ADVERTISEMENT

ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್: ಕೊಹ್ಲಿ ಬಳಗಕ್ಕೆ ಕೇನ್ ಪಡೆಯ ‘ಟೆಸ್ಟ್’

ಭಾರತ–ನ್ಯೂಜಿಲೆಂಡ್ ಸರಣಿಯ ಮೊದಲ ಪಂದ್ಯ ನಾಳೆಯಿಂದ

ರಾಯಿಟರ್ಸ್
Published 19 ಫೆಬ್ರುವರಿ 2020, 21:55 IST
Last Updated 19 ಫೆಬ್ರುವರಿ 2020, 21:55 IST
ವಿರಾಟ್ ಕೊಹ್ಲಿ –ಎಎಫ್‌ಪಿ ಚಿತ್ರ
ವಿರಾಟ್ ಕೊಹ್ಲಿ –ಎಎಫ್‌ಪಿ ಚಿತ್ರ   
""

ವೆಲಿಂಗ್ಟನ್:ನ್ಯೂಜಿಲೆಂಡ್‌ ವಿರುದ್ಧ ಟ್ವೆಂಟಿ–20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿ ಏಕದಿನ ಸರಣಿಯಲ್ಲಿ ವೈಟ್‌ವಾಷ್‌ಗೆ ಒಳಗಾಗಿರುವ ಭಾರತ ತಂಡ ಶುಕ್ರವಾರ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಆತಿಥೇಯರ ಸವಾಲನ್ನು ಎದುರಿಸಲಿದೆ.

ಇಲ್ಲಿನ ಬೇಸಿನ್ ರಸರ್ವ್‌ನಲ್ಲಿ ಪಂದ್ಯ ನಡೆಯಲಿದ್ದು ತಂಡಕ್ಕೆ ಮಧ್ಯಮ ವೇಗಿ ಟ್ರೆಂಟ್ ಬೌಲ್ಟ್ ಮರಳಿರುವುದುನ್ಯೂಜಿಲೆಂಡ್‌ ಪಾಳಯಕ್ಕೆ ಚೈತನ್ಯ ತುಂಬಿದೆ. ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತದ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಲು ಬೌಲ್ಟ್ ಒಳಗೊಂಡ ಆತಿಥೇಯರ ವೇಗಿಗಳು ಸಫಲರಾಗುವರೇ ಎಂಬ ಕುತೂಹಲ ಕ್ರಿಕೆಟ್ ಪ್ರಿಯರಲ್ಲಿ ಮನೆ ಮಾಡಿದೆ.

ಕಳೆದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಬೋಲ್ಟ್‌ ಕೈಗೆ ಗಾಯವಾಗಿತ್ತು. ಹೀಗಾಗಿ ಭಾರತ ಎದುರಿನ ಟ್ವೆಂಟಿ–20 ಮತ್ತು ಏಕದಿನ ಸರಣಿಯಲ್ಲಿ ಆಡಿರಲಿಲ್ಲ.

ADVERTISEMENT

‘ಈಗ 100 ಶೇಕಡಾ ಸಮರ್ಥನಾಗಿದ್ದೇನೆ. ಆದ್ದರಿಂದ ಕಣಕ್ಕೆ ಇಳಿಯಲು ಕಾತರನಾಗಿದ್ದೇನೆ’ ಎಂದು ಬೌಲ್ಟ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌ ಭಾಗವಾಗಿ ಈ ಸರಣಿ ನಡೆಯುತ್ತಿದೆ. ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಚಾಂಪಿಯನ್‌ಷಿಪ್‌ನಲ್ಲಿ ಈ ವರೆಗೆ ಒಟ್ಟು 360 ಪಾಯಿಂಟ್ಸ್ ಕಲೆ ಹಾಕಿದ್ದು ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾಕ್ಕಿಂತ 64 ಹೆಚ್ಚಿನ ಪಾಯಿಂಟ್‌ಗಳು ಭಾರತದ ಬಗಲಲ್ಲಿವೆ. ಕೇನ್ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್ ಕೇವಲ 60 ಪಾಯಿಂಟ್‌ಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಈಚೆಗೆ ನಡೆದ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ನ್ಯೂಜಿಲೆಂಡ್ 3–0 ಅಂತರದ ಸೋಲನುಭವಿಸಿತ್ತು.

ಟೇಲರ್‌ಗೆ 100ನೇ ಪಂದ್ಯ: ನ್ಯೂಜಿಲೆಂಡ್‌ನ ಆಕ್ರಮಣಕಾರಿ ಬ್ಯಾಟ್ಸ್‌ಮನ್ ರಾಸ್ ಟೇಲರ್‌ಗೆ ಇದು 100ನೇ ಪಂದ್ಯ. ಇಲ್ಲಿ ಆಡಲು ಇಳಿದರೆ, ಎಲ್ಲ ಮಾದರಿಯಲ್ಲೂ 100 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಖ್ಯಾತಿ ಅವರದಾಗಲಿದೆ. ಅವರು ಟ್ವೆಂಟಿ–20 ಕ್ರಿಕೆಟ್‌ನ 100ನೇ ಪಂದ್ಯವನ್ನೂ ಭಾರತದ ವಿರುದ್ಧವೇ ಆಡಿದ್ದರು.

