ADVERTISEMENT

131 ಓವರ್‌ಗಳ ಮ್ಯಾರಥಾನ್ ಇನ್ನಿಂಗ್ಸ್; ಸಿಡ್ನಿಯಲ್ಲಿ ಭಾರತದ ಸಾಧನೆಗಳು ಹಲವು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜನವರಿ 2021, 12:31 IST
Last Updated 11 ಜನವರಿ 2021, 12:31 IST
ಸಿಡ್ನಿಯಲ್ಲಿ ಸ್ಮರಣೀಯ ಡ್ರಾ ಸಾಧಿಸಿದ ಟೀಮ್ ಇಂಡಿಯಾ
ಸಿಡ್ನಿಯಲ್ಲಿ ಸ್ಮರಣೀಯ ಡ್ರಾ ಸಾಧಿಸಿದ ಟೀಮ್ ಇಂಡಿಯಾ   

ಸಿಡ್ನಿ: ಐದು ದಿನಗಳ ಆಟವೇ 'ನೈಜ ಕ್ರಿಕೆಟ್' ಎಂಬುದಕ್ಕೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸ್ಪಷ್ಟ ನಿದರ್ಶನ ದೊರಕಿದೆ. ತಾಳ್ಮೆಯಿಂದ ಹಿಡಿದು ಓರ್ವ ಆಟಗಾರನ ಕೌಶಲ್ಯ ಹಾಗೂ ಮನೋಬಲದ ವರೆಗೆ ಪರಿಪೂರ್ಣ ಪರೀಕ್ಷೆ ನಡೆಸಿದೆ. ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತಿರುವ ಟೀಮ್ ಇಂಡಿಯಾ, ಮೂರನೇ ಟೆಸ್ಟ್‌ನಲ್ಲಿ ಸ್ಮರಣೀಯ 'ಡ್ರಾ' ಫಲಿತಾಂಶ ದಾಖಲಿಸಲು ಯಶಸ್ವಿಯಾಗಿದೆ. ಕೊನೆಯ ದಿನದಾಟದಲ್ಲಿ 407 ರನ್‌ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ 131 ಓವರ್‌ಗಳ ಮ್ಯಾರಥಾನ್ ಇನ್ನಿಂಗ್ಸ್ ಬೆಳೆಸುವ ಮೂಲಕ ಸಂಭವನೀಯ ಸೋಲನ್ನು ತಪ್ಪಿಸಿದೆ. ಅಲ್ಲದೆ ಗಾಬಾದಲ್ಲಿ ನಡೆಯಲಿರುವ ಅಂತಿಮ ಪಂದ್ಯಕ್ಕೆ ಹೆಚ್ಚಿನ ರೋಚಕತೆಯನ್ನು ಕಾಯ್ದುಕೊಂಡಿದೆ. ಈ ಸಂಬಂಧ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಸಾಧನೆಯ ಅಂಕಿಅಂಶಗಳನ್ನು ಮೆಲುಕು ಹಾಕಲಾಗಿದೆ.

131 ಓವರ್‌ಗಳ ಮ್ಯಾರಥಾನ್ ಇನ್ನಿಂಗ್ಸ್:
ಬಹುಶ: ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತ ಡ್ರಾ ಫಲಿತಾಂಶ ದಾಖಲಿಸಲಿದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ ಚೇತೇಶ್ವರ ಪೂಜಾರ, ರಿಷಭ್ ಪಂತ್, ಹನುಮ ವಿಹಾರಿ ಮತ್ತು ರವಿಚಂದ್ರನ್ ಅಶ್ವಿನ್ ದಿಟ್ಟ ಹೋರಾಟದ ಬೆಂಬಲದೊಂದಿಗೆ ಐದನೇ ದಿನದಾಟದಲ್ಲಿ ಸೇರಿದಂತೆ ಒಟ್ಟು 131 ಓವರ್‌ಗಳನ್ನು ಎದುರಿಸಿರುವ ಭಾರತ ತಂಡವು ಅಮೋಘ ಸಾಧನೆ ಮಾಡಿದೆ. ಇದು ಪಂದ್ಯವೊಂದನ್ನು ಡ್ರಾಗೊಳಿಸಲು ಅಂತಿಮ ಇನ್ನಿಂಗ್ಸ್‌ನಲ್ಲಿ ಭಾರತ ಆಡಿರುವ ಐದನೇ ಗರಿಷ್ಠ ಓವರ್‌ಗಳ ಸಂಖ್ಯೆಯಾಗಿದೆ. 1979ನೇ ಇಸವಿಯಲ್ಲಿ ಇಂಗ್ಲೆಂಡ್ ವಿರುದ್ಧ ಓವಲ್ ಮೈದಾನದಲ್ಲಿ 150.5 ಓವರ್‌ಗಳನ್ನು ಎದುರಿಸಿರುವುದು ಈ ವರೆಗಿನ ಶ್ರೇಷ್ಠ ಸಾಧನೆಯಾಗಿದೆ.

