ಬೆನೊನಿ (ದಕ್ಷಿಣ ಆಫ್ರಿಕಾ): 19 ವರ್ಷದೊಳಗಿನವರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.
ಐದು ಬಾರಿಯ ಚಾಂಪಿಯನ್ ಭಾರತ ತಂಡವು ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರುವ ಕನಸಿನೊಂದಿಗೆ ಕಣಕ್ಕಿಳಿದಿದೆ.
ಒಂಬತ್ತನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಮಾಡುವ ಸಮರ್ಥರನ್ನೊಳಗೊಂಡ ಆಸ್ಟ್ರೇಲಿಯಾ 4ನೇ ಬಾರಿ ಟ್ರೋಫಿಗೆ ಮುತ್ತಿಡುವ ಲೆಕ್ಕಾಚಾರದಲ್ಲಿ ಆಡುತ್ತಿದೆ.
ಸಚಿನ್ ದಾಸ್, ಮುಷೀರ್ ಖಾನ್ ಮತ್ತು ಸೂರ್ಯಕುಮಾರ್ ಪಾಂಡೆ ಅವರಂತಹ ಪ್ರತಿಭಾವಂತರು ಭಾರತ ತಂಡದಲ್ಲಿದ್ದಾರೆ. ಅದೇರೀತಿ, ಆಸ್ಟ್ರೇಲಿಯಾ ಬಳಗದಲ್ಲಿ ಪರಿಣಾಮಕಾರಿ ಬೌಲರ್‌ಗಳು ಇದ್ದಾರೆ.
2012 ಮತ್ತು 2018ರ ಟೂರ್ನಿಗಳ ಫೈನಲ್‌ಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದ ಭಾರತ, 2016ರಿಂದ ಇಲ್ಲಿಯವರೆಗೆ ನಡೆದ ಎಲ್ಲ ವಿಶ್ವಕಪ್ ಟೂರ್ನಿಗಳಲ್ಲಿಯೂ ಫೈನಲ್‌ಗೇರಿದ ಹೆಗ್ಗಳಿಕೆ ಹೊಂದಿದೆ. 2016 ಹಾಗೂ 2020ರಲ್ಲಿ ಬಿಟ್ಟರೆ ಉಳಿದ ಆವೃತ್ತಿಗಳಲ್ಲಿ ಜಯಭೇರಿ ಬಾರಿಸಿದೆ.
ಸದ್ಯ ಬ್ಯಾಟಿಂಗ್ ಆರಂಭಿಸಿರುವ ಆಸಿಸ್, 2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 16 ರನ್ ಗಳಿಸಿದೆ.
ಹ್ಯಾರಿ ಡಿಕ್ಸನ್ (15) ಮತ್ತು ಸ್ಯಾಮ್ ಕೊನ್ಸ್ಟಾಸ್ (0) ಕ್ರೀಸ್‌ನಲ್ಲಿದ್ದಾರೆ.
'ಮುಯ್ಯಿ ತೀರಿಸಿಕೊಳ್ಳುವ ಯೋಜನೆ ಇಲ್ಲ'
2023ರ ನವೆಂಬರ್ 19ರಂದು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ವಿಶ್ವಕಪ್ ಫೈನಲ್‌ನಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ಎದುರು ಸೋತಿತ್ತು. ಇದೀಗ ಉಭಯ ದೇಶಗಳ ‘ಭಾವಿ ತಾರೆ‘ಗಳು ಮುಖಾಮುಖಿಯಾಗಲಿವೆ. ಹೀಗಾಗಿ ಈ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.
ಟಿಂ ಇಂಡಿಯಾ ನಾಯಕ ಉದಯ್ ಸಹಾರನ್, ‘ನಾವು ಮುಯ್ಯಿ ತೀರಿಸಿಕೊಳ್ಳುವ ಬಗ್ಗೆ ಯೋಚನೆ ಮಾಡುತ್ತಿಲ್ಲ. ವರ್ತಮಾನದ ಮೇಲೆ ಮಾತ್ರ ನಮ್ಮ ಗಮನವಿದೆ. ಹಳೆಯ ಘಟನೆ ಅಥವಾ ಭವಿಷ್ಯದ ಬಗ್ಗೆ ಚಿಂತಿತರಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಹನ್ನೊಂದರ ಬಳಗ
ಭಾರತ: ಆದರ್ಶ್ ಸಿಂಗ್, ಅರ್ಷಿಣ್ ಕುಲಕರ್ಣಿ, ಮುಷೀರ್ ಖಾನ್, ಉದಯ ಸಹಾರನ್ (ನಾಯಕ), ಪ್ರಿಯಾಂಶು ಮಾಲಿಯಾ, ಸಚಿನ್ ದಾಸ್, ಅರವೆಳ್ಳಿ ಅವನೀಶ್ (ವಿಕೆಟ್‌ಕೀಪರ್), ಮುರುಗನ್ ಅಭಿಷೇಕ್, ರಾಜ್ ಲಿಂಬಾನಿ, ನಮನ್ ತಿವಾರಿ, ಸೌಮಿಕುಮಾರ್ ಪಾಂಡೆ
ಆಸ್ಟ್ರೇಲಿಯಾ: ಹ್ಯಾರಿ ಡಿಕ್ಸನ್, ಸ್ಯಾಮ್ ಕೊನ್ಸ್ಟಾಸ್, ಹಗ್ ವಿಬ್‌ಜೆನ್ (ನಾಯಕ), ಹರ್ಜಾಸ್ ಸಿಂಗ್, ರಿಯಾನ್ ಹಿಕ್ಸ್ (ವಿಕೆಟ್‌ಕೀಪರ್), ಒಲೀ ಪೀಕೆ, ರಫೆಲ್ ಮ್ಯಾಕ್‌ಮಿಲನ್, ಚಾರ್ಲಿ ಆ್ಯಂಡರ್ಸನ್, ಟಾಮ್ ಸ್ಟ್ರೇಕರ್, ಮಾಳಿ ಬಿಯರ್ಡ್‌ಮ್ಯಾನ್, ಕ್ಯಾಲಂ ವಿಡ್ಲೆರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.