ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಕದ ತಟ್ಟುತ್ತಿರುವ ‘ಯುವ ಪ್ರತಿಭೆ’ಗಳು ತುಂಬಿರುವ ಭಾರತ ‘ಎ’ ತಂಡವು ಶುಕ್ರವಾರ ದಕ್ಷಿಣ ಆಫ್ರಿಕಾ ‘ಎ ವಿರುದ್ಧದ ಎರಡನೇ ‘ಟೆಸ್ಟ್’ನಲ್ಲಿಯೂ ಜಯಗಳಿಸುವ ಆತ್ಮವಿಶ್ವಾಸದಲ್ಲಿದೆ.
ಬೆಂಗಳೂರು ಹೊರವಲಯದ ಆಲೂರಿನಲ್ಲಿರುವ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಮೂರು ದಿನಗಳ ಹಿಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುಲಭ ಜಯದ ನಿರೀಕ್ಷೆಯಲ್ಲಿದ್ದ ಭಾರತ ‘ಎ’ ತಂಡವನ್ನು ಬಹಳಷ್ಟು ಕಾಡಿದ್ದ ದಕ್ಷಿಣ ಆಫ್ರಿಕಾ ‘ಎ’ ತಂಡವು ಕಠಿಣ ಸವಾಲು ಒಡ್ಡಿತ್ತು. ಆದರೆ, ತಾಳ್ಮೆಯ ಪರೀಕ್ಷೆಯಂತಿದ್ದ ಆಟದಲ್ಲಿ ಆತಿಥೇಯರು ಗೆದ್ದಿದ್ದರು.
ಆ ಪಂದ್ಯದಲ್ಲಿ ಮಧ್ಯಮವೇಗಿ ಮೊಹಮ್ಮದ್ ಸಿರಾಜ್ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು. ಮಯಂಕ್ ಅಗರವಾಲ್ (220 ರನ್) ದ್ವಿಶತಕ ಮತ್ತು ಪೃಥ್ವಿ ಶಾ (136 ರನ್) ಶತಕ ಬಾರಿಸಿದ್ದರು. ಇದರಿಂದಾಗಿ ಇನಿಂಗ್ಸ್ ಮತ್ತು 30 ರನ್‌ಗಳಿಂದ ತಂಡವು ಜಯಿಸಿತ್ತು.
ದಕ್ಷಿಣ ಆಫ್ರಿಕಾ ‘ಎ’ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರು. ಆದರೆ ಮಧ್ಯಮ ಕ್ರಮಾಂಕದ ಆಟಗಾರ, ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ರೂಡಿ ಸೆಕೆಂಡ್ ಮಾತ್ರ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕಗಳನ್ನು (94 ಮತ್ತು 94) ಗಳಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲಂತೂ ತಮ್ಮ ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಲು ಹರಸಾಹಸಪಟ್ಟಿದ್ದರು. ಶಾನ್‌ವಾನ್ ಬರ್ಗ್ (50 ರನ್) ಜೊತೆಯಲ್ಲಿ ಆರನೇ ವಿಕೆಟ್‌ಗೆ ದೀರ್ಘ ಪಾಲುದಾರಿಕೆ ಆಟವಾಡಿದ್ದರು. ಇವರಿಬ್ಬರನ್ನು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ಲಯಕ್ಕೆ ಮರಳುವ ಅಗತ್ಯ ಇದೆ. ಆತಿಥೇಯ ತಂಡದ ಸಿರಾಜ್, ನವದೀಪ್ ಸೈನಿ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರನ್ನು ಎದುರಿಸುವ ಸವಾಲನ್ನು ಮೀರಿ ನಿಲ್ಲಬೇಕಿದೆ.
