ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲಿ ಭಾರತ ತಂಡವು ಅಗ್ರ ಸ್ಥಾನಕ್ಕೆ ಏರಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯವನ್ನು 7 ವಿಕೆಟ್‌ಗಳಿಂದ ಜಯಿಸಿದ ಭಾರತ ತಂಡ ಮಹತ್ವದ 12 ಅಂಕಗಳನ್ನು ಸಂಪಾದಿಸುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.
ಸರಣಿಯ ಆರಂಭಿಕ ಪಂದ್ಯದಲ್ಲಿ ಜಯ ಗಳಿಸಿದ ನಂತರ, ದಕ್ಷಿಣ ಆಫ್ರಿಕಾವು ಡಬ್ಲ್ಯುಟಿಸಿ25 ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತ್ತು. ಎರಡನೇ ಪಂದ್ಯ ಸೋತಿದ್ದರಿಂದ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶದಂತೆಯೇ ದಕ್ಷಿಣ ಆಫ್ರಿಕಾದ ಗೆಲುವಿನ ಪ್ರಮಾಣ ಶೇ 50ಕ್ಕೆ ಕುಸಿದಿದೆ.
ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳು ಅಂಕಪಟ್ಟಿಯಲ್ಲಿ ಕ್ರಮವಾಗಿ 3,4,5 ಮತ್ತು 6ನೇ ಸ್ಥಾನದಲ್ಲಿವೆ.
2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 23.2 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಮೊದಲ ಇನಿಂಗ್ಸ್ ಮುಗಿಸಿತ್ತು. 6 ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್ ಹರಿಣಗಳ ಬ್ಯಾಟಿಂಗ್ ಪಡೆಯನ್ನು ಕಟ್ಟಿ ಹಾಕಿದರು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಭಾರತ ತಂಡ 153 ರನ್ ಗಳಿಸಿತು. 98 ರನ್‌ಗಳ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಆಫ್ರಿಕಾ ತಂಡ ಏಡೇನ್ ಮರ್ಕರಂ ಅವರ 106 ರನ್‌ಗಳ ನೆರವಿನಿಂದ 176 ರನ್ ಸೇರಿಸಿತು. ಭಾರತದ ಪರ ಜಸ್‌ಪ್ರೀತ್ ಬೂಮ್ರಾ 6 ವಿಕೆಟ್ ಪಡೆದರು. ಸಾಧಾರಣ ಗುರಿ ಬೆನ್ನತ್ತಿದ ಭಾರತ ತಂಡ 12 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿ ಜಯ ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.