ದುಬೈ: ಭಾರತ ಕ್ರಿಕೆಟ್ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದೆ.
ಮೆಲ್ಬರ್ನ್‌ನಲ್ಲಿ ಮಂಗಳವಾರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಭಾರತವು ಎಂಟು ವಿಕೆಟ್‌ಗಳಿಂದ ಗೆದ್ದಿತು. ಅದರಿಂದಾಗಿ 30 ಪಾಯಿಂಟ್ಸ್ ಗಳಿಸಿತ್ತು. ಒಟ್ಟು 390 ಅಂಕ ಗಳಿಸಿರುವ ಭಾರತವು ಶೇ 72.2ರ ಸರಾಸರಿ ಹೊಂದಿದೆ.
ಆಸ್ಟ್ರೇಲಿಯಾ ತಂಡವು ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಭಾರತ ಎದುರಿನ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಸ್ಲೋ ಓವರ್ ರೇಟ್ ಇದ್ದ ಕಾರಣ ದಂಡರೂಪವಾಗಿ ನಾಲ್ಕು ಪಾಯಿಂಟ್ಸ್‌ಗಳನ್ನು ಆಸ್ಟ್ರೇಲಿಯಾ ಕಳೆದುಕೊಂಡಿತ್ತು. ಆದರೂ ಅದರ ಖಾತೆಯಲ್ಲಿ 322 ಅಂಕಗಳು ಇವೆ. ಶೇ 76.6ರಷ್ಟು ಸರಾಸರಿ ಹೊಂದಿದೆ.
ಬುಧವಾರ ಪಾಕಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ 101 ರನ್‌ಗಳಿಂದ ಗೆದ್ದ ನ್ಯೂಜಿಲೆಂಡ್ ತಂಡವು ಶೇ 66.7ರ ಸರಾಸರಿಯೊಂದಿಗೆ ಮೂರನೇ ಸ್ಥಾನದಲ್ಲಿದೆ.
ಕೋವಿಡ್ –19 ಸೃಷ್ಟಿಸಿದ್ದ ಬಿಕ್ಕಟ್ಟಿನ ಕಾರಣ ಕೆಲವು ಟೆಸ್ಟ್ ಸರಣಿಗಳು ರದ್ದಾಗಿದ್ದವು. ಆದ್ದರಿಂದ ವಿಶ್ವ ಚಾಂಪಿಯನ್‌ಷಿಪ್ ಅರ್ಹತಾ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿತ್ತು. ಶೇಕಡಾವಾರು ಅಂಕಗಳಲ್ಲಿ ಮೊದಲ ಎರಡು ಸ್ಥಾನ ಗಳಿಸುವ ತಂಡಗಳು ಫೈನಲ್ ಪ್ರವೇಶಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.