ADVERTISEMENT

ಮೂರನೇ ಟಿ20 ಪಂದ್ಯ: ಆಲ್‌ರೌಂಡ್ ಪ್ರದರ್ಶನಕ್ಕೆ ಒಲಿದ ಜಯ

ಮೂರನೇ ಟಿ20: ಭಾರತಕ್ಕೆ 2–1 ಮುನ್ನಡೆ* ಗಿಲ್ ಅರ್ಧ ಶತಕ, ಸುಂದರ್‌ಗೆ 3 ವಿಕೆಟ್‌

ಪಿಟಿಐ
Published 11 ಜುಲೈ 2024, 0:28 IST
Last Updated 11 ಜುಲೈ 2024, 0:28 IST
ಶುಭಮನ್‌ ಗಿಲ್‌
ಶುಭಮನ್‌ ಗಿಲ್‌   

ಹರಾರೆ: ನಾಯಕ ಶುಭಮನ್ ಗಿಲ್ ಮತ್ತು ಋತುರಾಜ್ ಗಾಯಕವಾಡ ಅವರು ಗುಣಮಟ್ಟದ ಇನಿಂಗ್ಸ್ ಆಡಿದರು. ನಂತರ ಬೌಲರ್‌ಗಳ ಸಾಂಘಿಕ ಪ್ರಯತ್ನದ ಬಲದಿಂದ ಭಾರತ ತಂಡ ಬುಧವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 23 ರನ್‌ಗಳಿಂದ ಸೋಲಿಸಿತು.

ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ಭಾರತ ತಂಡವು ಗಿಲ್‌ (66, 49 ಎಸೆತ), ಯಶಸ್ವಿ ಜೈಸ್ವಾಲ್‌ (36, 27ಎ) ಮತ್ತು ಗಾಯಕವಾಡ (49, 28ಎ) ಅವರ ಉಪಯುಕ್ತ ಆಟದ ನೆರವಿನಿಂದ 4 ವಿಕೆಟ್‌ಗೆ 182 ರನ್‌ಗಳ ಉತ್ತಮ ಮೊತ್ತ ಗಳಿಸಿತು. ಆರಂಭದಿಂದಲೇ ವಿಕೆಟ್‌ಗಳನ್ನು ಕಳೆದುಕೊಂಡ ಜಿಂಬಾಬ್ವೆ ಯಾವ ಹಂತದಲ್ಲೂ ಗುರಿಸಾಧಿಸುವಂತೆ ಕಾಣಲಿಲ್ಲ. ಡಿಯಾನ್ ಮೈರ್ಸ್ (ಅಜೇಯ 65, 49 ಎ, 4x7, 6x1) ಮಾತ್ರ ಪ್ರತಿರೋಧ ಪ್ರದರ್ಶಿಸಿದರು. ತಂಡ 6 ವಿಕೆಟ್‌ಗೆ 159 ರನ್ ಗಳಿಸಿ ಓವರುಗಳನ್ನು ಪೂರೈಸಿತು.

ಆಫ್‌ ಸ್ಪಿನ್ನರ್‌ ವಾಷಿಂಗ್ಟನ್ ಸುಂದರ್ ಮೂರು ವಿಕೆಟ್‌ ಪಡೆದರೆ, ಆವೇಶ್ ಖಾನ್‌ ಎರಡು ವಿಕೆಟ್ ಗಳಿಸಿದರು.

ADVERTISEMENT

ಐದು ಪಂದ್ಯಗಳ ಸರಣಿಯಲ್ಲಿ ಭಾರತ 2–1 ಮುನ್ನಡೆ ಪಡೆದಿದೆ. ನಾಲ್ಕನೇ ಪಂದ್ಯ ಶನಿವಾರ ನಡೆಯಲಿದೆ.

ಆವೇಶ್ ಖಾನ್ ಮಾಡಿದ ಎರಡನೇ ಓವರ್‌ನಲ್ಲಿ ಆರಂಭ ಆಟಗಾರ ವೆಸ್ಲಿ ಮಧೆವೆರೆ ವಿಕೆಟ್‌ ಕಳೆದುಕೊಂಡ ಆತಿಥೇಯ ತಂಡ ಬಳಿಕ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಮೈರ್ಸ್‌ ಮತ್ತು ಕ್ಲೈವ್‌ ಮದಂಡೆ (36, 26ಎ) ಅವರು ಆರನೇ ವಿಕೆಟ್‌ಗೆ 57 ಎಸೆತಗಳಲ್ಲಿ 77ರನ್ ಸೇರಿಸಿದ್ದರಿಂದ ಜಿಂಬಾಬ್ವೆ ಸೋಲಿನ ಅಂತರ ಗಣನೀಯವಾಗಿ ಕಡಿಮೆಯಾಯಿತು.

