ADVERTISEMENT

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಭಾರತದ ವನಿತೆಯರಿಗೆ ಭರ್ಜರಿ ಜಯ

ಪಿಟಿಐ
Published 1 ಜುಲೈ 2024, 11:39 IST
Last Updated 1 ಜುಲೈ 2024, 11:39 IST
<div class="paragraphs"><p>ಗೆಲುವಿನ ಸಂಭ್ರಮದಲ್ಲಿಭಾರತದ ವನಿತೆಯರು</p></div>

ಗೆಲುವಿನ ಸಂಭ್ರಮದಲ್ಲಿಭಾರತದ ವನಿತೆಯರು

   

–ಪಿಟಿಐ ಚಿತ್ರ

ಚೆನ್ನೈ: ಬೌಲರ್‌ಗಳ ಸಂಘಟಿತ ದಾಳಿಯ ಬಲದಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ಎದುರು ಇಲ್ಲಿ ನಡೆದ ಏಕೈಕ ಟೆಸ್ಟ್‌ನಲ್ಲಿ 10 ವಿಕೆಟ್‌ಗಳ ಜಯ ದಾಖಲಿಸಿತು.

ADVERTISEMENT

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡಕ್ಕೆ ಸೋಮವಾರ 37 ರನ್‌ಗಳ ಗೆಲುವಿನ ಗುರಿಯೊಡ್ಡಿತು. ಇದನ್ನು ಆತಿಥೇಯ ಬಳಗವು 9.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ  ನಿರಾಯಾಸವಾಗಿ ಮುಟ್ಟಿತು. ಶುಭಾ ಸತೀಶ್ (ಔಟಾಗದೆ 13) ಮತ್ತು ಶಫಾಲಿ ವರ್ಮಾ (ಔಟಾಗದೆ 24) ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು.

ಭಾರತವು ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಸಲ ಹತ್ತು ವಿಕೆಟ್‌ಗಳ ಅಂತರದ ಜಯ ಸಾಧಿಸಿದೆ. 2002ರಲ್ಲಿ ಪಾರ್ಲ್‌ನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿಯೂ ದಕ್ಷಿಣ ಆಫ್ರಿಕಾ ವಿರುದ್ಧ ಹತ್ತು ವಿಕೆಟ್‌ಗಳಿಂದ ಜಯಿಸಿತ್ತು. 

ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 603 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡವು 266 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಸ್ನೇಹಾ ರಾಣಾ ಅವರು ಎಂಟು ವಿಕೆಟ್ ಗಳಿಸಿ ಪ್ರವಾಸಿ ತಂಡದ ಕುಸಿತಕ್ಕೆ ಕಾರಣರಾದರು.

ದಕ್ಷಿಣ ಅಫ್ರಿಕಾದ ಮೇಲೆ ಫಾಲೋ ಆನ್ ಹೇರಲಾಯಿತು. ಎರಡನೇ ಇನಿಂಗ್ಸ್‌ನಲ್ಲಿ ಪುಟಿದೆದ್ದ ದಕ್ಷಿಣ ಆಫ್ರಿಕಾ ದಿಟ್ಟ ಹೋರಾಟ ನಡೆಸಿತು. ನಾಯಕಿ ಲೌರಾ ವೊಲ್ವಾರ್ಟ್‌ (122; 314ಎ, 4X16) ಮತ್ತು ಸುನೆ ಲುಸ್ (109 ಎನ್) ಅವರಿಬ್ಬರೂ ಶತಕ ಬಾರಿಸಿದರು. ಇದರಿಂದಾಗಿ ತಂಡವು ಮುನ್ನಡೆ ಸಾಧಿಸಿತು. ಆದರೆ ದೊಡ್ಡ ಗುರಿ ನೀಡುವ ದಕ್ಷಿಣ ಆಫ್ರಿಕಾ ತಂಡದ ಗುರಿಗೆ ಆತಿಥೇಯ ಬೌಲಿಂಗ್ ಪಡೆ ಅಡ್ಡಿಯಾಯಿತು. 

ಈ ಇನಿಂಗ್ಸ್‌ನಲ್ಲಿಯೂ ಎರಡು ವಿಕೆಟ್ ಕಬಳಿಸಿದ ಆಫ್‌ಸ್ಪಿನ್ನರ್  ಸ್ನೇಹಾ ಮಿಂಚಿದರು. ದೀಪ್ತಿ ಶರ್ಮಾ ಹಾಗೂ ರಾಜೇಶ್ವರಿ ಗಾಯಕವಾಡ ಅವರೂ ತಲಾ ಎರಡು ವಿಕೆಟ್ ಗಳಿಸಿದರು. 

ಸಂಕ್ಷಿಪ್ತ ಸ್ಕೋರು

ಭಾರತ: 9.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ  37(ಶುಭಾ ಸತೀಶ್ ಔಟಾಗದೆ 13, ಶಫಾಲಿ ವರ್ಮಾ ಔಟಾಗದೆ 24)

ಮೊದಲ ಇನಿಂಗ್ಸ್: ಭಾರತ: 115.1 ಓವರ್‌ಗಳಲ್ಲಿ 6ಕ್ಕೆ603. ದಕ್ಷಿಣ ಆಫ್ರಿಕಾ: 84.3 ಓವರ್‌ಗಳಲ್ಲಿ 266.

ಎರಡನೇ ಇನಿಂಗ್ಸ್: ದಕ್ಷಿಣ ಆಫ್ರಿಕಾ (ಫಾಲೋ ಆನ್): 154.4 ಓವರ್‌ಗಳಲ್ಲಿ 373 (ಲೌರಾ ವೋಲ್ವಾರ್ಟ್ 122, ನದೈನ್ ಡಿ ಕ್ಲರ್ಕ್‌ 61, ಸಿನಾಲೊ ಜಫ್ತಾ 15, ಸ್ನೇಹಾ ರಾಣಾ 111ಕ್ಕೆ2, ದೀಪ್ತಿ ಶರ್ಮಾ 95ಕ್ಕೆ2, ರಾಜೇಶ್ವರಿ ಗಾಯಕವಾಡ  55ಕ್ಕೆ2)

ಫಲಿತಾಂಶ: ಭಾರತ ತಂಡಕ್ಕೆ 10 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ್ತಿ: ಸ್ನೇಹಾ ರಾಣಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.