ಏಷ್ಯಾ ತಂಡದ ಶ್ರೇಷ್ಠ ಸಾಧನೆ
ಈ ಮಧ್ಯೆ ಆಸ್ಟ್ರೇಲಿಯಾ ನೆಲದಲ್ಲಿ ಪಂದ್ಯವನ್ನು ಡ್ರಾಗೊಳಿಸಲು ಏಷ್ಯಾ ತಂಡವೊಂದರಿಂದ ದಾಖಲಾದ ಶ್ರೇಷ್ಠ ಪ್ರದರ್ಶನ ಇದಾಗಿದೆ. ಈ ಹಿಂದೆ 2014/15ನೇ ಇಸವಿಯಲ್ಲಿ ಇದೇ ಸಿಡ್ನಿ ಮೈದಾನದಲ್ಲಿ 89.5 ಓವರ್‌ಗಳನ್ನು ಬ್ಯಾಟಿಂಗ್ ಮಾಡಿರುವ ಭಾರತ ಈಗ 131 ಓವರ್‌ಗಳನ್ನು ಎದುರಿಸುವ ಮೂಲಕ ತನ್ನದೇ ದಾಖಲೆಯನ್ನು ಉತ್ತಮಪಡಿಸಿದೆ.

ADVERTISEMENT

1980ರ ಬಳಿಕ ಇದುವೇ ಟಾಪ್
ಅಂದ ಹಾಗೆ 1980ನೇ ಇಸವಿಯ ಬಳಿಕ ಭಾರತ ತಂಡವು ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಇದೇ ಮೊದಲ ಬಾರಿಗೆ 131 ಓವರ್‌ಗಳನ್ನು ಸಮರ್ಥವಾಗಿ ಎದುರಿಸಿದೆ.

ಹನುಮ ವಿಹಾರಿ ಸ್ಟ್ರೈಕ್‌ರೇಟ್ 14.29
ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿರುವ ಹನುಮ ವಿಹಾರಿ, ಟೆಸ್ಟ್ ಇತಿಹಾಸದಲ್ಲಿ ಒಂಬತ್ತನೇ ನಿಧಾನಗತಿಯ ಇನ್ನಿಂಗ್ಸ್ (150ಕ್ಕೂ ಹೆಚ್ಚು ಬಾಲ್ ಎದುರಿಸಿದ ಸಂದರ್ಭದಲ್ಲಿ) ಕಟ್ಟಿದ್ದಾರೆ. ಸ್ನಾಯು ಸೆಳೆತದ ನಡುವೆಯೂ 161 ಎಸೆತಗಳನ್ನು ಎದುರಿಸಿರುವ ವಿಹಾರಿ 23 ರನ್‌ಗಳ ಅಜೇಯ ಇನ್ನಿಂಗ್ಸ್ ಕಟ್ಟಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 150ಕ್ಕೂ ಹೆಚ್ಚು ಬಾಲ್‌ಗಳನ್ನು ಎದುರಿಸಿ ಅತಿ ನಿಧಾನಗತಿಯ ಇನ್ನಿಂಗ್ಸ್ ಕಟ್ಟಿದ ದಾಖಲೆ ದಕ್ಷಿಣ ಆಫ್ರಿಕಾದ ಹಾಶೀಮ್ ಆಮ್ಲಾ ಹೆಸರಲ್ಲಿದೆ. 2015ರಲ್ಲಿ ನವದಹೆಲಿಯಲ್ಲಿ ನಡೆದ ಟೆಸ್ಟ ಪಂದ್ಯದಲ್ಲಿ ಆಮ್ಲಾ, 244 ಎಸೆತಗಳಲ್ಲಿ 25 ರನ್ ಗಳಿಸಿದ್ದರು.