ಮಿಷೆಲ್‌ ಸ್ಯಾಂಟ್ನರ್ ಬದಲಿಗೆ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ ಅವರನ್ನು ಆತಿಥೇಯರು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಕೈಲ್ ಜೆಮೀಸನ್ ಟೆಸ್ಟ್‌ಗೆ ಪದಾರ್ಪಣೆ ಮಾಡಲು ಕಾತರರಾಗಿದ್ದು ಬೌಲ್ಟ್ ಮತ್ತು ಟಿಮ್ ಸೌಥಿ ಜೋಡಿಯೊಂದಿಗೆ ವೇಗದ ಬೌಲಿಂಗ್‌ಗೆ ಮೊನಚು ತುಂಬಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಎಡಗೈ ವೇಗಿ ನೀಲ್ ವ್ಯಾಗ್ನರ್ ಬುಧವಾರ ಮನೆಗೆ ತೆರಳಿದ್ದು ಅವರ ಬದಲಿಗೆ ಮ್ಯಾಟ್ ಹೆನ್ರಿ ಅವರನ್ನು ಕರೆಸಿಕೊಳ್ಳಲಾಗಿದೆ.

ಪೂಜಾರ, ಮಯಂಕ್ ಮೇಲೆ ಕಣ್ಣು:ಏಕದಿನ ಸರಣಿಯಲ್ಲಿ ವೈಫಲ್ಯ ಕಂಡಿದ್ದ ಮಯಂಕ್ ಅಗರವಾಲ್ ಕಳೆದ ವಾರ ನಡೆದಿದ್ದ ನ್ಯೂಜಿಲೆಂಡ್ ಇಲೆವನ್ ಎದುರಿನ ಅಭ್ಯಾಸ ಪಂದ್ಯದಲ್ಲಿ ಚೇತರಿಸಿಕೊಂಡು ಅರ್ಧಶತಕ ಗಳಿಸಿದ್ದರು. ಚೇತೇಶ್ವರ ಪೂಜಾರ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ರಿಷಭ್ ಪಂತ್ 70 ರನ್ ಗಳಿಸಿ ಮಿಂಚಿದ್ದರು. ಆ ಪಂದ್ಯದಲ್ಲಿ ಅವರು ವಿಕೆಟ್ ಕೀಪರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ ಟೆಸ್ಟ್‌ನಲ್ಲಿ ವೃದ್ಧಿಮಾನ್ ಸಹಾ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ರೋಹಿತ್ ಶರ್ಮಾ ಮೀನಖಂಡದ ಸೆಳೆತಕ್ಕೆ ಒಳಗಾಗಿರುವುದರಿಂದ ಅಗರವಾಲ್ ಜೊತೆ ಇನಿಂಗ್ಸ್ ಆರಂಭಿಸುವವರು ಯಾರು ಎಂಬುದೂ ಕುತೂಹಲಕ್ಕೆ ಕಾರಣವಾಗಿದೆ.

ತಂಡಗಳು: ಭಾರತ: ವಿರಾಟ್ ಕೊಹ್ಲಿ (ನಾಯಕ), ಮಯಂಕ್ ಅಗರವಾಲ್, ರವಿಚಂದ್ರನ್ ಅಶ್ವಿನ್, ಜಸ್‌ಪ್ರೀತ್ ಬೂಮ್ರಾ, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ರಿಷಭ್ ಪಂತ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ನವದೀಪ್ ಸೈನಿ, ಪೃಥ್ವಿ ಶಾ, ಶುಭಮನ್ ಗಿಲ್, ಹನುಮ ವಿಹಾರಿ, ಉಮೇಶ್ ಯಾದವ್, ಇಶಾಂತ್ ಶರ್ಮಾ.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್, ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರ್ಯಾಂಡ್‌ಹೋಂ, ಮ್ಯಾಟ್ ಹೆನ್ರಿ, ಕೈಲ್ ಜೆಮೀಸನ್, ಟಾಮ್ ಲಥಾಮ್, ಬಿ.ಜೆ. ವಾಟ್ಲಿಂಗ್ (ವಿಕೆಟ್ ಕೀಪರ್), ಡ್ಯಾರಿಲ್ ಮಿಷೆಲ್, ಹೆನ್ರಿ ನಿಕೋಲ್ಸ್, ಅಜಾಜ್ ಪಟೇಲ್, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವ್ಯಾಗ್ನರ್, .

ಆರಂಭ: ಶುಕ್ರವಾರ ಮುಂಜಾನೆ 4.00 (ಭಾರತೀಯ ಕಾಲಮಾನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.