ಮೌಂಟ್ ಮಾಂಗನುಯಿ, ನ್ಯೂಜಿಲೆಂಡ್: ಸತತ ಎರಡು ಪಂದ್ಯಗಳು ಸೂಪರ್ ಓವರ್‌ನಲ್ಲಿ ಕೊನೆಗೊಂಡ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟ್ವೆಂಟಿ–20 ಕ್ರಿಕೆಟ್ ಸರಣಿಯಲ್ಲಿ ಭಾರತ ಅಪರೂಪದ ಕ್ಲೀನ್ ಸ್ವೀಪ್ ಸಾಧನೆಗಾಗಿ ಹಾತೊರೆಯುತ್ತಿದೆ.
ಸರಣಿಯನ್ನು ವಶಪಡಿಸಿಕೊಂಡಿರುವ ನಂತರ ಕಳೆದ ಪಂದ್ಯವನ್ನೂ ಗೆಲ್ಲುವುದರೊಂದಿಗೆ ಭಾರತ 4–0 ಮುನ್ನಡೆ ಗಳಿಸಿದೆ. ಭಾನುವಾರ ಇಲ್ಲಿ ನಡೆಯಲಿರುವ ಕೊನೆಯ ಪಂದ್ಯದಲ್ಲೂ ಕೊಹ್ಲಿ ಬಳಗ ಎದುರಾಳಿಗಳನ್ನು ಮಣಿಸುವ ಹುಮ್ಮಸ್ಸಿನಲ್ಲಿದೆ.
2008ರಲ್ಲಿ ಇಂಗ್ಲೆಂಡ್ ಎದುರಿನ 2 ಪಂದ್ಯಗಳ ಸರಣಿಯನ್ನು ಸೋತಿದ್ದು ಹೊರತುಪಡಿಸಿದರೆ ಮೂರು ಅಥವಾ ಐದು ಪಂದ್ಯಗಳ ಟ್ವೆಂಟಿ–20 ಸರಣಿಯ ಎಲ್ಲ ಪಂದ್ಯಗಳನ್ನು ತವರಿನಲ್ಲಿ ನ್ಯೂಜಿಲೆಂಡ್ ಈ ವರೆಗೆ ಸೋತಿಲ್ಲ. ಆದ್ದರಿಂದ ಭಾನುವಾರದ ಪಂದ್ಯದಲ್ಲಿ ಗೆದ್ದು ಗೌರವ ಉಳಿಸಿಕೊಳ್ಳಲು ಆತಿಥೇಯರು ಪ್ರಯತ್ನಿಸಲಿದ್ದಾರೆ. ಆದರೆ ಭರವಸೆಯಲ್ಲಿರುವ ಭಾರತ ತಂಡವನ್ನು ಸುಲಭವಾಗಿ ಮಣಿಸಲು ಸಾಧ್ಯವಿಲ್ಲ ಎಂಬುದು ಕಳೆದ ನಾಲ್ಕು ಪಂದ್ಯಗಳಲ್ಲಿ ಕೇನ್ ವಿಲಿಯಮ್ಸನ್ ಬಳಗ ತಿಳಿದುಕೊಂಡಿದೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿರುವ ಭಾರತ ಕಳೆದ ಪಂದ್ಯದಲ್ಲಿ ಪ್ರಯೋಗಗಳನ್ನು ಮಾಡಿತ್ತು. ಆದರೆ ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆ, ಲಭಿಸಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಸಂಜು ಸ್ಯಾಮ್ಸನ್ ವೇಗದ ಬೌಲರ್‌ಗಳನ್ನು ಎದುರಿಸುವಲ್ಲಿ ಎಡವಿದ್ದರು. ದುಬೆ, ವೇಗಿಗಳು ಮತ್ತು ಸ್ಪಿನ್ನರ್‌ಗಳ ವಿರುದ್ಧ ಮಂಕಾಗಿದ್ದರು. ಸಂಜುಗೆ ಇನ್ನೊಂದು ಅವಕಾಶ ನೀಡಲು ತಂಡದ ಆಡಳಿತ ಮುಂದಾಗಲಿದೆ.
ಶ್ರೇಯಸ್ ಅಯ್ಯರ್‌ಗೆ ಬಡ್ತಿ?: ಮನೀಷ್ ಪಾಂಡೆ ಆರನೇ ಕ್ರಮಾಂಕದಲ್ಲಿ ಉತ್ತಮವಾಗಿ ಆಡುತ್ತಿರುವುದರಿಂದ ಶ್ರೇಯಸ್ ಅಯ್ಯರ್ ಅವರಿಗೆ ಮೂರನೇ ಕ್ರಮಾಂಕಕ್ಕೆ ಬಡ್ತಿ ಸಿಗುವ ಸಾಧ್ಯತೆ ಇದೆ. ಆದರೆ ತಂಡದ ಖಾಯಂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಗಲಿಲ್ಲ.
ತಂಡ ವಹಿಸಿರುವ ಜವಾಬ್ದಾರಿಯನ್ನು ಕೆ.ಎಲ್.ರಾಹುಲ್ ಸರಿಯಾಗಿ ನಿಭಾಯಿಸುತ್ತಿದ್ದರೂ ಅವರ ಮೇಲಿನ ಭಾರವನ್ನು ಇಳಿಸುವುದಕ್ಕಾಗಿ ರಿಷಭ್ ಪಂತ್ ಕೈಗೆ ಗ್ಲೌಸ್ ನೀಡಲು ಆಡಳಿತ ಮುಂದಾಗಲಿದೆ. ನಾಲ್ಕನೇ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ ಭಾನುವಾರ ಆಡಲು ಇಳಿದರೆ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆಗಳು ಇವೆ. ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬೂಮ್ರಾಗೆ ವಿಶ್ರಾಂತಿ ನೀಡಿ ಮೊಹಮ್ಮದ್ ಶಮಿ ಅವರನ್ನು ಕರೆಸಿಕೊಳ್ಳುವ ನಿರ್ಧಾರಕ್ಕೆ ತಂಡದ ಆಡಳಿತ ಬರಲಿದೆ.
ಭುಜದ ನೋವಿನಿಂದ ಬಳಲಿದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಗುಣಮುಖರಾಗಿದ್ದು ಭಾನುವಾರ ಆಡಲಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 12.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.