ಪೂಜಾರ 'ಪೂಜೆ'
ಆಸ್ಟ್ರೇಲಿಯಾ ವಿರುದ್ಧ ಎಂಟನೇ ಬಾರಿಗೆ 200 ಅಥವಾ ಅದಕ್ಕಿಂತಲೂ ಹೆಚ್ಚು ಚೆಂಡುಗಳನ್ನು ಎದುರಿಸಿದ ದಾಖಲೆಗೆ ಚೇತೇಶ್ವರ ಪೂಜಾರ ಭಾಜನವಾಗಿದ್ದಾರೆ. ಈ ಮೂಲಕ ಮಾಜಿ ದಿಗ್ಗಜ ಸುನಿಲ್ ಗವಾಸ್ಕರ್ ದಾಖಲೆಯನ್ನು ಸರಿಗಟ್ಟಿದ್ದಾರೆ. 205 ಎಸೆತಗಳನ್ನು ಎದುರಿಸಿರುವ ಪೂಜಾರ 12 ಬೌಂಡರಿಗಳ ನೆರವಿನಿಂದ 77 ರನ್ ಗಳಿಸಿದ್ದರು.

ವಿಹಾರಿ-ಅಶ್ವಿನ್ 256 ಎಸೆತಗಳ ಮುರಿಯದ ಜೊತೆಯಾಟ...
256 ಎಸೆತಗಳಲ್ಲಿ ಮುರಿಯದ ಆರನೇ ವಿಕೆಟ್‌ಗೆ ಹನುಮ ವಿಹಾರಿ ಮತ್ತು ರವಿಚಂದ್ರನ್ ಅಶ್ವಿನ್ 62 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿದ್ದರು. ಈ ಮೂಲಕ ಆಸೀಸ್ ನೆಲದಲ್ಲಿ ಆರನೇ ವಿಕೆಟ್‌ಗೆ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ಸರಣಿಯಲ್ಲಿ ಮೆಲ್ಬರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜ ಆರನೇ ವಿಕೆಟ್‌ಗೆ 244 ಎಸೆತಗಳನ್ನು ಎದುರಿಸಿದ್ದರು. ಈ ಸಾಧನೆಯನ್ನೀಗ ವಿಹಾರಿ-ಅಶ್ವಿನ್ ಜೋಡಿ ಮೀರಿಸಿದೆ.

ಆಸೀಸ್ ನೆಲದಲ್ಲಿ ರಿಷಭ್ ಪಂತ್ ಸಾಧನೆ
ಕಳೆದ 60 ವರ್ಷಗಳಲ್ಲಿ ಆಸೀಸ್ ನೆಲದಲ್ಲಿ 200 ಅಥವಾ ಅದಕ್ಕಿಂತಲೂ ಹೆಚ್ಚು ರನ್ ಗಳಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳ ಪೈಕಿ ಭಾರತದ ರಿಷಭ್ ಪಂತ್ ಗರಿಷ್ಠ 56.88ರ ಸರಾಸರಿ ದಾಖಲೆಯನ್ನು ಹೊಂದಿದ್ದಾರೆ. ಸಿಡ್ನಿ ಮೈದಾನದಲ್ಲಿ 146ರ ಸರಾಸರಿ ಕಾಪಾಡಿಕೊಂಡಿರುವ ಪಂತ್ ಎರಡು ವರ್ಷಗಳ ಹಿಂದೆಯಷ್ಟೇ 159 ರನ್ ಬಾರಿಸಿದ್ದರು.

ಅಶ್ವಿನ್ ಬ್ಯಾಟಿಂಗ್‌ಗೂ ಸೈ
128 ಎಸೆತಗಳನ್ನು ಎದುರಿಸಿರುವ ರವಿಚಂದ್ರನ್ ಅಶ್ವಿನ್ ಏಳು ಬೌಂಡರಿಗಳ ನೆರವಿನಿಂದ ಅಜೇಯ 39 ರನ್ ಗಳಿಸಿದ್ದರು. ಈ ಮೂಲಕ ಮ್ಯಾಚ್ ಸೇವಿಂಗ್ ಇನ್ನಿಂಗ್ಸ್ ಕಟ್ಟುವ ಮೂಲಕ ಬ್ಯಾಟಿಂಗ್‌ಗೂ ಸೈ ಎನಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.