ADVERTISEMENT

ಅಂತಿಮ ಪಂದ್ಯದಲ್ಲಿ ಭಾರತಕ್ಕೆ ನಿರಾಸೆ: ಇಂಗ್ಲೆಂಡ್‌ ತಂಡಕ್ಕೆ ಸರಣಿ ಗೆಲುವು

​ಪ್ರಜಾವಾಣಿ ವಾರ್ತೆ
Published 17 ಜುಲೈ 2018, 19:48 IST
Last Updated 17 ಜುಲೈ 2018, 19:48 IST
   

ಲೀಡ್ಸ್‌ :ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಜೋ ರೂಟ್‌ (ಔಟಾಗದೆ 100; 120ಎ, 10ಬೌಂ) ಮತ್ತು ನಾಯಕ ಇಯಾನ್‌ ಮಾರ್ಗನ್‌ (ಔಟಾಗದೆ 88; 108ಎ, 9ಬೌಂ, 1ಸಿ) ಅವರ ಸೊಬಗಿನ ಆಟ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಸೇರಿದ್ದ ಕ್ರಿಕೆಟ್‌ ಪ್ರಿಯರ ಮನಗೆದ್ದಿತು.

ಇವರು ಮುರಿಯದ ಮೂರನೇ ವಿಕೆಟ್‌ ಜೊತೆಯಾಟದಲ್ಲಿ ಗಳಿಸಿದ 186 ರನ್‌ಗಳ ನೆರವಿನಿಂದ ಇಂಗ್ಲೆಂಡ್‌ ತಂಡ ಮೂರನೇ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಭಾರತವನ್ನು ಸೋಲಿ ಸಿತು. ಇದರೊಂದಿಗೆ 2–1ರಿಂದ ಸರಣಿ ತನ್ನದಾಗಿಸಿಕೊಂಡಿತು.

ಬೌಲರ್‌ ಸ್ನೇಹಿಯಾಗಿದ್ದ ಪಿಚ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 256 ರನ್‌ ಗಳಿಸಿತು. ಆತಿಥೇಯ ತಂಡ 44.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು.

ADVERTISEMENT

ಗುರಿ ಬೆನ್ನಟ್ಟಿದ ಮಾರ್ಗನ್‌ ಬಳಗ ಐದನೇ ಓವರ್‌ನಲ್ಲಿ ಜಾನಿ ಬೇಸ್ಟೊ (30; 13ಎ, 7ಬೌಂ) ವಿಕೆಟ್‌ ಕಳೆದುಕೊಂಡಿತು. ಜೇಮ್ಸ್‌ ವಿನ್ಸ್‌ (27; 27ಎ, 5ಬೌಂ) ಕೂಡಾ ಬೇಗನೆ ಪೆವಿಲಿಯನ್‌ ಸೇರಿದರು. ಈ ಹಂತದಲ್ಲಿ ಒಂದಾದ ರೂಟ್‌ ಮತ್ತು ಮಾರ್ಗನ್‌ ಭಾರತದ ಬೌಲರ್‌ಗಳ ಬೆವರಿಳಿಸಿದರು. ಅಂಗಳದಲ್ಲಿ ಬೌಂಡರಿಗಳ ಚಿತ್ತಾರ ಬಿಡಿಸಿದ ಇವರು ತವರಿನ ಅಭಿಮಾನಿಗಳನ್ನು ಖುಷಿಯ ಕಡಲಲ್ಲಿ ತೇಲಿಸಿದರು.

