ಗೆಬರ್ಹಾ (ಪೋರ್ಟ್ ಎಲಿಜಬೆತ್): ಅಮೋಘ ಲಯದಲ್ಲಿರುವ ಸಂಜು ಸ್ಯಾಮ್ಸನ್ ಅವರು ಬೌಲರ್‌ಗಳ ಮೇಲಿನ ಪಾರಮ್ಯವನ್ನು ಮುಂದುವರಿಸುವ ಉತ್ಸಾಹದಲ್ಲಿದ್ದಾರೆ. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ ನಡೆಯುವ ಟಿ20 ಸರಣೀಯ ಎರಡನೇ ಪಂದ್ಯದಲ್ಲಿ ಭಾರತ ತಂಡವು ಅಗ್ರ ಕ್ರಮಾಂಕದ ಇತರ ಬ್ಯಾಟರ್‌ಗಳಿಂದಲೂ ಸ್ಥಿರ ಪ್ರದರ್ಶನದ ನಿರೀಕ್ಷೆಯಲ್ಲಿದೆ.
ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಸ್ಯಾಮ್ಸನ್ ಸ್ಫೋಟಕ ಇನಿಂಗ್ಸ್ ಆಡಿ 50 ಎಸೆತಗಳಲ್ಲಿ 107 ರನ್ ಸಿಡಿಸಿದ್ದರು. ಆದರೆ ಇತರ ಬ್ಯಾಟರ್‌ಗಳಿಂದ ಅಂಥ ಅಬ್ಬರ ಕಾಣಿಸಲಿಲ್ಲ. ಭಾರತ ಈ ಪಂದ್ಯವನ್ನು ಅಷ್ಟೇನೂ ಕಷ್ಟವಿಲ್ಲದೇ 61 ರನ್‌ಗಳಿಂದ ಗೆದ್ದುಕೊಂಡಿತ್ತು. ಆ ಮೂಲಕ ಚುಟುಕು ಮಾದರಿಯಲ್ಲಿ ಪ್ರವಾಸಿ ತಂಡ ಯಶಸ್ಸಿನ ಓಟ ಮುಂದುವರಿಸುವ ಉತ್ಸಾಹದಲ್ಲಿದೆ.
ಕೇರಳದ ವಿಕೆಟ್ ಕೀಪರ್– ಬ್ಯಾಟರ್ ಮೇಲೆ ಹೆಚ್ಚಿನ ಒತ್ತಡ ಬೀಳದೇ ಇರಬೇಕಾದರೆ ಇತರ ಬ್ಯಾಟರ್‌ಗಳು ಉಪಯುಕ್ತ ಕೊಡುಗೆ ನೀಡುವ ಅಗತ್ಯವಿದೆ. ಅಭಿಷೇಕ್ ಶರ್ಮಾ ಲಭಿಸಿದ ಅನೇಕ ಅವಕಾಶಗಳನ್ನು ಬಳಸಿಕೊಂಡಿಲ್ಲ. ಇದು ತಂಡಕ್ಕೆ ಚಿಂತೆಯ ವಿಷಯ. ಕಡೆಯ ಏಳು ಇನಿಂಗ್ಸ್‌ಗಳಲ್ಲಿ ಬೀಸು ಹೊಡೆತದ ಎಡಗೈ ಆಟಗಾರನ ಗಳಿಕೆ– 0, 10, 14, 16, 15, 4 ಮತ್ತು 7.
ಆದರೆ ತಂಡ ಎರಡನೇ ಪಂದ್ಯಕ್ಕೆ ಬದಲಾವಣೆ ಮಾಡುವ ಸಾಧ್ಯತೆಗಳು ಕಡಿಮೆ. ತಿಲಕ್ ವರ್ಮಾ ಕೂಡ ಮತ್ತೆ ಉಪಯುಕ್ತ ಆಟವಾಡಬೇಕಾದ ಅಗತ್ಯವಿದೆ. ಡರ್ಬನ್‌ನಲ್ಲಿ ಅವರು 18 ಎಸೆತಗಳಲ್ಲಿ ಲಗುಬಗನೇ 33 ರನ್ ಗಳಿಸಿದ್ದರು. ಸ್ಥಿರ ಆಟದಿಂದ ಅವರು ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಗಟ್ಟಿಪಡಿಸಿಕೊಳ್ಳಬಹುದು. ನಾಯಕ ಸೂರ್ಯಕುಮಾರ್ ಕೂಡ ಉತ್ತಮ ಕಾಣಿಕೆಯ ನೀಡಬೇಕಾಗಿದೆ.
