ADVERTISEMENT

ಭಾರತ–‍ಪಾಕ್ ಪಂದ್ಯ ವೀಕ್ಷಿಸಿದ 16.7 ಕೋಟಿ ಮಂದಿ: ದಾಖಲೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 15:40 IST
Last Updated 9 ನವೆಂಬರ್ 2021, 15:40 IST
ಬಾಬರ್ ಆಜಂ ಮತ್ತು ವಿರಾಟ್ ಕೊಹ್ಲಿ
ಬಾಬರ್ ಆಜಂ ಮತ್ತು ವಿರಾಟ್ ಕೊಹ್ಲಿ   

ಮುಂಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವ ಟ್ವೆಂಟಿ–20 ಕ್ರಿಕೆಟ್ವಿಶ್ವಕಪ್ ಟೂರ್ನಿಯಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವನ್ನು ಜಗತ್ತಿನಾದ್ಯಂತ 16.7 ಕೋಟಿ ಜನರು ವೀಕ್ಷಿಸಿದ್ದಾರೆ.

ಇದು ನೂತನ ದಾಖಲೆ ಎಂದು ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್‌ ತಿಳಿಸಿದೆ.

2016ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಡೆದಿದ್ದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಸೆಮಿಫೈನಲ್ ಪಂದ್ಯವನ್ನು 13.6 ಕೋಟಿ ಜನ ವೀಕ್ಷಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ADVERTISEMENT

’ಅಕ್ಟೋಬರ್ 24ರಂದು ನಡೆದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವನ್ನು ನಮ್ಮ ನಿರೀಕ್ಷೆಯಂತೆ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ನೋಡಿದ್ದಾರೆ. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಜನರು ನೋಡಿದ ಪಂದ್ಯವಾಗಿದೆ‘ ಎಂದು ಸ್ಟಾರ್ ಸ್ಪೋರ್ಟ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಆ ಪಂದ್ಯದಲ್ಲಿ ಪಾಕಿಸ್ತಾನ ತಂಡವು 10 ವಿಕೆಟ್‌ಗಳಿಂದ ವಿರುದ್ಧ ಜಯ ಗಳಿಸಿತ್ತು.

ಟೂರ್ನಿಯ ಪಂದ್ಯಗಳನ್ನು ಹೋದ ವಾರದವರೆಗೆ ವೀಕ್ಷಿಸಿದವರ ಸಂಖ್ಯೆಯು ಅಂದಾಜು 23 ಕೋಟಿಗೂ ಹೆಚ್ಚಿದೆ.

’ಭಾರತ ತಂಡವು ಸೆಮಿಫೈನಲ್ ಪ್ರವೇಶಿಸದೇ ಟೂರ್ನಿಯಿಂದ ನಿರ್ಗಮಿಸಿದೆ. ಪಾಕ್ ಪಂದ್ಯದ ಎದುರಿನ ಸೋಲಿನಿಂದ ಅಭಿಮಾನಿಗಳಿಗೆ ಬೇಸರವಾಗಿರುವುದು ನಿಜ. ಆದರೆ, ಟೂರ್ನಿಯ ಪಂದ್ಯಗಳನ್ನು ವೀಕ್ಷಿಸುತ್ತಿರುವ ಜನರ ಸಂಖ್ಯೆಯನ್ನು ನೋಡಿದರೆ, ಕ್ರಿಕೆಟ್‌ನ ಆಕರ್ಷಣೆ ಮತ್ತು ಶಕ್ತಿಯ ಅರಿವಾಗುತ್ತದೆ‘ ಎಂದು ಸ್ಟಾರ್ ಸ್ಪೋರ್ಟ್ಸ್‌ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.