ತರೂಬ, ಟ್ರಿನಿಡಾಡ್: ಬೌಲರ್‌ಗಳ ಸಾಂಘಿಕ ಪ್ರದರ್ಶನದಿಂದಾಗಿ ವೆಸ್ಟ್ ಇಂಡೀಸ್ ತಂಡವು ಗುರುವಾರ ಇಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ 4 ರನ್‌ಗಳ ರೋಚಕ ಜಯ ಸಾಧಿಸಿದೆ.
ಬ್ರಯನ್ ಲಾರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 149 ರನ್ ಗಳಿಸಿತ್ತು.
ಈ ಮೊತ್ತವನ್ನು ಬೆನ್ನು ಹತ್ತಿದ ಭಾರತ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 144 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ತಂಡ 1–0 ಮುನ್ನಡೆ ಸಾಧಿಸಿತು.
ವಿಂಡೀಸ್ ಪಡೆಗೆ ಭಾರತದ ಯುಜುವೇಂದ್ರ ಚಾಹಲ್ (24ಕ್ಕೆ 3) ಆರಂಭದಲ್ಲಿಯೇ ಪೆಟ್ಟು ನೀಡಿದರು. ಐದನೇ ಓವರ್‌ನಲ್ಲಿ ವಿಂಡೀಸ್ ಆರಂಭಿಕ ಬ್ಯಾಟರ್‌ಗಳಾದ ಕೈಲ್ ಮೇಯರ್ಸ್ ಮತ್ತು ಬ್ರೆಂಡನ್ ಕಿಂಗ್ ಅವರಿಬ್ಬರ ವಿಕೆಟ್‌ಗಳನ್ನೂ ಗಳಿಸಿದರು. ಇದರಿಂದಾಗಿ ನಂತರ ಕ್ರೀಸ್‌ಗೆ ಬಂದ ಬ್ಯಾಟರ್‌ಗಳು ರನ್ ಗಳಿಕೆಗೆ ತರಾತುರಿ ಮಾಡಲಿಲ್ಲ.
ಐಪಿಎಲ್ ಹೀರೊ ನಿಕೊಲಸ್ ಪೂರನ್ (41; 34ಎ) ಮತ್ತು ನಾಯಕ ರೋವ್ಮನ್ ಪೊವೆಲ್ (48; 32ಎ) ತಂಡಕ್ಕೆ ಬಲ ತುಂಬಿ ಸವಾಲಿನ ಮೊತ್ತವನ್ನು ಕಲೆ ಹಾಕಿದರು. ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಪೂರನ್ ಔಟಾದರು. ಹೆಟ್ಮೆಯರ್ ವೈಫಲ್ಯ ಅನುಭವಿಸಿದರು. ಪೊವೆಲ್ ಅವರನ್ನು ಎಡಗೈ ವೇಗಿ ಆರ್ಷದೀಪ್ ಸಿಂಗ್ ಔಟ್ ಮಾಡಿದರು.
ಭಾರತದ ಆರಂಭಿಕ ಆಟಗಾರರಾದ ಇಶಾನ್ ಕಿಶಾನ್ (6) ಮತ್ತು ಶುಭಮನ್ ಗಿಲ್ (3) ಉತ್ತಮ ಅಡಿಪಾಯ ಹಾಕುವಲ್ಲಿ ಎಡವಿದರು. ಸೂರ್ಯಕುಮಾರ್ ಯಾದವ್ (21), ತಿಲಕ್ ವರ್ಮಾ (39) ಮತ್ತು ನಾಯಕ ಹಾರ್ದಿಕ್ ಪಾಂಡ್ಯ (19) ಅವರು ಮಧ್ಯಮ ಕ್ರಮಾಂಕದಲ್ಲಿ ತುಸು ಬಲ ತುಂಬಿದರೂ ಗೆಲುವಿನ ದಡ ಸೇರಲು ಕಷ್ಟವಾಯಿತು. ವಿಂಡೀಸ್‌ನ ಬೆಡ್ ಮೆಕಾಯ್, ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್ ತಲಾ ಎರಡು ವಿಕೆಟ್ ಪಡೆದು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 149 (ಬ್ರೆಂಡನ್ ಕಿಂಗ್ 28, ನಿಕೊಲಸ್ ಪೂರನ್ 41, ರೋವ್ಮನ್ ಪೊವೆಲ್ 48, ಆರ್ಷದೀಪ್ ಸಿಂಗ್ 31ಕ್ಕೆ2, ಯಜುವೇಂದ್ರ ಚಾಹಲ್ 24ಕ್ಕೆ2) ಭಾರತ: ಸೂರ್ಯಕುಮಾರ್ ಯಾದವ್ 21, ತಿಲಕ್ ವರ್ಮಾ 39, ಹಾರ್ದಿಕ್ ಪಾಂಡ್ಯ 19; ಒಬೆಡ್ ಮೆಕಾಯ್ (28ಕ್ಕೆ 2), ಜೇಸನ್ ಹೋಲ್ಡರ್ (19ಕ್ಕೆ 2), ರೊಮಾರಿಯೋ ಶೆಫರ್ಡ್ (33ಕ್ಕೆ 2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.