ADVERTISEMENT

ಜಮ್ತಾದಲ್ಲಿ ಭಾರತ ಜಯಭೇರಿ

ಕ್ರಿಕೆಟ್: ವಿರಾಟ್ ಕೊಹ್ಲಿ 40ನೇ ಶತಕ; ಆಸ್ಟ್ರೇಲಿಯಾಕ್ಕೆ ಸೋಲು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 19:28 IST
Last Updated 5 ಮಾರ್ಚ್ 2019, 19:28 IST
ಶತಕ ಗಳಿಸಿ ಸಂಭ್ರಮಿಸಿದ ವಿರಾಟ್ ಕೊಹ್ಲಿ –ಎಎಫ್‌ಪಿ ಚಿತ್ರ
ಶತಕ ಗಳಿಸಿ ಸಂಭ್ರಮಿಸಿದ ವಿರಾಟ್ ಕೊಹ್ಲಿ –ಎಎಫ್‌ಪಿ ಚಿತ್ರ   

ನಾಗಪುರ: ನಿರ್ಣಾಯಕ ಹಂತದಲ್ಲಿ ಬೌಲರ್‌ಗಳು ತೋರಿದ ಛಲದಿಂದ ಭಾರತ ತಂಡ ಜಯಭೇರಿ ಮೊಳ ಗಿಸಿತು. ಇಲ್ಲಿನ ಜಮ್ತಾ ಕ್ರೀಡಾಂಗಣ ದಲ್ಲಿ ಮಂಗಳವಾರ ರಾತ್ರಿ ನಡೆದ ಆಸ್ಟ್ರೇಲಿಯಾ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಬಳಗ ಎಂಟು ರನ್‌ಗಳಿಂದ ಗೆದ್ದು ಸರಣಿಯಲ್ಲಿ ಮುನ್ನಡೆಯನ್ನು 2–0ಗೆ ಹೆಚ್ಚಿಸಿತು.

251 ರನ್‌ಗಳ ಜಯದ ಗುರಿಯನ್ನು ಬೆನ್ನತ್ತಿದ ಪ್ರವಾಸಿ ತಂಡದವರು 45ನೇ ಓವರ್‌ವರೆಗೂ ಗೆಲುವಿನ ಹಾದಿಯಲ್ಲಿ ಹೆಜ್ಜೆ ಹಾಕಿತ್ತು. ಈ ಸಂದರ್ಭದಲ್ಲಿ ಬೂಮ್ರಾ ಪರಿಣಾಮಕಾರಿ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಂಗೆಡಿಸಿ ದರು. ಕೊನೆಯ ಓವರ್‌ನಲ್ಲಿ ಆಸ್ಟ್ರೇಲಿ ಯಾದ ಜಯಕ್ಕೆ 11 ರನ್ ಬೇಕಾಗಿತ್ತು. ವಿಜಯಶಂಕರ್‌ ಮೂರು ಎಸೆತಗಳಲ್ಲಿ ಕೊನೆಯ ಎರಡು ವಿಕೆಟ್‌ಗಳನ್ನು ಕಬ ಳಿಸಿ ಭಾರತದ ಪಾಳಯದಲ್ಲಿ ಸಂಭ್ರಮದ ಹೊಳೆ ಹರಿಸಿದರು.

ನಾಯಕನ ಶತಕ ವೈಭವ: ಬ್ಯಾಟಿಂಗ್‌ಗೆ ಸವಾಲೆಸೆದಿದ್ದ ಪಿಚ್‌ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್‌ ಆತಿಥೇಯರನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಭಾರತದ ಆರಂಭ ನೀರಸವಾಗಿತ್ತು. ಆದರೆ ವಿರಾಟ್ ಕೊಹ್ಲಿ (116; 120 ಎಸೆತ, 10 ಬೌಂಡರಿ) ಅವರ ಶತಕದ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.

ADVERTISEMENT

ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಆಫ್‌ ಸ್ಟಂಪ್‌ನಿಂದ ಆಚೆ ಹೋಗುತ್ತಿದ್ದ ಎಸೆತವನ್ನು ಸ್ಲಾಪ್ ಮಾಡಿದ ರೋಹಿತ್ ಡೀಪ್‌ ಥರ್ಡ್‌ ಮ್ಯಾನ್‌ನಲ್ಲಿದ್ದ ಜಂಪಾಗೆ ಕ್ಯಾಚ್ ನೀಡಿದರು. ಆಗ ತಂಡ ಇನ್ನೂ ಖಾತೆ ತೆರೆದಿರಲಿಲ್ಲ.

