ADVERTISEMENT

Bishan Singh Bedi: ಬಿಷನ್‌ ಬೇಡಿಗೆ ಗೌರವ ಸಲ್ಲಿಸಿದ ಟೀಮ್ ಇಂಡಿಯಾ ಆಟಗಾರರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಅಕ್ಟೋಬರ್ 2023, 9:37 IST
Last Updated 29 ಅಕ್ಟೋಬರ್ 2023, 9:37 IST
<div class="paragraphs"><p>ಟೀಮ್ ಇಂಡಿಯಾ ಆಟಗಾರರು</p></div>

ಟೀಮ್ ಇಂಡಿಯಾ ಆಟಗಾರರು

   

–ಪಿಟಿಐ ಚಿತ್ರ

ಲಖನೌ: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಭಾನುವಾರ) ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದೆ.

ADVERTISEMENT

ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು, ಇತ್ತೀಚಿಗೆ ನಿಧನರಾದ ಭಾರತದ ಸ್ಪಿನ್‌ ದಿಗ್ಗಜ ಬಿಷನ್‌ ಸಿಂಗ್ ಬೇಡಿ ಅವರ ಸ್ಮರಣಾರ್ಥ ಕಪ್ಪು ಪಟ್ಟಿಯನ್ನು ಧರಿಸಿ ಗೌರವ ಸಲ್ಲಿಸಿದ್ದಾರೆ.

ನೇರ ಮತ್ತು ನಿಷ್ಠುರ ಮಾತುಗಳಿಗೆ ಹೆಸರಾಗಿದ್ದ ಬಿಷನ್‌ ಸಿಂಗ್ ಬೇಡಿ (77) ಅವರು ದೀರ್ಘಕಾಲದ ಅನಾರೋಗ್ಯದಿಂದ ಸೋಮವಾರ ನಿಧನರಾಗಿದ್ದರು.

ಅಮೃತಸರದಲ್ಲಿ 1946ರಲ್ಲಿ ಜನಿಸಿದ ಎಡಗೈ ಸ್ಪಿನ್ ಮಾಂತ್ರಿಕ ಬೇಡಿ 67 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು 266 ವಿಕೆಟ್‌ಗಳನ್ನು ಪಡೆದಿದ್ದರು. 14 ಬಾರಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ ಪಡೆದಿದ್ದಾರೆ. ಒಂದು ಬಾರಿ ಹತ್ತು ವಿಕೆಟ್‌ಗಿಂತ ಹೆಚ್ಚು ಪಡೆದಿದ್ದಾರೆ. ಬೇಡಿ ಅವರಿಗೆ ಪತ್ನಿ ಅಂಜು, ಪುತ್ರ ಅಂಗದ್ ಮತ್ತು ಪುತ್ರಿ ನೇಹಾ ಇದ್ದಾರೆ.

ಭಾರತದ ಕ್ರಿಕೆಟ್‌ ಸುವರ್ಣಯುಗದ ‘ಸ್ಪಿನ್‌ ಚತುಷ್ಟ’ರಲ್ಲಿ ಅವರು ಒಬ್ಬರಾಗಿದ್ದರು. ಕರ್ನಾಟಕದ ಎರಪಳ್ಳಿ ಪ್ರಸನ್ನ, ಭಗವತ್ ಚಂದ್ರಶೇಖರ್ ಮತ್ತು ತಮಿಳುನಾಡಿನ ಶ್ರೀನಿವಾಸ ವೆಂಕಟರಾಘವನ್ ಅವರು ಇತರ ಮೂವರು ಸ್ಪಿನ್ ಮಾಂತ್ರಿಕರು. 1966 ರಿಂದ 1978ರವರೆಗೆ ಈ ನಾಲ್ವರು ತಂಡದ ಭಾಗವಾಗಿದ್ದರು.

ಮನ್ಸೂರ್‌ ಅಲಿ ಖಾನ್ ಪಟೌಡಿ ಅವರ ಉತ್ತರಾಧಿಕಾರಿಯಾಗಿ 22 ಟೆಸ್ಟ್‌ಗಳಲ್ಲಿ ಭಾರತ ತಂಡವನ್ನು ಅವರು ಮುನ್ನಡೆಸಿದ್ದಾರೆ. ತಂಡದ ಕೋಚ್‌ ಆಗಿದ್ದರು. ಅಲ್ಪಕಾಲ– 1990ರಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ ಪ್ರವಾಸದ ವೇಳೆ ಮ್ಯಾನೇಜರ್‌ ಆಗಿಯೂ ಕಾರ್ಯನಿರ್ವಹಿಸಿದ್ದರು. ರಾಷ್ಟ್ರೀಯ ತಂಡದ ಆಯ್ಕೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಭಾರತ ತಂಡದಲ್ಲಿ ಆಡಿರುವ ಮಣಿಂದರ್ ಸಿಂಗ್ ಮತ್ತು ಮುರಳಿ ಕಾರ್ತಿಕ್ ಅವರು ಬೇಡಿ ಅವರ ಶಿಷ್ಯರು.

ತಮ್ಮ ಹರಿತ ಸ್ಪಿನ್‌ ಬೌಲಿಂಗ್ ರೀತಿ ಅವರ ಮಾತುಗಳೂ ಅಷ್ಟೇ ಮೊನಚು. ನಿಷ್ಠುರ ಮಾತು, ಟೀಕೆಗಳಿಂದಲೂ ಸುದ್ದಿಯಾಗುತ್ತಿದ್ದರು. ಆಟವನ್ನು ಕಾಡುತ್ತಿರುವ ವಿಷಯಗಳಿಗೆ, ಕ್ರಿಕೆಟಿಗರ ಹಿತಾಸಕ್ತಿ ವಿಷಯದಲ್ಲಿ, ಅನ್ಯಾಯಕ್ಕೊಳಗಾದ ಕ್ರಿಕೆಟಿಗರ ಪರ ಧ್ವನಿಯೆತ್ತುವಾಗಲೂ ಅವರ ಅಭಿಪ್ರಾಯಗಳು ಹರಿತ ಬಾಣದಂತಿದ್ದವು.

