ADVERTISEMENT

3ನೇ ಟಿ20 ಪಂದ್ಯ | ಭಾರತ ತಂಡದ ಕೈಯಿಂದ ಜಯ ಕಸಿದುಕೊಂಡ ಮ್ಯಾಕ್ಸ್‌ವೆಲ್

ಋತುರಾಜ್ ಗಾಯಕವಾಡ್‌ ಚೊಚ್ಚಲ ಶತಕ; ಆಸ್ಟ್ರೇಲಿಯಾಕ್ಕೆ ಸರಣಿ ಜಯದ ಆಸೆ ಜೀವಂತ

ಪಿಟಿಐ
Published 28 ನವೆಂಬರ್ 2023, 17:40 IST
Last Updated 28 ನವೆಂಬರ್ 2023, 17:40 IST
<div class="paragraphs"><p>ಗ್ಲೆನ್ ಮ್ಯಾಕ್ಸ್‌ವೆಲ್</p></div>

ಗ್ಲೆನ್ ಮ್ಯಾಕ್ಸ್‌ವೆಲ್

   

ಗುವಾಹಟಿ: ಆಸ್ಟ್ರೇಲಿಯಾದ ‘ಸೂಪರ್‌ ಹ್ಯೂಮನ್ ಬ್ಯಾಟರ್’ ಗ್ಲೆನ್ ಮ್ಯಾಕ್ಸ್‌ವೆಲ್ ಮಂಗಳವಾರ ರಾತ್ರಿ ಭಾರತ ತಂಡದ ಕೈಯಿಂದ ಗೆಲುವನ್ನು ಕಸಿದುಕೊಂಡರು.  

ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ 48ಎಸೆತಗಳಲ್ಲಿ ಅಜೇಯ ಶತಕ ಬಾರಿಸಿದ ಮ್ಯಾಕ್ಸ್‌ವೆಲ್ ಅವರಿಂದಾಗಿ ಆಸ್ಟ್ರೇಲಿಯಾ ತಂಡವು 5 ವಿಕೆಟ್‌ಗಳಿಂದ ರೋಚಕವಾಗಿ ಗೆದ್ದಿತು. ಇದರಿಂದಾಗಿ ಐದು ಪಂದ್ಯಗಳ ಸರಣಿಯನ್ನು ಜಯಿ ಸುವ ತನ್ನ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿತು..

ADVERTISEMENT

ಮೊದಲೆರಡೂ ಪಂದ್ಯಗಳಲ್ಲಿ ಜಯಿಸಿದ್ದ ಭಾರತ ತಂಡಕ್ಕೆ ಈ ಪಂದ್ಯದಲ್ಲಿಯೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಆಸೆ ಕೈಗೂಡಲಿಲ್ಲ. ಕೊನೆಯ ಐದು ಓವರ್‌ಗಳಲ್ಲಿ ಕಳಪೆ ಬೌಲಿಂಗ್ ಹಾಗೂ ಫೀಲ್ಡಿಂಗ್‌ನಿಂದಾಗಿ ಭಾರತ ತಂಡದಿಂದ ಗೆಲುವು ಕೈತಪ್ಪಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು ಋತುರಾಜ್ ಗಾಯಕವಾಡ್ ಅಜೇಯ ಶತಕದ ಬಲದಿಂದ 20 ಓವರ್‌ಗಳಲ್ಲಿ3 ವಿಕೆಟ್‌ಗಳಿಗೆ 222 ರನ್ ಗಳಿಸಿತು. 

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 15 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 145 ರನ್ ಗಳಿಸಿತ್ತು. ಗೆಲುವಿಗೆ 30 ಎಸೆತಗಳಲ್ಲಿ 78 ರನ್‌ಗಳ ಅಗತ್ಯವಿತ್ತು. ಆಗಿನ್ನೂ ಭಾರತಕ್ಕೆ ಗೆಲುವಿನ ಅವಕಾಶವಿತ್ತು. ಆದರೆ ಮ್ಯಾಕ್ಸ್‌ವೆಲ್  ಆಟದ ಭರಾಟೆ ಮುಗಿಲುಮುಟ್ಟಿತು.

ಈಚೆಗೆ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಅಫ್ಗಾನಿಸ್ತಾನ ಎದುರು ಅಜೇಯ ದ್ವಿಶತಕ ಹೊಡೆದು ‘ಹೀರೊ‘ ಆಗಿದ್ದ ಮ್ಯಾಕ್ಲ್‌ವೆಲ್ ಇಲ್ಲಿಯೂ ಅಮೋಘ ಬ್ಯಾಟಿಂಗ್ ಮಾಡಿದರು.