ಒಂಬತ್ತನೇ ಓವರ್‌ನಲ್ಲಿ ಶಿಖರ್ ಧವನ್ ಕೂಡ ಔಟಾದರು. ಆಫ್‌ ಸ್ಪಿನ್ನರ್‌ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಎಸೆತದ ಗತಿ ನಿರ್ಧರಿಸಲು ವಿಫಲರಾದ ಶಿಖರ್ ಧವನ್‌ ಎಲ್‌ಬಿಡಬ್ಲ್ಯು ಬಲೆಯಲ್ಲಿ ಸಿಲುಕಿದರು. ವಿರಾಟ್ ಕೊಹ್ಲಿ ಅವರ ಜೊತೆಗೂಡಿದ ಅಂಬಟಿ ರಾಯುಡು ಅವರಿಗೆ 37 ರನ್‌ಗಳನ್ನು ಸೇರಿಸಲಷ್ಟೇ ಸಾಧ್ಯವಾಯಿತು.

ಕೊಹ್ಲಿ–ವಿಜಯಶಂಕರ್ ಜೊತೆಯಾಟದ ರಂಗು: 75 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದಾಗ ವಿರಾಟ್ ಕೊಹ್ಲಿ ಅವರ ಜೊತೆಗೂಡಿದ ಯುವ ಬ್ಯಾಟ್ಸ್‌ಮನ್‌ ವಿಜಯಶಂಕರ್‌ 81 ರನ್‌ಗಳನ್ನು ಸೇರಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ವಿಕೆಟ್‌ಗಳು ಉರುಳುತ್ತಿದ್ದಂತೆ ಪ್ರತಿ ದಾಳಿಗೆ ಇಳಿದ ವಿರಾಟ್ ಕೊಹ್ಲಿ ಮೋಹಕ ಬ್ಯಾಟಿಂಗ್ ಮೂಲಕ ರಂಜಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿರುವ ವಿರಾಟ್‌ 18ನೇ ಓವರ್‌ನಲ್ಲಿ ಸತತ ಎರಡು ಬೌಂಡರಿಗಳನ್ನು ಸಿಡಿಸಿ ಆಕ್ರಮಣಕ್ಕೆ ಮುಂದಾದರು. ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ಚೆಂಡನ್ನು ಅಟ್ಟಿ ಬೌಂಡರಿ ಗಳಿಸುವ ಮೂಲಕ 40ನೇ ಶತಕ ಸಿಡಿಸಿದ ಅವರು 48ನೇ ಓವರ್‌ನಲ್ಲಿ ಸುಲಭ ಕ್ಯಾಚ್ ನೀಡಿ ಮರಳಿದರು.

ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಮಹೇಂದ್ರ ಸಿಂಗ್ ಧೋನಿ ಮಂಗಳವಾರ ಶೂನ್ಯಕ್ಕೆ ಔಟಾದರು. ಕೇದಾರ್ ಜಾಧವ್‌ ಅವರಿಗೂ ಮಿಂಚಲು ಸಾಧ್ಯವಾಗಲಿಲ್ಲ. ರವೀಂದ್ರ ಜಡೇಜ ಅಲ್ಪ ಪ್ರತಿರೋಧ ಒಡ್ಡಿದ್ದರಿಂದ ಸ್ಪರ್ಧಾತ್ಮಕ ಮೊತ್ತ ಗಳಿಸಲು ತಂಡಕ್ಕೆ ಸಾಧ್ಯವಾಯಿತು.

ಪಾಂಟಿಂಗ್ ಹಿಂದಿಕ್ಕಿದ ಕೊಹ್ಲಿ

ಮಂಗಳವಾರ ವಿರಾಟ್ ಕೊಹ್ಲಿ ನಾಯಕನಾಗಿ ವೇಗದ ಒಂಬತ್ತು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಈ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆ ಮುರಿದರು.

ವಿರಾಟ್ ಕೊಹ್ಲಿ 159ನೇ ಪಂದ್ಯದಲ್ಲಿ ಈ ಮೈಲುಗಲ್ಲು ದಾಟಿದರು. ರಿಕಿ ಪಾಂಟಿಂಗ್‌ 203 ಪಂದ್ಯಗಳಲ್ಲಿ ಒಂಬತ್ತು ಸಾವಿರ ರನ್ ಪೂರೈಸಿದ್ದರು. ವಿರಾಟ್‌ ಕೊಹ್ಲಿ, ನಾಯಕನಾಗಿ ಒಂಬತ್ತು ಸಹಸ್ರ ರನ್‌ ಮಾಡಿದ ಆರನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಗ್ರೇಮ್ ಸ್ಮಿತ್ (220ನೇ ಇನಿಂಗ್ಸ್‌), ಮಹೇಂದ್ರ ಸಿಂಗ್ ಧೋನಿ (253), ಅಲನ್‌ ಬಾರ್ಡರ್‌ (257) ಮತ್ತು ಸ್ಟೀಫನ್ ಫ್ಲೆಮಿಂಗ್‌ (272) ಪಟ್ಟಿಯಲ್ಲಿರುವ ಇತರ ಆಟಗಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.