ರಾಜ್‌ಕೋಟ್: ಅಬ್ಬರದ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ಗೆಲುವಿಗೆ 353 ರನ್‌ಗಳ ಬೃಹತ್ ಗುರಿ ನೀಡಿದೆ.
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪ್ರವಾಸಿ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಡೇವಿಡ್ ವಾರ್ನರ್, ಮಿಚೇಲ್ ಮಾರ್ಷ್, ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲಾಬುಶೇನ್ ಬಿರುಸಿನ ಅರ್ಧಶತಗಳನ್ನು ಗಳಿಸಿ ಮಿಂಚಿದರು.
ವಾರ್ನರ್ ಹಾಗೂ ಮಾರ್ಷ್ ಜೋಡಿ ಆಸಿಸ್‌ಗೆ ಅಮೋಘ ಆರಂಭ ನೀಡಿತು. ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಇವರಿಬ್ಬರು ತಮ್ಮ ತಂಡದ ಮೊತ್ತವನ್ನು 8 ಓವರ್ ಆಗುವಷ್ಟರಲ್ಲೇ 78ಕ್ಕೆ ಏರಿಸಿದರು. ಕೇವಲ 34 ಎಸೆತಗಳನ್ನು ಎದುರಿಸಿದ ವಾರ್ನರ್ 6 ಬೌಂಡರಿ ಮತ್ತು 4 ಸಿಕ್ಸರ್‌ಗಳಿದ್ದ 56 ರನ್ ಗಳಿಸಿ ಔಟಾದರು.
ವಾರ್ನರ್ ವಿಕೆಟ್ ಪತನದ ನಂತರವೂ ಬೀಸಾಟ ಮುಂದುವರಿಸಿದ ಮಾರ್ಷ್, ಅನುಭವಿ ಸ್ಮಿತ್ ಜೊತೆಗೂಡಿ ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 137 ರನ್ ಕಲೆಹಾಕಿದರು. 84 ಎಸೆತಗಳಲ್ಲಿ 96 ರನ್ ಗಳಿಸಿದ್ದ ಮಾರ್ಷ್ ಶತಕದ ಹೊಸ್ತಿಲಲ್ಲಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಶತಕ ಗಳಿಸುವ ಅವಕಾಶವನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡರು.
ಸೊಗಸಾಗಿ ಬ್ಯಾಟ್ ಬೀಸಿದ ಸ್ಮಿತ್ (74 ರನ್) 30ನೇ ಅರ್ಧಶತಕ ಗಳಿಸಿದರು. ಕೊನೆಯಲ್ಲಿ ಗುಡುಗಿದ ಲಾಬುಶೇನ್ (72 ರನ್) 49ನೇ ಓವರ್‌ನ ಕೊನೇ ಎಸೆತದಲ್ಲಿ ಔಟಾದರು. ಹೀಗಾಗಿ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 352 ರನ್ ಕಲೆಹಾಕಲು ಸಾಧ್ಯವಾಯಿತು.
ಭಾರತ ಪರ ವಾಷಿಂಗ್ಟನ್ ಸುಂದರ್ (10 ಓವರ್‌ಗಳಲ್ಲಿ 48 ರನ್) ಹೊರತುಪಡಿಸಿ ಉಳಿದೆಲ್ಲ ಬೌಲರ್‌ಗಳೂ ದುಬಾರಿಯಾದರು.
ಪ್ರಮುಖ ವೇಗಿ ಜಸ್‌ಪ್ರೀತ್ ಬೂಮ್ರಾ 10 ಓವರ್‌ಗಳಲ್ಲಿ 81 ರನ್ ನೀಡಿ 3 ವಿಕೆಟ್ ಪಡೆದರೆ, ಏಕದಿನ ಕ್ರಿಕೆಟ್‌ನ ನಂ.1 ಬೌಲರ್ ಮೊಹಮ್ಮದ್ ಸಿರಾಜ್ 9 ಓವರ್‌ಗಳಲ್ಲಿ 1 ವಿಕೆಟ್ ಕಿತ್ತು 68 ರನ್ ಬಿಟ್ಟುಕೊಟ್ಟರು. ಯುವ ವೇಗಿ ಪ್ರಸಿದ್ಧ ಕೃಷ್ಣ 5 ಓವರ್‌ಗಳಲ್ಲಿ 45 ರನ್ ಚಚ್ಚಿಸಿಕೊಂಡು 1 ವಿಕೆಟ್ ಉರುಳಿಸಿದರು. ಉಳಿದೆರಡು ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡ ಕುಲದೀಪ್ ಯಾದವ್, 6 ಓವರ್‌ಗಳಲ್ಲಿ 48 ರನ್ ನೀಡಿದರು. ರವೀಂದ್ರ ಜಡೇಜ 10 ಓವರ್‌ಗಳಲ್ಲಿ ವಿಕೆಟ್ ಇಲ್ಲದೆ 61 ರನ್ ಬಿಟ್ಟುಕೊಟ್ಟರು.
ಹನ್ನೊಂದರ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರಾನ್ ಗ್ರೀನ್, ಮಿಚೆಲ್ ಸ್ಟಾರ್ಕ್, ತನ್ವೀರ್ ಸಂಘಾ, ಜೋಶ್ ಹ್ಯಾಜಲ್‌ವುಡ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.