ಕೊನೆಯ ಓವರ್‌ನಲ್ಲಿ 21 ರನ್‌ಗಳ ಅಗತ್ಯವಿದ್ದಾಗ ಪ್ರಸಿದ್ಧ ಕೃಷ್ಣ ಕೈಗೆ ಚೆಂಡು ಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ತಂತ್ರ ಫಲಿಸಲಿಲ್ಲ. ಈ ಓವರ್‌ ನಲ್ಲಿ ಮ್ಯಾಕ್ಸ್‌ವೆಲ್ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದರೆ,  ಮ್ಯಾಥ್ಯೂ ವೇಡ್ ಒಂದು ಬೌಂಡರಿ ಬಾರಿಸಿದರು. ಮ್ಯಾಕ್ಸ್‌ವೆಲ್ ಮತ್ತು  ವೇಡ್ ಮುರಿಯದ 6ನೇ ವಿಕೆಟ್ ಜೊತೆಯಾಟದಲ್ಲಿ 91ರನ್ ಗಳಿಸಿದರು.

ಋತುರಾಜ್ ಚೊಚ್ಚಲ ಶತಕ: ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಗಳಿಸಿದ ಋತುರಾಜ್ ಗಾಯಕವಾಡ್  ನೆರವಿನಿಂದ ಭಾರತ ತಂಡ ದೊಡ್ಡ ಮೊತ್ತ ಗಳಿಸಿತು. 

ಋತುರಾಜ್ ಅಜೇಯ 123 ರನ್‌ಗಳನ್ನು ಗಳಿಸಿದರು. ಕೇವಲ 57 ಎಸೆತಗಳನ್ನು ಎದುರಿಸಿದ ಅವರು 13 ಬೌಂಡರಿ ಮತ್ತು 7 ಸಿಕ್ಸರ್ ಸಿಡಿಸಿದರು. 215.79ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದರು. ತಿಲಕ್ ವರ್ಮಾ ಅವರೊಂದಿಗೆ ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 141 ರನ್ ಕೂಡ ಸೇರಿಸಿದರು.

ಆರಂಭಿಕ ಆಘಾತ: ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು 24 ರನ್‌ಗಳಿಗೆ ಎರಡು ವಿಕೆಟ್ ಕಳೆದು ಕೊಂಡಿತು. ಯಶಸ್ವಿ ಜೈಸ್ವಾಲ್ ಮತ್ತು ಇಶಾನ್ ಕಿಶನ್ ಪೆವಿಲಿಯನ್ ಸೇರಿದರು. ಆದರೆ ಇನ್ನೊಂದು ಬದಿಯಲ್ಲಿದ್ದ ಋತುರಾಜ್ ಮಾತ್ರ ಏಕಾಗ್ರ ಚಿತ್ತದಿಂದ ಬ್ಯಾಟಿಂಗ್ ಮಾಡಿದರು.

ಕ್ರೀಸ್‌ಗೆ ಬಂದ  ಸೂರ್ಯಕುಮಾರ್ ಯಾದವ್ (39;29ಎ) ಬೀಸಾಟ ವಾಡಿದರು. ಅವರು ಕ್ರೀಸ್‌ನಲ್ಲಿದ್ದಷ್ಟು ಹೊತ್ತು ಋತುರಾಜ್ ಬೆಂಬಲವಾಗಿ ನಿಂತರು. ಆದರೆ 11ನೇ ಓವರ್‌ನಲ್ಲಿ ಆ್ಯರನ್ ಹಾರ್ಡಿ ಎಸೆತವನ್ನು ಆಡಿದ ಸೂರ್ಯಕುಮಾರ್, ವಿಕೆಟ್‌ಕೀಪರ್ ವೇಡ್‌ಗೆ ಕ್ಯಾಚಿತ್ತರು. ಆಗಿನ್ನೂ ತಂಡದ ಮೊತ್ತ 100ರ ಗಡಿಯನ್ನೂ ದಾಟಿರಲಿಲ್ಲ.

ಈ ಹಂತದಲ್ಲಿ ಕ್ರೀಸ್‌ಗೆ ಬಂದ ತಿಲಕ್ ವರ್ಮಾ ಅವರೊಂದಿಗೆ ಸೇರಿದ ಋತುರಾಜ್ ಇನಿಂಗ್ಸ್ ಚಿತ್ರಣವನ್ನೇ ಬದಲಿಸಿಬಿಟ್ಟರು. ಸೂರ್ಯ ಔಟಾದಾಗ ಋತುರಾಜ್ 22 ರನ್‌ (22 ಎಸೆತ) ಗಳಿಸಿ ಕ್ರೀಸ್‌ನಲ್ಲಿದ್ದ ಅವರು ನಂತರ ತಾವು ಎದುರಿಸಿದ 30 ಎಸೆತಗಳಲ್ಲಿ ಶತಕದ ಗಡಿ ದಾಟಿದರು.

ಅದರಲ್ಲೂ ಕೊನೆಯ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಎಸೆತಗಳನ್ನು ದಂಡಿಸಿದರು. ಇದೊಂದೇ ಓವರ್‌ನಲ್ಲಿ ಋತುರಾಜ್ ಮೂರು ಸಿಕ್ಸರ್, ಎರಡು ಬೌಂಡರಿ ಸಿಡಿಸಿದರು. ಈ ಓವರ್‌ನಲ್ಲಿ ಒಟ್ಟು 30 ರನ್‌ಗಳು ಹರಿದುಬಂದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.