ಈ ಪಂದ್ಯಕ್ಕೆ, ಗಿಲ್‌ ನೇತೃತ್ವದ ತಂಡದಲ್ಲಿ ವಿಶ್ವಕಪ್ ವಿಜೇತ ತಂಡದ ಜೈಸ್ವಾಲ್‌, ಸಂಜು ಸ್ಯಾಮ್ಸನ್‌ ಮತ್ತು ದುಬೆ ಅವರು ಸೇರ್ಪಡೆಗೊಂಡರು. ಸಂಜು ಐದನೇ ಕ್ರಮಾಂಕದಲ್ಲಿ ಆಡಿ ಅಜೇಯ 12 ರನ್ ಗಳಿಸಿದರು.

ಜೈಸ್ವಾಲ್ ಆರಂಭ ಆಟಗಾರನಾಗಿ ಬಿರುಸಿನ ಆಟಕ್ಕಿಳಿದರು. ಆಫ್‌ ಸ್ಪಿನ್ನರ್‌ ಬ್ರಿಯಾನ್‌ ಬೆನೆಟ್‌ ಮಾಡಿದ ಮೊದಲ ಓವರ್‌ನಲ್ಲೇ ಎರಡು ಬೌಂಡರಿ ಜೊತೆ, ಡೀಪ್‌ ಮಿಡ್‌ವಿಕೆಟ್‌ಗೆ ಸಿಕ್ಸರ್ ಎತ್ತಿದರು. ಗಿಲ್ ಕೂಡ ಹಿಂದೆಬೀಳಲಿಲ್ಲ. ರಿಚರ್ಡ್‌ ಗರಾವಾ ಬೌಲಿಂಗ್‌ನಲ್ಲಿ ಫೈನ್‌ಲೆಗ್‌ಗೆ ಸಿಕ್ಸರ್ ಬಾರಿಸಿದರು.

ಮೊತ್ತ 67 ಆಗಿದ್ದಾಗ ಜೈಸ್ವಾಲ್‌ ನಿರ್ಗಮಿಸಿದರು. ಜಿಂಬಾಬ್ವೆ ನಾಯಕ ಸಿಕಂದರ್ ರಝಾ ಈ ಜೊತೆಯಾಟ ಮುರಿದರು. ಹಿಂದಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ಅಭಿಷೇಕ್ ವರ್ಮಾ (10) ಹೆಚ್ಚು ಹೊತ್ತು ನಿಲ್ಲಲಿಲ್ಲ. ಗಿಲ್‌ (4x7, 6x3) ಮತ್ತು ಗಾಯಕವಾಡ ಮೂರನೇ ವಿಕೆಟ್‌ಗೆ 48 ಎಸೆತಗಳಲ್ಲಿ 72 ರನ್‌ ಜೊತೆಯಾಟವಾಡಿ ತಂಡದ ಮೊತ್ತ ಹೆಚ್ಚುವಂತೆ ನೋಡಿಕೊಂಡರು. ಗಾಯಕವಾಡ ಆಟದಲ್ಲಿ ಮೂರು ಸಿಕ್ಸರ್‌, ನಾಲ್ಕು ಬೌಂಡರಿಗಳಿದ್ದವು.

ಸ್ಕೋರುಗಳು: ಭಾರತ: 20 ಓವರುಗಳಲ್ಲಿ 4 ವಿಕೆಟ್‌ಗೆ 182 (ಯಶಸ್ವಿ ಜೈಸ್ವಾಲ್‌ 36, ಶುಭಮನ್ ಗಿಲ್ 66, ಋತುರಾಜ್ ಗಾಯಕವಾಡ 49, ಸಂಜು ಸ್ಯಾಮ್ಸನ್‌ ಔಟಾಗದೇ 12; ಬ್ಲೆಸ್ಸಿಂಗ್ ಮುಝರಾಬಾನಿ 25ಕ್ಕೆ2, ಸಿಕಂದರ್‌ ರಝಾ 24ಕ್ಕೆ2); ಜಿಂಬಾಬ್ವೆ: 20 ಓವರುಗಳಲ್ಲಿ 6 ವಿಕೆಟ್‌ಗೆ 159 (ಡಿಯಾನ್ ಮೈರ್ಸ್‌ ಔಟಾಗದೇ 65, ಕ್ಲೈವ್ ಮದಂಡೆ 37, ವೆಲಿಂಗ್ಟನ್‌ ಮಸಕದ್ಜ ಔಟಾಗದೇ 18; ಆವೇಶ್ ಖಾನ್ 39ಕ್ಕೆ2, ವಾಷಿಂಗ್ಟನ್ ಸುಂದರ್ 15ಕ್ಕೆ3). ಪಂದ್ಯದ ಆಟಗಾರ: ವಾಷಿಂಗ್ಟನ್ ಸುಂದರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.