ಧರ್ಮಶಾಲಾ: ರವಿಚಂದ್ರನ್ ಅಶ್ವಿನ್ ಮತ್ತು ಜಾನಿ ಬೆಸ್ಟೊ ಅವರಿಬ್ಬರೂ 100ನೇ ಟೆಸ್ಟ್ ಆಡಿದರು. ಆದರೆ ಅವರಿಬ್ಬರ ಅದೃಷ್ಟವೂ ವಿಭಿನ್ನವಾಗಿತ್ತು.
ಅನುಭವಿ ಆಫ್‌ಸ್ಪಿ್ನರ್ ಅಶ್ವಿನ್ ಈ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಆಡಿದ್ದಕ್ಕಿಂತಲೂ ಹಿಮಾಚಲಪ್ರದೇಶ ಕ್ರಿಕೆಟ್ ಕ್ರೀಡಾಂಗಣದಲ್ಲಿ ವಿಭಿನ್ನವಾಗಿ ಆಡಿದರು. ತಮ್ಮ ನೈಜ ಲಯಕ್ಕೆ ಮರಳಿದ ಅವರು ವೈಯಕ್ತಿಕ ಶ್ರೇಷ್ಠ (128ಕ್ಕೆ9 –ಪಂದ್ಯದಲ್ಲಿ) ಬೌಲಿಂಗ್ ಸಾಧನೆ ಮಾಡಿದರು. ಅದರಲ್ಲಿ ಎರಡನೇ ಇನಿಂಗ್ಸ್‌ನ ಐದು ವಿಕೆಟ್ ಗೊಂಚಲು ಕೂಡ ಸೇರಿತ್ತು. ಅದರಿಂದಾಗಿ ಭಾರತ ತಂಡವು ಸರಣಿಯಲ್ಲಿಯೇ ದೊಡ್ಡ ಜಯ ಸಾಧಿಸಿತು.
ಇನ್ನೊಂದೆಡೆ ಜಾನಿ ಬೆಸ್ಟೊ ಎರಡೂ ಇನಿಂಗ್ಸ್‌ಗಳಲ್ಲಿ (29 ಮತ್ತು 39 ರನ್) ಬಿರುಸಿನಿಂದ ಬ್ಯಾಟ್ ಬೀಸಿದರು. ಇಂಗ್ಲೆಂಡ್ ತಂಡದ ‘ಬ್ರ್ಯಾಂಡ್’ ಬಾಝ್‌ಬಾಲ್ ಕ್ರಿಕೆಟ್ ಅವರ ಬ್ಯಾಟಿಂಗ್‌ನಲ್ಲಿ ಕಂಡಿತು. ಆದರೆ ಅದು ಪ್ರವಾಸಿ ತಂಡಕ್ಕೆ ತಿರುಗುಬಾಣವಾಯಿತು.
ಸರಣಿಯ ಮೊದಲ ಟೆಸ್ಟ್‌ನಲ್ಲಿ ಸೋತರೂ ಭಾರತ ನಂತರದ ಪಂದ್ಯಗಳಲ್ಲಿ ಸತತ ಜಯ ಸಾಧಿಸಿತು. 4–1ರಿಂದ ಸರಣಿ ಕಿರೀಟ ಧರಿಸಿತು. ಆತಿಥೇಯರು ಪುಟಿದೆದ್ದ ರೀತಿ ನೋಡಿಯೂ ತನ್ನ ಸಾಂಪ್ರದಾಯಿಕ ತಂತ್ರಗಾರಿಕೆಗೆ ಇಂಗ್ಲೆಂಡ್ ಕಟ್ಟುಬಿದ್ದಿದ್ದು ಸೋಲಿಗೆ ಹಾದಿಯಾಯಿತು. ಐದನೇ ಮತ್ತು ಕೊನೆಯ ಪಂದ್ಯದ ಮೂರನೇ ದಿನದ ಎರಡನೇ ಅವಧಿಯಲ್ಲಿಯೇ ಇನಿಂಗ್ಸ್ ಮತ್ತು 64 ರನ್‌ಗಳಿಂದ ಸೋತಿತು.
ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡವು 8 ವಿಕೆಟ್‌ಗಳಿಗೆ 473 ರನ್ ಗಳಿಸಿತ್ತು. ಶನಿವಾರ ಬೆಳಿಗ್ಗೆ ಈ ಮೊತ್ತಕ್ಕೆ ಹೆಚ್ಚು ರನ್‌ಗಳು ಸೇರಲು ವೇಗಿ ಜೇಮ್ಸ್ ಆ್ಯಂಡರ್ಸನ್ ಮತ್ತು ಸ್ಪಿನ್ನರ್ ಶೋಯಬ್ ಬಷೀರ್ ಬಿಡಲಿಲ್ಲ. ಕ್ರೀಸ್‌ನಲ್ಲಿದ್ದ ಕುಲದೀಪ್ ಯಾದವ್ ವಿಕೆಟ್ ಗಳಿಸಿದ ಆ್ಯಂಡರ್ಸನ್ 700ರ ಮೈಲುಗಲ್ಲು ಮುಟ್ಟಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವೇಗದ ಬೌಲರ್ ಎನಿಸಿದರು. ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಸ್ಪಿನ್ನರ್‌ಗಳಾದ ಮುತ್ತಯ್ಯ ಮುರಳೀಧರನ್ ಮತ್ತು ಶೇನ್ ವಾರ್ನ್ ನಂತರದ ಸ್ಥಾನ ಗಳಿಸಿದರು.
