ದುಬೈ: ಮಿಶ್ರಫಲದೊಡನೆ ಅಭಿಯಾನ ಆರಂಭಿಸಿರುವ ಭಾರತ ತಂಡ ಬುಧವಾರ ಟಿ20 ಮಹಿಳಾ ವಿಶ್ವ ಕಪ್ ‘ಎ’ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಬ್ಯಾಟಿಂಗ್ ವಿಭಾಗದ ದೋಷಗಳನ್ನು ಸರಿಪಡಿಸಿಕೊಳ್ಳುವ ಜೊತೆಗೆ ನಿವ್ವಳ ರನ್‌ದರವನ್ನು ಸುಧಾರಿಸಿಕೊಳ್ಳುವ ಸವಾಲು ಭಾರತದ ಮುಂದಿದೆ.
ಈ ಬಾರಿ ಚುಟುಕು ವಿಶ್ವಕಪ್‌ನಲ್ಲಿ ಭಾರತದ ಆರಂಭ ಸ್ಫೂರ್ತಿಯುತವಾಗಿಲ್ಲ. ನ್ಯೂಜಿಲೆಂಡ್ ಎದುರು ಮೊದಲ ಪಂದ್ಯವನ್ನು 58 ರನ್‌ಗಳಿಂದ ಸೋತ ನಂತರ, ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ 105 ರನ್‌ಗಳ ಸಾಧಾರಣ ಗುರಿಯನ್ನು ತಲುಪಲು 18.5 ಓವರುಗಳು ಬೇಕಾದವು.
ಬ್ಯಾಟಿಂಗ್ ವಿಭಾಗದ ವೈಫಲ್ಯ ಚಿಂತೆಗೆ ಕಾರಣವಾಗಿದೆ. ಅದರಲ್ಲೂ, ಬಿರುಸಿನ ಆರಂಭ ನೀಡುವ ಶಫಾಲಿ ವರ್ಮಾ ಮತ್ತು ಉಪನಾಯಕಿ ಸ್ಮೃತಿ ಮಂದಾನ ಅವರ ಸಂಯೋಜನೆಯಲ್ಲಿ ಭದ್ರ ಅಡಿಪಾಯ ದೊರೆಯುತ್ತಿಲ್ಲ. ಶಫಾಲಿ ಎರಡು ಪಂದ್ಯಗಳಲ್ಲಿ ಬರೇ 34 ರನ್ ಗಳಿಸಿದ್ದಾರೆ. ಅನುಭವಿ ಮಂದಾನ ಸಹ ಕೇವಲ 12 ಮತ್ತು 7 ರನ್ ಗಳಿಸಿದ್ದಾರೆ. ಹೀಗಾಗಿ ನಂತರದ ಬ್ಯಾಟರ್‌ಗಳ ಮೇಲೆ ಒತ್ತಡ ಹೆಚ್ಚುತ್ತಿದೆ.
ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಲಂಕಾ ವಿರುದ್ಧ ಆಡುವುದು ಅನುಮಾನ. ಇದು ಒತ್ತಡ ಮತ್ತಷ್ಟು ಹೆಚ್ಚಿಸಿದೆ. ಕತ್ತುನೋವಿನಿಂದಾಗಿ ಅವರು ಪಾಕಿಸ್ತಾನ ವಿರುದ್ಧ 29 ರನ್ ಗಳಿಸಿ ನಿವೃತ್ತರಾಗಿದ್ದರು. ಹೀಗಾಗಿ ಅನುಭವಿ ಬ್ಯಾಟರ್‌ಗಳಾದ ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ ಮತ್ತು ರಿಚಾ ಘೋಷ್ ಹೊಣೆಯರಿತು ಆಡಬೇಕಾಗಿದೆ.
ಮಧ್ಯಮ ವೇಗಿ ಅರುಂಧತಿ ರೆಡ್ಡಿ, ಪಾಕ್ ವಿರುದ್ಧ 19 ರನ್ನಿಗೆ 3 ವಿಕೆಟ್ ಪಡೆದು ಮಿಂಚಿದ್ದರು. ಆದರೆ ಅವರಿಗೆ ರೇಣುಕಾ ಸಿಂಗ್ ಮತ್ತು ಪೂಜಾ ವಸ್ತ್ರಾಕರ್ ಅವರಿಂದ ಬೆಂಬಲ ದೊರೆಯಬೇಕಾಗಿದೆ. ಸ್ಪಿನ್ ವಿಭಾಗ ದೀಪ್ತಿ ಶರ್ಮಾ ಅವರನ್ನು ಬಲವಾಗಿ ನೆಚ್ಚಿಕೊಂಡಿದೆ. ಆದರೆ ಅವರು ಉತ್ತಮ ಲಯದಲ್ಲಿಲ್ಲ. ಯುವ ಆಫ್ ಸ್ಪಿನ್ನರ್ ಶ್ರೇಯಾಂಕ ಪಾಟೀಲ ಮತ್ತು ಲೆಗ್ ಸ್ಪಿನ್ನರ್ ಆಶಾ ಶೋಭನಾ ಸ್ವಲ್ಪ ಮಟ್ಟಿಗೆ ಯಶಸ್ಸು ಪಡೆದಿದ್ದಾರೆ.
ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರಷ್ಟೇ, ಗುಂಪಿನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾದಂಥ ಪ್ರಬಲ ತಂಡವನ್ನು ವಿಶ್ವಾಸದಿಂದ ಎದುರಿಸಬಹುದು.
ಶ್ರೀಲಂಕಾ ಮೊದಲ ಎರಡು ಪಂದ್ಯ ಸೋತಿರಬಹುದು. ಆದರೆ ದ್ವೀಪರಾಷ್ಟ್ರದ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಆಗಸ್ಟ್‌ನಲ್ಲಿ ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಲಂಕಾ ತಂಡ, ಭಾರತಕ್ಕೆ ಆಘಾತ ನೀಡಿತ್ತು.
‘ಲಂಕಾ ತಂಡವು ಹಿಂದಿನಂತೆ, ಈಗ ನಾಯಕಿ ಚಮಾರಿ ಆಟಪಟ್ಟು ಅವರನ್ನು ಮಾತ್ರ ಅವಲಂಬಿಸಿಲ್ಲ‘ ಎಂದು ಭಾರತದ ಆರಂಭ ಆಟಗಾರ್ತಿ ಶಫಾಲಿ ಒಪ್ಪಿಕೊಂಡರು.
‘ಹಿಂದೆ ಚಮಾರಿ ಅವರೇ ಹೆಚ್ಚಿನ ರನ್ ಗಳಿಸಬೇಕಿತ್ತು, ವಿಕೆಟ್ ಪಡೆಯಬೇಕಿತ್ತು. ಆದರೆ ಏಷ್ಯಾ ಕಪ್‌ನಲ್ಲಿ ಇಡೀ ತಂಡ ಉತ್ತಮ ಪ್ರದರ್ಶನ ನೀಡಿತ್ತು’ ಎಂದರು.
‘ಚಮರಿ ಅವರ ವಿಕೆಟ್ ಬೇಗನೇ ಪಡೆಯುವುದು ಬಹಳ ಮುಖ್ಯ’ ಎಂದು ವೇಗದ ಬೌಲರ್ ರೇಣುಕಾ ಸಿಂಗ್ ಹೇಳಿದರು.
ಪಂದ್ಯ ಆರಂಭ: ರಾತ್ರಿ 7.30.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್ ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.