ADVERTISEMENT

ಮಹಿಳಾ ವಿಶ್ವಕಪ್ ಕ್ರಿಕೆಟ್: ಹರ್ಮನ್‌ಪ್ರೀತ್ ಪಡೆ ಮುಂದೆ ಕಠಿಣ ಪರೀಕ್ಷೆ

ಭಾರತ–ಪಾಕಿಸ್ತಾನ ಹಣಾಹಣಿ ಇಂದು

ಪಿಟಿಐ
Published 6 ಅಕ್ಟೋಬರ್ 2024, 0:30 IST
Last Updated 6 ಅಕ್ಟೋಬರ್ 2024, 0:30 IST
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಸಹ ಆಟಗಾರ್ತಿಯರ ಅಭ್ಯಾಸ  
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಸಹ ಆಟಗಾರ್ತಿಯರ ಅಭ್ಯಾಸ     

ದುಬೈ: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ಟಿ20 ವಿಶ್ವಕಪ್ ಮಹಿಳಾ ಕ್ರಿಕೆಟ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. 

ಭಾನುವಾರ ನಡೆಯಲಿರುವ ಈ ಪಂದ್ಯಕ್ಕಾಗಿ ಕೌರ್ ಬಳಗವು ಅಪಾರ ಒತ್ತಡದಲ್ಲಿರುವುದಂತೂ ನಿಜ. ಏಕೆಂದರೆ; ಗುಂಪಿನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ತಂಡವು ಹೀನಾಯವಾಗಿ ಸೋತಿತ್ತು. ಅದರಿಂದಾಗಿ ಜಯದ ಹಾದಿಗೆ ಮರಳುವ ಒತ್ತಡ ಒಂದೆಡೆಯಾದರೆ, ಬದ್ಧ ಎದುರಾಳಿಯಾಗಿರುವ ಪಾಕ್ ತಂಡದ ಎದುರು ವಿಫಲವಾಗದಿರುವ ಸವಾಲು ಇನ್ನೊಂದೆಡೆ ಇದೆ. 

ಭಾರತ ತಂಡವು ಗುಂಪು ಹಂತದಲ್ಲಿ ಪಾಕ್ ಎದುರಿನ ಪಂದ್ಯದ ನಂತರದ  ಪಂದ್ಯಗಳಲ್ಲಿ  ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳನ್ನೂ ಎದುರಿಸಬೇಕಿದೆ. ಅಷ್ಟೇ ಅಲ್ಲ. ಎಲ್ಲ ಪಂದ್ಯಗಳಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಜಯಿಸಿದರೆ ಸೆಮಿಫೈನಲ್ ಹಾದಿ ಸುಗಮವಾಗಲಿದೆ. 

ADVERTISEMENT

ಪಾಕ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎದುರು ಜಯಿಸಿದ್ದು ಅಪಾರ ಆತ್ಮವಿಶ್ವಾಸದಲ್ಲಿದೆ. ಅದಕ್ಕಾಗಿ ತಂಡದ ಎಲ್ಲ ವಿಭಾಗಗಳಲ್ಲಿಯೂ ಆಟ ಸುಧಾರಣೆ ಮಾಡಿಕೊಳ್ಳುವ ಅಗತ್ಯವಿದೆ. ಕಿವೀಸ್ ಎದುರು ಆರಂಭದಲ್ಲಿ ಉತ್ತಮ ಬೌಲಿಂಗ್ ಮಾಡಿದ್ದ ಭಾರತದ ಬೌಲರ್‌ಗಳು ಕೊನೆಯ ಆರು ಓವರ್‌ಗಳಲ್ಲಿ ದುಬಾರಿಯಾಗಿದ್ದರು. ಫೀಲ್ಡಿಂಗ್ ಕೂಡ ದುರ್ಬಲವಾಗಿತ್ತು. ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ತಂಡದ ಬ್ಯಾಟಿಂಗ್‌ ಕೂಡ ಕಳಪೆಯಾಗಿತ್ತು. ನಾಯಕಿ ಕೌರ್, ಅನುಭವಿಗಳಾದ ಸ್ಮೃತಿ ಮಂದಾನ, ಶಫಾಲಿ ವರ್ಮಾ ಮತ್ತು ಜಿಮಿಮಾ ರಾಡ್ರಿಗಸ್ ಸೇರಿದಂತೆ  ಉಳಿದೆಲ್ಲ ಬ್ಯಾಟರ್‌ಗಳು ಕುಸಿದರು. 

ಈ ಎಲ್ಲ ಲೋಪಗಳನ್ನು  ಸುಧಾರಿಸಿಕೊಂಡು ಕಣಕ್ಕಿಳಿಯಬೇಕಿದೆ. ತಂಡದ ಮುಖ್ಯ ಕೋಚ್ ಅಮೋಲ್ ಮಜುಂದಾರ್ ಅವರಿಗೂ ಇದು ‘ಸತ್ವಪರೀಕ್ಷೆ’ಯಾಗಿದೆ. ತಂಡದಲ್ಲಿ ಮತ್ತು ಬ್ಯಾಟಿಂಗ್ ಕ್ರಮಾಂಕಗಳಲ್ಲಿ ಬದಲಾವಣೆಗಳಾಗುವ ನಿರೀಕ್ಷೆ ಇದೆ. ಬೌಲಿಂಗ್‌ನಲ್ಲಿ ಅರುಂಧತಿ ರೆಡ್ಡಿ ಇದ್ದುದರಲ್ಲಿ ಪರವಾಗಿಲ್ಲ. ಆದರೆ ಸ್ಪಿನ್ನರ್‌ಗಳಾದ ಶ್ರೇಯಾಂಕಾ ಪಾಟೀಲ, ದೀಪ್ತಿ ಶರ್ಮಾ ಅವರು ತಮ್ಮ ಲಯಕ್ಕೆ ಮರಳಬೇಕಿದೆ. 13 ಟಿ20 ಪಂದ್ಯಗಳಲ್ಲಿ 22 ವಿಕೆಟ್ ಗಳಿಸಿರುವ ಎಡಗೈ ಸ್ಪಿನ್ನರ್ ರಾಧಾ ಯಾದವ್ ಅವರಿಗೆ ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿರಲಿಲ್ಲ. ಅವರನ್ನು ಈ ಪಂದ್ಯದಲ್ಲಿ ಕಣಕ್ಕಿಳಿಸುವ ಸಾಧ್ಯತೆ ಇದೆ.

ಫಾತಿಮಾ ಸನಾ ನಾಯಕತ್ವದ ಪಾಕ್ ತಂಡವು ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಇಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಮಧ್ಯಮವೇಗಿ ಡಯಾನಾ ಬೇಗ್ ಅವರು ಗಾಯದಿಂದ ಚೇತರಿಸಿಕೊಂಡರೆ ಕಣಕ್ಕೆ ಮರಳಬಹುದು. 

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಹಾಟ್‌ಸ್ಟಾರ್ ಆ್ಯಪ್

ಪಾಕಿಸ್ತಾನ ತಂಡದ ಫಾತಿಮಾ ಸನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.