ADVERTISEMENT

Perth Test: ಜೈಸ್ವಾಲ್, ಕೊಹ್ಲಿ ಶತಕ; ಭಾರತ 487/6 ಡಿ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2024, 9:29 IST
Last Updated 24 ನವೆಂಬರ್ 2024, 9:29 IST
<div class="paragraphs"><p>ವಿರಾಟ್ ಕೊಹ್ಲಿ</p></div>

ವಿರಾಟ್ ಕೊಹ್ಲಿ

   

(ಚಿತ್ರ ಕೃಪೆ: X/@BCCI)

ಪರ್ತ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿ ಅಮೋಘ ಶತಕದ ಸಾಧನೆ ಮಾಡಿದ್ದಾರೆ.

ADVERTISEMENT

ಮೂರನೇ ದಿನದಾಟದಲ್ಲಿ ಜೈಸ್ವಾಲ್ ಹಾಗೂ ವಿರಾಟ್ ಶತಕದ ಬಲದಿಂದ ಭಾರತ. 134.3 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 487 ರನ್ ಗಳಿಸಿ ಡಿಕ್ಲೇರ್ ಘೋಷಿಸಿದೆ.

ಆ ಮೂಲಕ ಆಸ್ಟ್ರೇಲಿಯಾದ ಗೆಲುವಿಗೆ 534 ರನ್‌ಗಳ ಗುರಿ ಒಡ್ಡಿದೆ.

ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ 4.2 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 12 ರನ್ ಗಳಿಸಿದ್ದು, ಸೋಲಿನ ಭೀತಿಯಲ್ಲಿದೆ. ಇದರೊಂದಿಗೆ ಪರ್ತ್ ಮೈದಾನದಲ್ಲಿ ಜಸ್‌ಪ್ರೀತ್ ಬೂಮ್ರಾ ನಾಯಕತ್ವದಲ್ಲಿ ಭಾರತ ಐತಿಹಾಸಿಕ ಗೆಲುವಿನತ್ತ ಮುನ್ನಡೆದಿದೆ.

ಭಾರತದ ಪರ ಬೂಮ್ರಾ ಎರಡು ಮತ್ತು ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಗಳಿಸಿದ್ದಾರೆ. ನಾಥನ್ ಮೆಕ್‌ಸ್ವೀನಿ (0), ಪ್ಯಾಟ್ ಕಮಿನ್ಸ್ (2) ಹಾಗೂ ಮಾರ್ನಸ್ ಲಾಬುಷೇನ್ (3) ಪೆವಿಲಿಯನ್‌ಗೆ ಮರಳಿದ್ದಾರೆ.

ಆಸ್ಟ್ರೇಲಿಯಾ ಏಳು ವಿಕೆಟ್ ಮಾತ್ರ ಬಾಕಿ ಉಳಿದಿರುವಂತೆಯೇ ಗೆಲುವಿಗೆ ಇನ್ನೂ 522 ರನ್‌ ಗಳಿಸಬೇಕಿದೆ.

ಜೈಸ್ವಾಲ್, ಕೊಹ್ಲಿ ಅಮೋಘ ಶತಕ...

ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟ್ ಆಗಿದ್ದ ಯಶಸ್ವಿ ಜೈಸ್ವಾಲ್, ದ್ವಿತೀಯ ಇನಿಂಗ್ಸ್‌ನಲ್ಲಿ ಶತಕ ಗಳಿಸುವ ಮೂಲಕ ಅಬ್ಬರಿಸಿದರು.

ಅಲ್ಲದೆ ಮೊದಲ ವಿಕೆಟ್‌ಗೆ ಕೆ.ಎಲ್.ರಾಹುಲ್ ಜೊತೆ ದ್ವಿಶತಕದ (201) ಜೊತೆಯಾಟದಲ್ಲಿ ಭಾಗಿಯಾದರು. ಕೆ.ಎಲ್.ರಾಹುಲ್ 77 ರನ್ (176 ಎಸೆತ) ಗಳಿಸಿ ಔಟ್ ಆದರು.

ಅಮೋಘ ಇನಿಂಗ್ಸ್ ಕಟ್ಟಿದ ಜೈಸ್ವಾಲ್, ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಶತಕದ ಸಾಧನೆ ಮಾಡಿದರು. ಜೈಸ್ವಾಲ್ 297 ಎಸೆತಗಳಲ್ಲಿ 161 ರನ್ ಗಳಿಸಿ ಔಟ್ (15 ಬೌಂಡರಿ, 3 ಸಿಕ್ಸರ್) ಆದರು.

ದೇವದತ್ತ ಪಡಿಕ್ಕಲ್ (25), ರಿಷಭ್ ಪಂತ್ (1) ಹಾಗೂ ಧ್ರುವ್ ಜುರೇಲ್ (1) ಪ್ರಭಾವಿ ಎನಿಸಿಕೊಳ್ಳಲಿಲ್ಲ.

ಜೈಸ್ವಾಲ್ ಪತನದ ಬೆನ್ನಲ್ಲೇ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದರು. ವಾಷಿಂಗ್ಟನ್ ಸುಂದರ್ (29) ಹಾಗೂ ನಿತೀಶ್ ಕುಮಾರ್ ರೆಡ್ಡಿ (38*) ಅವರೊಂದಿಗೆ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು.

ಆಸೀಸ್ ಬೌಲರ್‌ಗಳನ್ನು ಎಂದಿನ ಶೈಲಿಯಲ್ಲಿ ಎದುರಿಸಿದ ವಿರಾಟ್ ಕೊಹ್ಲಿ ಶತಕದ ಸಾಧನೆ ಮಾಡಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಗಳಿಸಿದ 30ನೇ ಶತಕವಾಗಿದೆ. ಅಲ್ಲದೆ ಆಸ್ಟ್ರೇಲಿಯಾ ನೆಲದಲ್ಲಿ 7ನೇ ಶತಕ ಸಾಧನೆ ಮಾಡಿದರು.

ಒಟ್ಟಾರೆಯಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 81ನೇ ಶತಕದ ಸಾಧನೆ ಮಾಡಿದರು.

ವಿರಾಟ್ ಕೊಹ್ಲಿ 143 ಎಸೆತಗಳಲ್ಲಿ 100 ರನ್ (8 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.