ನಡೆಯದ ರೋಹಿತ್‌ ಆಟ: ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ರೋಹಿತ್ ಶರ್ಮಾ 2 ರನ್ ಗಳಿಸಿ ಔಟಾದರು. ನಂತರ ಶಿಖರ್ ಧವನ್‌ (44; 49ಎ, 7ಬೌಂ) ಜೊತೆಗೂಡಿದ ನಾಯಕ ವಿರಾಟ್‌ ಕೊಹ್ಲಿ (71; 72ಎ, 8ಬೌಂ) ಎರಡನೇ ವಿಕೆಟ್ ಜೊತೆಯಾಟದಲ್ಲಿ 73 ರನ್‌ ಕಲೆಹಾಕಿದರು. ಇವರಿಬ್ಬರ ಆಟದಲ್ಲಿ ಅಬ್ಬರ ಇರಲಿಲ್ಲ. ತಂಡವು 19.5 ಓವರ್‌ಗಳಲ್ಲಿ 100 ರನ್‌ಗಳ ಗಡಿ ಮುಟ್ಟಿತು. ಶಿಖರ್ ಔಟಾದ ನಂತರ ದಿನೇಶ್ ಕಾರ್ತಿಕ್ (21, 22ಎ, 3ಬೌಂ) ಅಲ್ಪ ಹೋರಾಟ ತೋರಿದರು. 25ನೇ ಓವರ್‌ನಲ್ಲಿ ಅವರು ಔಟಾದರು. ನಂತರ ಕ್ರೀಸ್‌ಗೆ ಬಂದ ಮಹೇಂದ್ರಸಿಂಗ್ ದೋನಿ (42; 66ಎ, 4ಬೌಂ) ತಾಳ್ಮೆಯ ಬ್ಯಾಟಿಂಗ್‌ಗೆ ಮೊರೆ ಹೋದರು. ಹೋದ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್‌ನಿಂದ ಬಹಳಷ್ಟು ಟೀಕೆ ಎದುರಿಸಿದ್ದ ದೋನಿ ಇಲ್ಲಿ ವಿಕೆಟ್‌ ಪತನ ತಡೆಯುವಲ್ಲಿ ಯಶಸ್ವಿಯಾದರು.

ವಿರಾಟ್ ಔಟ್ ಆದ ನಂತರ ಕ್ರೀಸ್‌ಗೆ ಬಂದ ಸುರೇಶ್ ರೈನಾ ಒಂದು ರನ್ ಗಳಿಸಿ ನಿರ್ಗಮಿಸಿದರು. ಆದರೆ, ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ತಲಾ 21 ಮತ್ತು ಶಾರ್ದೂಲ್ ಠಾಕೂರ್ 22 ರನ್‌ ಗಳಿಸಿ ತಂಡವು 250 ರನ್‌ಗಳ ಗಡಿ ದಾಟಲು ಕಾರಣರಾದರು.

ಸಂಕ್ಷಿಪ್ತ ಸ್ಕೋರು:

ಭಾರತ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 256 (ಶಿಖರ್ ಧವನ್ 44, ವಿರಾಟ್ ಕೊಹ್ಲಿ 71, ದಿನೇಶ್ ಕಾರ್ತಿಕ್ 21, ಮಹೇಂದ್ರಸಿಂಗ್ ದೋನಿ 42, ಹಾರ್ದಿಕ್ ಪಾಂಡ್ಯ 21, ಭುವನೇಶ್ವರ್ ಕುಮಾರ್ 21, ಶಾರ್ದೂಲ್ ಠಾಕೂರ್ 22; ಡೇವಿಡ್ ವಿಲ್ಲಿ 40ಕ್ಕೆ3, ಆದಿಲ್ ರಶೀದ್ 49ಕ್ಕೆ3).

ಇಂಗ್ಲೆಂಡ್‌: 44.3 ಓವರ್‌ಗಳಲ್ಲಿ 2 ವಿಕೆಟ್‌ಗೆ 260 (ಜೇಮ್ಸ್‌ ವಿನ್ಸ್‌ 27, ಜಾನಿ ಬೇಸ್ಟೊ 30, ಜೋ ರೂಟ್‌ ಔಟಾಗದೆ 100, ಇಯಾನ್‌ ಮಾರ್ಗನ್‌ ಔಟಾಗದೆ 88; ಶಾರ್ದೂಲ್‌ ಠಾಕೂರ್‌ 51ಕ್ಕೆ1).

ಫಲಿತಾಂಶ: ಇಂಗ್ಲೆಂಡ್‌ ತಂಡಕ್ಕೆ 8 ವಿಕೆಟ್‌ ಗೆಲುವು. 2–1ರಿಂದ ಸರಣಿ.

ಪಂದ್ಯಶ್ರೇಷ್ಠ: ಆದಿಲ್‌ ರಶೀದ್‌, ಸರಣಿ ಶ್ರೇಷ್ಠ: ಜೋ ರೂಟ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.