ADVERTISEMENT

ಮೆಲ್ಬರ್ನ್‌ನಲ್ಲಿ ಗೆಲುವಿನ ಮೆರಗು; ಅಂಕಿಅಂಶಗಳ ಹೈಲೈಟ್ಸ್ ಇಲ್ಲಿದೆ

ಏಜೆನ್ಸೀಸ್
Published 29 ಡಿಸೆಂಬರ್ 2020, 8:31 IST
Last Updated 29 ಡಿಸೆಂಬರ್ 2020, 8:31 IST
ಟೀಮ್ ಇಂಡಿಯಾ ಸಂಭ್ರಮ
ಟೀಮ್ ಇಂಡಿಯಾ ಸಂಭ್ರಮ   

ಮೆಲ್ಬರ್ನ್: ಇತಿಹಾಸ ಪ್ರಸಿದ್ಧ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ಆಸ್ಟ್ರೇಲಿಯಾ ವಿರುದ್ಧ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಎಂಟು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಅಂತರದ ಸಮಬಲ ದಾಖಲಿಸಿದೆ. ಈ ಮೊದಲು ಅಡಿಲೇಡ್ ಓವಲ್‌ನಲ್ಲಿ ನಡೆದ ಚೊಚ್ಚಲ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಎಂಟು ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು.

ಆದರೆ ಎಂಸಿಜಿಯಲ್ಲಿ ಅಜಿಂಕ್ಯ ರಹಾನೆ ಮುಂದಾಳತ್ವದಲ್ಲಿ ತಿರುಗಿ ಬಿದ್ದಿರುವ ಭಾರತೀಯ ಪಡೆ ಸ್ಮರಣೀಯ ಗೆಲುವು ದಾಖಲಿಸಿದೆ. ಪ್ರಸ್ತುತ ಪಂದ್ಯದಲ್ಲಿ ಅನೇಕ ದಾಖಲೆಗಳು ದಾಖಲಾಗಿದೆ. ಈ ಬಗ್ಗೆ ಅಂಕಿಅಂಶಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ.

ಮೆಲ್ಬರ್ನ್‌ ವಿಜಯ ತಾಣ:
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ ಕ್ರಿಕೆಟ್ ತಂಡವು ನಾಲ್ಕನೇ ಟೆಸ್ಟ್ ಗೆಲುವು ದಾಖಲಿಸಿದೆ. ಈ ಮೂಲಕ ಎಂಸಿಜಿ ಭಾರತ ತಂಡದ ಪಾಲಿಗೆ ಅತ್ಯಂತ ಯಶಸ್ವಿ ವಿದೇಶಿ ವಿಜಯ ತಾಣವೆನಿಸಿದೆ. ಇದಕ್ಕೂ ಮೊದಲು ಕ್ವೀನ್ಸ್ ಪಾರ್ಕ್ ಓವಲ್, ಟ್ರಿನಿಡಾಡ್, ಸಬಿನಾ ಪಾರ್ಕ್, ಜಮೈಕಾ ಮತ್ತು ಕೊಲಂಬೊ ಮೈದಾನಗಳಲ್ಲಿ ಭಾರತ ತಂಡವು ತಲಾ ಮೂರು ಗೆಲುವುಗಳನ್ನು ದಾಖಲಿಸಿತ್ತು.

ADVERTISEMENT

ಇಂಗ್ಲೆಂಡ್ ಸಾಲಿಗೆ ಭಾರತ:
ಕ್ರಿಕೆಟ್ ಜನಕ ಇಂಗ್ಲೆಂಡ್ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ. ಇಂಗ್ಲೆಂಡ್ ಎಂಸಿಜಿ ಮೈದಾನದಲ್ಲಿ ಮೂರಕ್ಕೂ ಹೆಚ್ಚು ಗೆಲುವುಗಳನ್ನು ದಾಖಲಿಸಿತ್ತು.

ಭಾರತದ ಯಶಸ್ವಿ ವಿದೇಶಿ ತಾಣಗಳ ಪಟ್ಟಿ:
ಮೆಲ್ಬರ್ನ್: ಪಂದ್ಯ: 14, ಗೆಲುವು: 4
ಪೋರ್ಟ್ ಆಫ್ ಸ್ಪೇನ್: ಪಂದ್ಯ: 13, ಗೆಲುವು: 3
ಕಿಂಗ್‌ಸ್ಟನ್: ಪಂದ್ಯ: 13, ಗೆಲುವು: 3

ಟಾಸ್ ಸೋತು, ಬೌಲಿಂಗ್ ಮಾಡಿಯೂ ಗೆಲುವು:
2003ನೇ ಇಸವಿಯಲ್ಲಿ ಭಾರತ ಕ್ರಿಕೆಟ್ ತಂಡವು ಕೊನೆಯದಾಗಿ ಸೇನಾ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) ರಾಷ್ಟ್ರಗಳಲ್ಲಿ ಟಾಸ್ ಸೋತು ಬೌಲಿಂಗ್‌ಗೆ ಇಳಿಸಲ್ಪಟ್ಟರೂ ಗೆಲುವು ದಾಖಲಿಸಿತ್ತು. 2003ರ ಅಡಿಲೇಡ್ ಟೆಸ್ಟ್ ಸಾಧನೆಯನ್ನೀಗ ಭಾರತ 17 ವರ್ಷಗಳ ಬಳಿಕ ಪುನರಾವರ್ತಿಸಿದೆ. ಇನ್ನು ವಿದೇಶ ನೆಲದಲ್ಲಿ ಶ್ರೀಲಂಕಾ ವಿರುದ್ಧ 2010ರಲ್ಲಿ ಕೊನೆಯದಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟರೂ ಭಾರತ ಜಯ ದಾಖಲಿಸಿತ್ತು.