ಯಾದವ್ ವಿಕೆಟ್ ಪಡೆದ 42 ವರ್ಷದ ಆ್ಯಂಡರ್ಸನ್ ಅವರನ್ನು ಸಹ ಆಟಗಾರರು ಸುತ್ತುವರಿದು ಅಭಿನಂದಿಸಿದರು. ಕೆಲ ನಿಮಿಷಗಳ ನಂತರ ಬಷೀರ್ ಬೌಲಿಂಗ್‌ನಲ್ಲಿ ಬೂಮ್ರಾ ಕೂಡ ಔಟಾದರು. ಇದರೊಂದಿಗೆ ಬಷೀರ್ ಐದು ವಿಕೆಟ್ ಗುಚ್ಛ ಪೂರೈಸಿದರು. ಇದರ ನಂತರ ಇಂಗ್ಲೆಂಡ್ ತಂಡಕ್ಕೆ ಸಂಭ್ರಮಿಸುವ ಅವಕಾಶಗಳು ಸಿಗಲಿಲ್ಲ.
ಭಾರತ ಗಳಿಸಿದ್ದ 259 ರನ್‌ಗಳ ಮುನ್ನಡೆಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡವು 48.1 ಓವರ್‌ಗಳಲ್ಲಿ 195 ರನ್‌ಗಳಿಗೆ ಸರ್ವಪತನ ಕಂಡಿತು. ಅನುಭವಿ ಬ್ಯಾಟರ್ ಜೋ ರೂಟ್ (84; 128ಎ, 4X12) ಅವರೊಬ್ಬರೇ ಆತಿಥೆಯ ತಂಡದ ದಾಳಿಯನ್ನು ದಿಟ್ಟವಾಗಿ ಎದುರಿಸಿದರು.
ಮೊದಲ ಇನಿಂಗ್ಸ್‌ನಲ್ಲಿ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಐದು ವಿಕೆಟ್ ಗಳಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಅಶ್ವಿನ್ ಸೃಷ್ಟಿಸಿದ ‘ಚಕ್ರವ್ಯೂಹ‘ದಲ್ಲಿ ಇಂಗ್ಲೆಂಡ್ ಪತನವಾಯಿತು. ಹೊಸ ಚೆಂಡಿನಲ್ಲಿ ಅಶ್ವಿನ್ (77ಕ್ಕೆ5) ಪಂಚಗುಚ್ಛದ ಸಾಧನೆ ಮಾಡಿದರು. ಅನಿಲ್ ಕುಂಬ್ಳೆ ಅವರು 35 ಬಾರಿ ಮಾಡಿದ್ದ ಸಾಧನೆಯನ್ನೂ ಅಶ್ವಿನ್ ಹಿಂದಿಕ್ಕಿದರು.
ಹೈದರಾಬಾದ್ ಮತ್ತು ರಾಜ್‌ಕೋಟ್ ಟೆಸ್ಟ್‌ಗಳಲ್ಲಿ ಅಶ್ವಿನ್ ಇದೇ ಬ್ಯಾಟರ್‌ಗಳ ವಿರುದ್ಧ ತುಸು ಪರದಾಡಿದ್ದರು. ಆದರೆ ಅನುಭವದಿಂದ ಕಲಿತ ಪಾಠವನ್ನು ಇಲ್ಲಿ ಬಳಸಿಕೊಂಡರು. ಸಾಂಪ್ರದಾಯಿಕ ಆಫ್‌ಸ್ಪಿನ್ ಎಸೆತಗಳ ಜೊತೆಗೆ, ಕೇರಂ ಬಾಲ್, ಅಂಡರ್‌ಕಟರ್ಸ್ ಗಳ ಮೂಲಕ ವಿಕೆಟ್ ಕಬಳಿಸಿದರು. ಇದರಿಂದಾಗಿ ಪ್ರವಾಸಿ ಬಳಗವು ಊಟದ ವಿರಾಮಕ್ಕೆ 103 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತು. ಅದರಲ್ಲಿ ಬೆನ್ ಸ್ಟೋಕ್ಸ್ ಸೇರಿದಂತೆ ನಾಲ್ಕು ವಿಕೆಟ್‌ಗಳೂ ಅಶ್ವಿನ್ ಪಾಲಾಗಿದ್ದವು. ಅಶ್ವಿನ್ ಆರ್ಮ್ ಬಾಲ್‌ಗೆ ಸ್ಟೋಕ್ಸ್ ಕ್ಲೀನ್‌ಬೌಲ್ಡ್ ಆದರು.
ರೋಹಿತ್ ಶರ್ಮಾ ಅವರು ಬೆನ್ನುನೋವಿನಿಂದಾಗಿ ಫೀಲ್ಡಿಂಗ್ ಮಾಡಲಿಲ್ಲ. ವಿರಾಮದ ನಂತರ ತಮ್ಮ ಎರಡನೇ ಸ್ಪೆಲ್ ಆರಂಭಿಸಿದ ಬೂಮ್ರಾ ಅವರಿಗೆ ಟಾಮ್ ಹಾರ್ಟ್ಲಿ ಮತ್ತು ಮಾರ್ಕ್ ವುಡ್ ವಿಕೆಟ್ ಒಪ್ಪಿಸಿದರು. ಸ್ವಲ್ಪ ಪ್ರತಿರೋಧವೊಡ್ಡಿದ ಬಷೀರ್ ವಿಕೆಟ್ ಜಡೇಜ ಪಾಲಾಯಿತು.
ಅಲ್ಲಿಯವರೆಗೂ ಗಟ್ಟಿಯಾಗಿ ನಿಂತಿದ್ದ ರೂಟ್ ಅವರೂ ಕುಲದೀಪ್ ಯಾದವ್ ಎಸೆತದಲ್ಲಿ ಬೂಮ್ರಾಗೆ ಕ್ಯಾಚಿತ್ತರು. ಸರಣಿಗೆ ತೆರೆಬಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.