‘ಟೀಕಾಕಾರರು ಅವರನ್ನು ರೆಬೆಲ್‌ ಎಂದು ಕರೆಯಬಹುದು. ಅದು ತಪ್ಪು. ನನ್ನ ಪ್ರಕಾರ ಅವರು ತಮ್ಮ ಹಕ್ಕುಗಳನ್ನು ಚೆನ್ನಾಗಿ ತಿಳಿದುಕೊಂಡ ಕ್ರಿಕೆಟಿಗ’ ಎಂದು ಬೇಡಿ ಅವರ ಬಗ್ಗೆ ಕಪಿಲ್‌ ದೇವ್ ಅವರು ಪುಸ್ತಕವೊಂದರಲ್ಲಿ ಬರೆದಿದ್ದಾರೆ.

‘ಅವರು ಕ್ರಿಕೆಟಿಗರ ಪರ ನಿಲ್ಲುತ್ತಿದ್ದರು. ಅವರ ಪಂದ್ಯ ಸಂಭಾವನೆ ಹೆಚ್ಚಿಸಲು, ಪ್ರಯಾಣ, ವಸತಿ ಸೌಲಭ್ಯ ಉತ್ತಮಗೊಳಿಸಲು ಹೋರಾಡಿದ್ದರು. ಅವರು ಭಾರತದ ಕ್ರಿಕೆಟ್‌ ಹೆಮ್ಮೆಪಡುವಂತೆ ಮಾಡಿದ್ದರು’ ಎಂದು ಕಪಿಲ್ ಮೆಚ್ಚಿದ್ದರು.

1976–77ರಲ್ಲಿ ಇಂಗ್ಲೆಂಡ್‌ ತಂಡದ ಭಾರತ ಪ್ರವಾಸದ ವೇಳೆ, ಆ ತಂಡದ ವೇಗಿ ಜಾನ್‌ ಲಿವರ್ ಅವರು ಚೆಂಡಿಗೆ ಹೊಳ‍ಪು ನೀಡಲು ಪೆಟ್ರೋಲಿಯಂ ಜೆಲ್ಲಿ ಬಳಸಿದ್ದರು ಎಂದು ಬೇಡಿ ಆರೋಪಿಸಿದ್ದರು. ಆ ಆರೋಪವನ್ನು ನಂತರ ತಳ್ಳಿಹಾಕಲಾಯಿತು.

1978ರಲ್ಲಿ ಏಕದಿನ ಪಂದ್ಯವನ್ನು ಬಿಟ್ಟುಕೊಟ್ಟು ಸುದ್ದಿಯಾಗಿದ್ದರು. ಪಾಕಿಸ್ತಾನ ವಿರುದ್ಧದ ಆ ಪಂದ್ಯದಲ್ಲಿ ಸರ್ಫರಾಜ ನವಾಜ್ ಅವರು ನಾಲ್ಕು ಬೌನ್ಸರ್‌ಗಳನ್ನು ಎಸೆದಿದ್ದು ಅಂಪೈರ್‌ಗಳು ವೈಡ್‌ ಕೊಡದ ಕಾರಣ ಅವರು ಆಟ ಮುಂದುವರಿಸಲು ನಿರಾಕರಿಸಿದ್ದರು. ಅವರು ಶ್ರೀಲಂಕಾದ ಸ್ಪಿನ್‌ ದಿಗ್ಗಜ ಮುತ್ತಯ್ಯ ಮುರಳೀಧರನ್ ಅವರು ‘ಥ್ರೊ’ ಮಾಡುತ್ತಾರೆ ಎಂದೂ ದೂರಿದ್ದರು.

‘ಮುರಳಿ ಚಕ್ ಮಾಡುತ್ತಾರೆ. ಅದನ್ನು ಬೌಲಿಂಗ್‌ ಎಂದು ಹೇಗೆ ಕರೆಯುತ್ತೀರಿ? ಅವರು ಚೆಂಡೆಸೆಯುವ ವೇಳೆ ಭುಜದ ಬಳಕೆ ಮಾಡುತ್ತಿರಲಿಲ್ಲ. ಅವರು ಒಳ್ಳೆಯ ಜಾವೆಲಿನ್‌ ಥ್ರೋವರ್ ರೀತಿ ಕಾಣುತ್ತಾರೆ’ ಎಂದು ಲೇವಡಿ ಮಾಡಿದ್ದರು.

ಬೇಡಿ ದೀರ್ಘಕಾಲ ಕೋಚ್‌ ಆಗಿಯೂ ಕೆಲಸ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್‌ ಪ್ರವರ್ಧಮಾನಕ್ಕೆ ಬರುವ ಸಂದರ್ಭವದು. ‘ಅವರನ್ನು ನೆಟ್ಸ್‌ನಲ್ಲಿ ಎದುರಿಸಿದ ಭಾಗ್ಯ ನನ್ನದು. ಅವರನ್ನು ಎದುರಿಸುವಾಗ ನಾನು ಅತ್ಯುತ್ತಮ ರೀತಿ ಸಜ್ಜಾಗಬೇಕಿತ್ತು’ ಎಂದು ತೆಂಡೂಲ್ಕರ್‌ ಒಮ್ಮೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.