ಮೊದಲ ಪಂದ್ಯದಲ್ಲಿ ಕೊನೆಯ ಆರು ವಿಕೆಟ್‌ಗಳು 36 ರನ್ ಅಂತರದಲ್ಲಿ ಉರುಳಿದ್ದವು. ಒಂದು ಹಂತದಲ್ಲಿ 2 ವಿಕೆಟ್‌ಗೆ 166 ರನ್ ಗಳಿಸಿ ಉತ್ತಮ ಮೊತ್ತದತ್ತ ಕಣ್ಣಿಟ್ಟಿದ್ದ ಭಾರತ 20 ಓವರುಗಳು ಮುಗಿದಾಗ 8 ವಿಕೆಟ್‌ಗೆ 202 ರನ್ ಗಳಿಸಿತ್ತು.
ಬೌಲಿಂಗ್ ವಿಭಾಗದಲ್ಲಿ ತಂಡದ ಪ್ರದರ್ಶನ ಉತ್ತಮವಾಗಿತ್ತು. ಸ್ಪಿನ್ನರ್‌ಗಳು ಮಧ್ಯಮ ಹಂತದ ಓವರುಗಳಲ್ಲಿ ಹರಿಣಗಳನ್ನು ಕಟ್ಟಿಹಾಕಿದರು. ಬಾಂಗ್ಲಾ ವಿರುದ್ಧ ಸರಣಿಯ ಉತ್ತಮ ಪ್ರದರ್ಶನವನ್ನು ವರುಣ್ ಚಕ್ರವರ್ತಿ ಮುಂದುವರಿಸಿದರು. ರವಿ ಬಿಷ್ಣೋಯಿ ನಿರ್ವಹಣೆಯೂ ಪರಿಣಾಮಕಾರಿಯಾಗಿತ್ತು.
ವೇಗದ ಬೌಲರ್‌ರಗಳೂ (ಅರ್ಷದೀಪ್ ಸಿಂಗ್, ಆವೇಶ್ ಖಾನ್) ನಿರಾಸೆ ಮೂಡಿಸಲಿಲ್ಲ.
ಅನುಭವಿಗಳಾದ ಕ್ವಿಂಟನ್ ಡಿಕಾಕ್, ಕಗಿಸೊ ರಬಾಡ, ಆ್ಯನ್ರಿಚ್ ನಾಕಿಯಾ ಮತ್ತು ತಬ್ರೇಜ್ ಸಂಶಿ ಅವರ ಗೈರುಹಾಜರಿಯಲ್ಲಿ ದಕ್ಷಿಣ ಆಫ್ರಿಕಾ ಪರದಾಡಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ದೊಡ್ಡ ಸವಾಲು ಹರಿಣಗಳ ಪಡೆಯ ಮುಂದಿದೆ. ಸಾಕಷ್ಟು ಪಂದ್ಯಗಳನ್ನು ಆಡಿರುವ ಏಡನ್ ಮರ್ಕರಂ, ಡೇವಿಡ್ ಮಿಲ್ಲರ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರಿಂದ ತಂಡ ಉತ್ತಮ ಇನಿಂಗ್ಸ್ ನಿರೀಕ್ಷಿಸುತ್ತಿದೆ.
ಪಂದ್ಯ ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಪೋರ್ಟ್ಸ್ 18 ಮತ್ತು ಜಿಯೊ ಸಿನಿಮಾ ಆ್ಯಪ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.