ಬೌಲಿಂಗ್ ವಿಭಾಗದಲ್ಲಿಯೂ ಪ್ರವಾಸಿ ಬಳಗವು ಪರಿಣಾಮಕಾರಿಯಾಗಿರಲಿಲ್ಲ. ಬೇರನ್ ಹೆನ್ರಿಕ್ಸ್, ಡನ್ ಒಲಿವರ್ ಮತ್ತು ಡೇನ್ ಪೀಡ್ತ್ ಅವರು ಭಾರತ ‘ಎ’ ತಂಡದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ಯೋಜನೆ ರೂಪಿಸುವ ಅಗತ್ಯವಿದೆ. ಇಲ್ಲದಿದ್ದರೆ ಆಲೂರು ಕ್ರೀಡಾಂಗಣದಲ್ಲಿ ಉತ್ತಮ ದಾಖಲೆಗಳನ್ನು ಹೊಂದಿರುವ ಮಯಂಕ್ ಅಗರವಾಲ್ ಮತ್ತು ಆರ್. ಸಮರ್ಥ್ ಅವರು ರನ್ ಹೊಳೆ ಹರಿಸುವುದರಲ್ಲಿ ಅನುಮಾನವಿಲ್ಲ. ತಂಡದ ನಾಯಕ ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್ ಮತ್ತು ಹನುಮವಿಹಾರಿ ಕೂಡ ಮಧ್ಯಮ ಕ್ರಮಾಂಕದಲ್ಲಿ ರನ್‌ಗಳನ್ನು ಪೇರಿಸಿದರೆ ಬೃಹತ್ ಮೊತ್ತ ಖಚಿತ.
**
ತಂಡಗಳು ಇಂತಿವೆ
ಭಾರತ ‘ಎ’: ಶ್ರೇಯಸ್ ಅಯ್ಯರ್ (ನಾಯಕ), ಪೃಥ್ವಿ ಶಾ, ಆರ್. ಸಮರ್ಥ್, ಮಯಂಕ್ ಅಗರವಾಲ್, ಅಭಿಮನ್ಯು ಈಶ್ವರನ್, ಶ್ರೀಕರ ಭಾರತ (ವಿಕೆಟ್‌ಕೀಪರ್), ಹನುಮವಿಹಾರಿ, ಅಂಕಿತ್ ಭಾವ್ನೆ, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಜಯಂತ್ ಯಾದವ್, ರಜನೀಶ್ ಗುರ್ಬಾನಿ, ನವದೀಪ್ ಸೈನಿ, ಅಂಕಿತ್ ರಜಪೂತ್, ಮೊಹಮ್ಮದ್ ಸಿರಾಜ್. ಮುಖ್ಯ ಕೋಚ್: ರಾಹುಲ್ ದ್ರಾವಿಡ್.
ದಕ್ಷಿಣ ಆಫ್ರಿಕಾ ‘ಎ’: ಖಯಾಯ ಜೊಂಡೊ (ನಾಯಕ), ಜುಬೇರ್ ಹಮ್ಜಾ, ಸೆರೆಲ್ ಎರ್ವಿ, ಪೀಟರ್ ಮೆಲಾನ್, ಸೆನುರನ್ ಮುತುಸಾಮಿ, ರೆಸ್ಸೀ ವ್ಯಾನ್ ಡೆರ್ ದಸ್ಸೆನ್, ರೂಡಿ ಸೆಕಂಡ್ (ವಿಕೆಟ್‌ಕೀಪರ್), ಎಮ್‌ತಿವೆಕಾವಾ ನೆಬೆ, ಡುನ್ ಒಲಿವರ್, ಡ್ವೈನ್ ಪ್ರಿಟೋರಿಯಸ್, ಮೆಲೂಸಿ ಸಿಬೊಟೊ, ಶಾನ್ ವಾನ್ ಬರ್ಗ್, ಬೇರನ್ ಹೆನ್ರಿಕ್ಸ್, ಅನ್ರಿಚ್ ನಾರ್ಟೀ, ಡೇನ್ ಪೀಡ್ತ್.
ಪಂದ್ಯ ಆರಂಭ: ಬೆಳಿಗ್ಗೆ 9.30.
ಸ್ಥಳ: ಕೆಎಸ್‌ಸಿಎ ಕ್ರೀಡಾಂಗಣ, ಆಲೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.