ಪರ್ತ್: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್–ಗವಾಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 295 ರನ್ ಅಂತರದ ಭಾರಿ ಗೆಲುವು ಸಾಧಿಸಿದೆ. ಇದು ಏಷ್ಯಾ ಖಂಡದ ಹೊರಗೆ ಟೀಂ ಇಂಡಿಯಾಗೆ ರನ್ ಅಂತರದಲ್ಲಿ ದೊರೆತ ಅತಿದೊಡ್ಡ ಗೆಲುವಾಗಿದೆ.
ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ನಾಯಕ ಜಸ್‌ಪ್ರಿತ್ ಬೂಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 30 ರನ್ ನೀಡಿ 5 ವಿಕೆಟ್ ಪಡೆದಿದ್ದ ಅವರು, ಎರಡನೇ ಇನಿಂಗ್ಸ್‌ನಲ್ಲಿ 42 ರನ್‌ಗೆ 3 ವಿಕೆಟ್ ಪಡೆದರು.
ಪರ್ತ್ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಪಂದ್ಯದ ಗೆಲುವಿಗೆ ಭಾರತ 534 ರನ್‌ಗಳ ಕಠಿಣ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಆತಿಥೇಯ ತಂಡ, 238 ರನ್ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು. ಅದರೊಂದಿಗೆ ಭಾರತದ ಎದುರು ತವರಿನಲ್ಲಿ (ರನ್ ಅಂತರದಲ್ಲಿ) ಎರಡನೇ ಅತಿದೊಡ್ಡ ಮುಖಭಂಗ ಅನುಭವಿಸಿತು.
ಹೋರಾಟಕ್ಕೆ ಸ್ಫೂರ್ತಿಯಾದ ನಾಯಕ ಬೂಮ್ರಾ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆಸ್ಟ್ರೇಲಿಯನ್ನರ ವೇಗದ ದಾಳಿ ಎದುರು ತತ್ತರಿಸಿತ್ತು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 150 ರನ್‌ಗಳಿಸಿ ಆಲೌಟ್ ಆಗಿತ್ತು. ಆದರೆ, ಬೌಲಿಂಗ್ ವೇಳೆ ಮರು ಹೋರಾಟ ನಡೆಸಿ, 46 ರನ್‌ಗಳ ಮುನ್ನಡೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಮುಂಚೂಣಿಯಲ್ಲಿ ನಿಂತು ಭಾರತದ ಹೋರಾಟಕ್ಕೆ ಸ್ಫೂರ್ತಿ ತುಂಬಿದ ನಾಯಕ ಬೂಮ್ರಾ, ಪ್ರಮುಖ ಐದು ವಿಕೆಟ್‌ಗಳನ್ನು ಉರುಳಿಸಿದರು. ಅವರ ಆಟದಿಂದ ಪ್ರೇರಣೆ ಪಡೆದ ಇತರ ವೇಗಿಗಳು, ಲಯಬದ್ಧ ಎಸೆತಗಳನ್ನು ಪ್ರಯೋಗಿಸಿದರು.
ಅದೇ ಲಯವನ್ನು ಬ್ಯಾಟರ್‌ಗಳು ಎರಡನೇ ಇನಿಂಗ್ಸ್‌ನಲ್ಲೂ ಮುಂದುವರಿಸಿದರು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (161 ರನ್), 'ರನ್ ಮಷಿನ್' ಖ್ಯಾತಿಯ ವಿರಾಟ್ ಕೊಹ್ಲಿ (ಅಜೇಯ 100 ರನ್) ಆಕರ್ಷಕ ಶತಕ ಸಿಡಿಸಿದರೆ, ಕನ್ನಡಿಗ ಕೆ.ಎಲ್.ರಾಹುಲ್ ಅವರ ಅರ್ಧಶತಕ (77 ರನ್) ಗಳಿಸಿ ಮಿಂಚಿದರು.
ತಂಡದ ಮೊತ್ತ 6 ವಿಕೆಟ್‌ಗೆ 487 ರನ್ ಗಳಿಸಿದ್ದಾಗ ಇನಿಂಗ್ಸ್ ಡಿಕ್ಲೇರ್ ಘೋಷಿಸಿದ ಬೂಮ್ರಾ, ಮೂರನೇ ದಿನದಾಟ ಮುಕ್ತಾಯಕ್ಕೆ ಕೆಲಹೊತ್ತಿದ್ದಾಗಲೇ ಎದುರಾಳಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಈ ತಂತ್ರ ಯಶಸ್ವಿಯೂ ಆಯಿತು.