50ರ ಗಡಿ ದಾಟದ ಆಸೀಸ್ ಬ್ಯಾಟ್ಸ್‌ಮನ್:
ಆಸ್ಟ್ರೇಲಿಯಾದ ಯಾವುದೇ ಬ್ಯಾಟ್ಸ್‌ಮನ್ ಅರ್ಧಶತಕ ಗಳಿಸಲು ಯಶಸ್ವಿಯಾಗಲಿಲ್ಲ. ಆಸಕ್ತಿದಾಯಕ ಸಂಗತಿಯೆಂದರೆ 32 ವರ್ಷಗಳ ಹಿಂದೆಯೂ ವೆಸ್ಟ್‌ಇಂಡೀಸ್ ವಿರುದ್ಧ ಇದೇ ಎಂಸಿಜಿ ಮೈದಾನದಲ್ಲಿ ಆಸೀಸ್‌ನ ಯಾವ ಬ್ಯಾಟ್ಸ್‌ಮನ್‌ನಿಂದಲೂ ಅರ್ಧಶತಕ ದಾಖಲಾಗಲಿಲ್ಲ.

ಮಾಲಿಂಗ ಬಳಿಕ ಸಿರಾಜ್:
ಆಸ್ಟ್ರೇಲಿಯಾದಲ್ಲಿ ಡೆಬ್ಯು ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿದೇಶಿ ಬೌಲರ್‌ಗಳ ಪೈಕಿ ಶ್ರೀಲಂಕಾದ ಲಸಿತ್ ಮಾಲಿಂಗ ಬಳಿಕ ಮೊಹಮ್ಮದ್ ಸಿರಾಜ್ ಗುರುತಿಸಿದ್ದಾರೆ. ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಸಿರಾಜ್ ಒಟ್ಟು ಐದು ವಿಕೆಟ್ ಕಬಳಿಸಿದ್ದರು.

ಧೋನಿ ಸಾಲಿಗೆ ಸೇರಿದ ಅಜಿಂಕ್ಯ:
ಮಹೇಂದ್ರ ಸಿಂಗ್ ಧೋನಿ ಬಳಿಕ ಭಾರತ ಟೆಸ್ಟ್ ತಂಡದ ನಾಯಕತ್ವ ವಹಿಸಿದ ಬಳಿಕ ಮೊದಲ ಮೂರು ಪಂದ್ಯಗಳನ್ನು ಗೆದ್ದ ಗೌರವಕ್ಕೆ ಅಜಿಂಕ್ಯ ರಹಾನೆ ಭಾಜನವಾಗಿದ್ದಾರೆ. ಈ ಮೂಲಕ ಮಹಿ ಅವರ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಅಜಿಂಕ್ಯ ರಹಾನೆ ಕಪ್ತಾನರಾಗಿ ಫಲಿತಾಂಶ ಇಂತಿದೆ:
2016/17: ಆಸ್ಟ್ರೇಲಿಯಾ ವಿರುದ್ಧ ಎಂಟು ವಿಕೆಟ್ ಗೆಲುವು, ಧರ್ಮಶಾಲಾ
2018: ಅಪಘಾನಿಸ್ತಾನ ವಿರುದ್ಧ 262 ರನ್ ಗೆಲುವು, ಬೆಂಗಳೂರು
2020/21: ಆಸ್ಟ್ರೇಲಿಯಾ ವಿರುದ್ಧ ಎಂಟು ವಿಕೆಟ್ ಗೆಲುವು, ಎಂಸಿಜಿ

ಅಶ್ವಿನ್ ಸಾಧನೆ:
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಎಡಗೈ ದಾಂಡಿಗರನ್ನು ಔಟ್ ಮಾಡಿದ ಖ್ಯಾತಿಗೆ ರವಿಚಂದ್ರನ್ ಅಶ್ವಿನ್ ಪಾತ್ರವಾಗಿದ್ದಾರೆ. 375 ವಿಕೆಟ್‌ಗಳ ಪೈಕಿ ಅಶ್ವಿನ್, 192 ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಹೊರದಬ್ಬಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಶ್ರೀಲಂಕಾದ ಮಾಜಿ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ 800 ವಿಕೆಟ್‌ಗಳ ಪೈಕಿ 191 ಎಡಗೈ ಬ್ಯಾಟ್ಸ್‌ಮನ್‌ಗಳ ವಿಕೆಟ್‌ಗಳನ್ನು ಪಡೆದಿದ್ದಾರೆ. ಭಾರತದವರೇ ಆದ ಅನಿಲ್ ಕುಂಬ್ಳೆ 619 ವಿಕೆಟ್‌ಗಳ ಪೈಕಿ 167 ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದಾರೆ.

ಬೂಮ್ರಾ ಪಾಲಿಗೆ ಎಂಸಿಜಿ ಫೇವರಿಟ್:
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಅಮೋಘ ಸಾಧನೆ ಮುಂದುವರಿಸಿರುವ ಜಸ್‌ಪ್ರೀತ್ ಬೂಮ್ರಾ, 13.06ರ ಸರಾಸರಿಯಲ್ಲಿ ಇದುವರೆಗೆ ಒಟ್ಟು 15 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಆಸ್ಟ್ರೇಲಿಯಾ ಕಳಪೆ ರನ್ ರೇಟ್:
1990ರ ಬಳಿಕ ತಾಯ್ನಾಡಿನ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಅತಿ ಕಡಿಮೆ ರನ್ ರೇಟ್ (2.52) ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.