.
ಹೋದ ಡಿಸೆಂಬರ್‌ನಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ ತಂಡವು ಬಾಂಗ್ಲಾ ಎದುರು ಸೋತಿತ್ತು.
ಇದೀಗ ಬಾಂಗ್ಲಾ ಎದುರು ಮುಯ್ಯಿ ತೀರಿಸಿಕೊಳ್ಳುವ ಅವಕಾಶ ಉದಯ್ ಬಳಗಕ್ಕೆ ಇದೆ. ಈಚೆಗೆ ನಡೆದ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾ ತಂಡವು ಆಸ್ಟ್ರೇಲಿಯಾ ಎದುರು ಗೆದ್ದಿತು. ಅದರಿಂದಾಗಿ ಮೆಹಫುಜುರ್ ರೆಹಮಾನ್ ರಾಬಿ ನಾಯಕತ್ವದ ತಂಡವು ಭಾರತಕ್ಕೆ ಕಠಿಣ ಪೈಪೋಟಿಯೊಡ್ಡುವ ವಿಶ್ವಾಸದಲ್ಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 1.30ರಿಂದ
Highlights - ಕೂಚ್ ಬಿಹಾರ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಎಂಟು ದಶಕಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಕರ್ನಾಟಕ ತಂಡವು ಟ್ರೋಫಿ ಗೆದ್ದಿತು. ಶಿವಮೊಗ್ಗದಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅಜೇಯ 404 ರನ್ ಗಳಿಸಿದ ಪ್ರಖರ್ ಚತುರ್ವೇದಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಹಾದಿಯಲ್ಲಿ ಅವರು 25 ವರ್ಷಗಳ ಹಿಂದೆ ಯುವರಾಜ್ ಸಿಂಗ್ ಮಾಡಿದ್ದ ದಾಖಲೆಯನ್ನೂ ಮುರಿದರು. ಅಲ್ಲದೇ ಈ ಟೂರ್ನಿಯ ಇತಿಹಾಸದಲ್ಲಿ ನಾಲ್ಕನೂರಕ್ಕಿಂತಲೂ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.