ಮತ್ತೆ ಮುಗ್ಗರಿಸಿದ ಆಸ್ಟ್ರೇಲಿಯಾ
534 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಕಾಂಗರೂ ಪಡೆ, 2ನೇ ಇನಿಂಗ್ಸ್‌ನಲ್ಲೂ ಮುಗ್ಗರಿಸಿತು.
3ನೇ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು 12 ರನ್ ಗಳಿಸಿದ್ದ ಆಸಿಸ್, ಮರುದಿನವೂ ಒತ್ತಡದಲ್ಲೇ ಬ್ಯಾಟಿಂಗ್ ಮುಂದುವರಿಸಿತು. ಇದರ ಲಾಭ ಪಡೆದ ಟೀಂ ಇಂಡಿಯಾ ವೇಗಿಗಳು ಮೇಲುಗೈ ಸಾಧಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಟ್ರಾವಿಸ್ ಹೆಡ್ (89 ರನ್), ಮಿಚೇಲ್ ಮಾರ್ಷ್ (47 ರನ್) ಮತ್ತು ಅಲೆಕ್ಸ್ ಕ್ಯಾರಿ (36 ರನ್) ಹೋರಾಟ ನಡೆಸಿದರೂ, ಸೋಲು ತಪ್ಪಿಸಿಕೊಳ್ಳಲು ಸಾಕಾಗಲಿಲ್ಲ.
ಮತ್ತೆ ಮಿಂಚಿದ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ ಮೂರು ವಿಕೆಟ್ ಕಬಳಿಸಿದರು. ವಾಷಿಂಗ್ಟನ್ ಸುಂದರ್ ಎರಡು ವಿಕೆಟ್ ಪಡೆದರೆ, ಹರ್ಷಿತ್ ರಾಣಾ, ನಿತೀಶ್ ರೆಡ್ಡಿ ತಲಾ ಒಂದೊಂದು ವಿಕೆಟ್ ಪಡೆದರು.
ಏಷ್ಯಾದ ಹೊರಗೆ ಭಾರತಕ್ಕೆ ದೊರತ ದೊಡ್ಡ ಗೆಲುವುಗಳು (ರನ್ ಅಂತರದಲ್ಲಿ)
2019: ವೆಸ್ಟ್ ಇಂಡೀಸ್ ವಿರುದ್ಧ ನಾರ್ಥ್‌ಸೌಂಡ್‌ನಲ್ಲಿ 318 ರನ್‌ಗಳ ಜಯ
2024: ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ 295 ರನ್‌ಗಳ ಜಯ
1986: ಇಂಗ್ಲೆಂಡ್ ವಿರುದ್ಧ ಹೆಡಿಂಗ್ಲೆಯಲ್ಲಿ 279 ರನ್‌ಗಳ ಜಯ
2019: ನ್ಯೂಜಿಲೆಂಡ್ ವಿರುದ್ಧ ಆಕ್ಲೆಂಡ್‌ನಲ್ಲಿ 272 ರನ್‌ಗಳ ಜಯ
2019: ವೆಸ್ಟ್ ಇಂಡೀಸ್ ವಿರುದ್ಧ ಕಿಂಗ್ಸ್‌ಟನ್‌ನಲ್ಲಿ 257 ರನ್‌ಗಳ ಜಯ
ಭಾರತದ ಎದುರು ಆಸಿಸ್‌ಗೆ ರನ್ ಅಂತರದಲ್ಲಿ ಅತಿದೊಡ್ಡ ಸೋಲುಗಳಿವು
2008: ಮೊಹಾಲಿಯಲ್ಲಿ 320 ರನ್ ಸೋಲು
2024: ಪರ್ತ್‌ನಲ್ಲಿ 295 ರನ್ ಸೋಲು
1977: ಮೆಲ್ಪರ್ನ್‌ನಲ್ಲಿ 222 ರನ್ ಸೋಲು
1998: ಚೆನ್ನೈನಲ್ಲಿ 179 ರನ್ ಸೋಲು
2008: ನಾಗ್ಪುರದಲ್ಲಿ 172 ರನ್ ಸೋಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.