ADVERTISEMENT

IND vs AUS: ಆಸ್ಟ್ರೇಲಿಯಾ ಗೆಲುವಿಗೆ 175 ರನ್ ಗುರಿ ಒಡ್ಡಿದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಡಿಸೆಂಬರ್ 2023, 13:11 IST
Last Updated 1 ಡಿಸೆಂಬರ್ 2023, 13:11 IST
<div class="paragraphs"><p>ಜಿತೇತ್ ಶರ್ಮಾ ಹಾಗೂ ರಿಂಕು ಸಿಂಗ್</p></div>

ಜಿತೇತ್ ಶರ್ಮಾ ಹಾಗೂ ರಿಂಕು ಸಿಂಗ್

   

(ಪಿಟಿಐ ಚಿತ್ರ)

ರಾಯಪುರ್: ಇಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿರುವ ಟೀಮ್ ಇಂಡಿಯಾ ಒಂಬತ್ತು ವಿಕೆಟ್ ನಷ್ಟಕ್ಕೆ 174 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ.

ADVERTISEMENT

ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಭಾರತಕ್ಕೆ ಯಶಸ್ವಿ ಜೈಸ್ವಾಲ್ (37) ಹಾಗೂ ಋತುರಾಜ್ (32) ಮೊದಲ ವಿಕೆಟ್‌ಗೆ 50 ರನ್‌ಗಳ ಜೊತೆಯಾಟ ಕಟ್ಟಿದರು.

ಆದರೆ ಜೈಸ್ವಾಲ್ ವಿಕೆಟ್ ಪತನದೊಂದಿಗೆ ಹಿನ್ನಡೆ ಅನುಭವಿಸಿತು. ಶ್ರೇಯಸ್ ಅಯ್ಯರ್ (8) ಹಾಗೂ ನಾಯಕ ಸೂರ್ಯಕುಮಾರ್ ಯಾದವ್ (1) ವೈಫಲ್ಯ ಅನುಭವಿಸಿದರು.

ಕೆಳ ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್ ಹಾಗೂ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಉಪಯುಕ್ತ ಕಾಣಿಕೆ ನೀಡುವ ಮೂಲಕ ತಂಡವನ್ನು ಸವಾಲಿನ ಮೊತ್ತದತ್ತ ಮುನ್ನಡೆಸಿದರು.

ಕೊನೆಯ ಓವರ್‌ನಲ್ಲಿ ಔಟ್ ಆದ ರಿಂಕು 29 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿಂದ 46 ರನ್ ಗಳಿಸಿದರು. ಮತ್ತೊಂದೆಡೆ ಜಿತೇಶ್ 19 ಎಸೆತಗಳಲ್ಲಿ 35 ರನ್ (3 ಸಿಕ್ಸರ್, 1 ಬೌಂಡರಿ) ಗಳಿಸಿದರು.

ಇನ್ನುಳಿದಂತೆ ರವಿ ಬಿಷ್ಣೋಯಿ 4 ರನ್ ಗಳಿಸಿದರೆ ಅಕ್ಷರ್ ಪಟೇಲ್ ಹಾಗೂ ದೀಪಕ್ ಚಾಹರ್ ಶೂನ್ಯಕ್ಕೆ ಔಟ್ ಆದರು.

ಆಸ್ಟ್ರೇಲಿಯಾ ಪರ ಬೆನ್ ಡ್ವಾರ್ಶುಯಿಸ್ ಮೂರು ಮತ್ತು ಜೇಸನ್ ಬೆಹ್ರೆನ್‌ಡಾರ್ಫ್ ಹಾಗೂ ತನ್ವೀರ್ ಸಂಘ ತಲಾ ಎರಡು ವಿಕೆಟ್‌ ಕಬಳಿಸಿದರು.

ಭಾರತ ತಂಡದಲ್ಲಿ 4 ಬದಲಾವಣೆ...

ಈ ಮೊದಲು ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲೆರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ, ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-1ರ ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಸೂರ್ಯಕುಮಾರ್ ಬಳಗವು ಈ ಪಂದ್ಯವನ್ನೂ ಗೆದ್ದು ಸರಣಿ ಜಯಿಸುವ ಗುರಿ ಇರಿಸಿಕೊಂಡಿದೆ. ಮತ್ತೊಂದೆಡೆ ಮೂರನೇ ಪಂದ್ಯದ ಗೆಲುವಿನ ಹುಮ್ಮಸ್ಸಿನಲ್ಲಿರುವ ಆಸ್ಟ್ರೇಲಿಯಾ ಮಗದೊಮ್ಮೆ ತಿರುಗೇಟು ನೀಡುವ ಇರಾದೆ ಹೊಂದಿದೆ.

ಭಾರತ ತಂಡದಲ್ಲಿ ನಾಲ್ಕು ಬದಲಾವಣೆಗಳನ್ನು ತರಲಾಗಿದೆ. ಶ್ರೇಯಸ್ ಅಯ್ಯರ್, ದೀಪಕ್ ಚಾಹರ್, ಮುಕೇಶ್ ಕುಮಾರ್ ಮತ್ತು ಜಿತೇಶ್ ಶರ್ಮಾ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದಾಗಿ ಇಶಾನ್ ಕಿಶನ್, ಪ್ರಸಿದ್ದ ಕೃಷ್ಣ, ಅರ್ಶದೀಪ್ ಮತ್ತು ತಿಲಕ್ ವರ್ಮಾ‌ ಅವಕಾಶ ವಂಚಿತರಾಗಿದ್ದಾರೆ.

ಅತ್ತ ಆಸ್ಟ್ರೇಲಿಯಾ ತಂಡದಲ್ಲೂ ಐದು ಬದಲಾವಣೆ ಕಂಡುಬಂದಿದೆ. ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೋಯಿನಿಸ್, ರಿಚರ್ಡ್ಸ್‌ಸನ್, ಎಲ್ಲಿಸ್ ಮತ್ತು ಇಂಗ್ಲಿಸ್ ಅಲಭ್ಯರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.