ADVERTISEMENT

IND vs AUS Test Series: ಬೂಮ್ರಾ ಪಡೆಗೆ ಕಠಿಣ ಸವಾಲು

ಮಧು ಜವಳಿ
Published 21 ನವೆಂಬರ್ 2024, 23:41 IST
Last Updated 21 ನವೆಂಬರ್ 2024, 23:41 IST
   

ಪರ್ತ್: ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಬರುವ ತಂಡಗಳು ಬ್ರಿಸ್ಬೇನ್‌ನಲ್ಲಿ ಮೊದಲ ಟೆಸ್ಟ್‌ ಆಡುವುದು ಸಂಪ್ರದಾಯದಂತಿತ್ತು. ವೇಗ, ಬೌನ್ಸ್‌ ಮತ್ತು ಬಿರುಕು ಪಡೆಯುತ್ತಿದ್ದ ಗ್ಯಾಬಾದ ಪಿಚ್‌ನಲ್ಲಿ ಆಸ್ಟ್ರೇಲಿಯಾ ಎದುರಾಳಿಗಳ ಬೆವರಿಳಿಸುತಿತ್ತು. ಈ ವೇಗದ ದಾಳಿಯೆದುರು ಪ್ರವಾಸಿ ತಂಡದ ಆಟಗಾರರು ಮಾನಸಿಕವಾಗಿಯೂ ಅಳುಕುತ್ತಿದ್ದರು. ಈಗ ಆಸ್ಟ್ರೇಲಿಯಾ ಪಾಲಿಗೆ ಬ್ರಿಸ್ಬೇನ್‌ನ ಜಾಗವನ್ನು ಪರ್ತ್‌ ತುಂಬುತ್ತಿದೆಯೇ?

2019ರವರೆಗೆ ಬ್ರಿಸ್ಬೇನ್‌ ಆಸ್ಟ್ರೇಲಿಯಾದ ಭದ್ರಕೋಟೆಯಾಗಿತ್ತು. ಆದರೆ ಕೆಲವು ಯುವ ಆಟಗಾರರಿದ್ದ ಭಾರತ ತಂಡ ಇಲ್ಲಿ ಜಯಗಳಿಸಿತು. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಗೆದ್ದಿತು. ಆದರೆ ನಂತರ ವೆಸ್ಟ್‌ ಇಂಡೀಸ್ ಇಲ್ಲಿ ಆತಿಥೇಯ ತಂಡವನ್ನು ಸದೆಬಡಿಯಿತು.  ಹೀಗಾಗಿ ಪಶ್ಚಿಮ ಆಸ್ಟ್ರೇಲಿಯಾದ ಪರ್ತ್‌ ಮೊದಲ ಟೆಸ್ಟ್‌ ಆಡುವ ತಾಣವಾಗಿದೆ. ಹಳೆ ಕ್ರೀಡಾಂಗಣವಿರುವ ವಾಕಾ ಬದಲು ಆಪ್ಟಸ್‌ ಕ್ರೀಡಾಂಗಣ ಆತಿಥೇಯರಿಗೆ ಸುರಕ್ಷಿತವಾಗಿ ಕಾಣುತ್ತಿದೆ. ಇಲ್ಲಿ ಆಡಿರುವ ನಾಲ್ಕೂ ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯಾ ಜಯಗಳಿಸಿದೆ.

ಇದೇ ಕ್ರೀಡಾಂಗಣದಲ್ಲಿ ಭಾರತ– ಆಸ್ಟ್ರೇಲಿಯಾ ತಂಡಗಳ ನಡುವೆ ಬಾರ್ಡರ್‌– ಗಾವಸ್ಕರ್ ಟ್ರೋಫಿ ಸರಣಿಯ ಮೊದಲ ಟೆಸ್ಟ್‌ ಶುಕ್ರವಾರ ಆರಂಭವಾಗಲಿದೆ. ಈ ಹಿಂದೆ ಇಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಆಕರ್ಷಕ ಶತಕ ಪೋಣಿಸಿದ್ದರು. ಮೊಹಮ್ಮದ್ ಶಮಿ ಎರಡನೇ ಇನಿಂಗ್ಸ್‌ನಲ್ಲಿ ಅಮೋಘವಾಗಿ ಬೌಲ್ ಮಾಡಿದ್ದರು. ಆದರೂ ಆತಿಥೇಯರು 146 ರನ್‌ಗಳ ಜಯ ಸಾಧಿಸಿದ್ದರು.

ADVERTISEMENT

ಈ ಬಾರಿ ತಂಡದಲ್ಲಿ ಶಮಿ ಇಲ್ಲ. ಕೊಹ್ಲಿ ಅವರು ‘ವಿರಾಟ್‌ ಸ್ವರೂಪ’ ಕಳೆದುಕೊಂಡಿದ್ದಾರೆ. ಜೊತೆಗೆ ತಂಡದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಹೊಸ ಸಂಯೋಜನೆ, ಹೊಸಮುಖ, ಲಯದಲ್ಲಿಲ್ಲದ ಅನುಭವಿಗಳೊಂದಿಗೆ ಭಾರತ ತಂಡ, ಪ್ರಬಲ ಆಸ್ಟ್ರೇಲಿಯಾ ವನ್ನು ಎದುರಿಸಲು ಹೊರಟಿದೆ.

ಈ ಪಂದ್ಯಕ್ಕೆ ಜಸ್‌ಪ್ರೀತ್ ಬೂಮ್ರಾ ನಾಯಕ. ರೋಹಿತ್‌ ಅವರ ಸ್ಥಾನದಲ್ಲಿ ಕೆ.ಎಲ್.ರಾಹುಲ್ ಆರಂಭ ಆಟಗಾರನಾಗಿ ಆಡಬೇಕಾಗಿದೆ. ಮೂರನೇ ಕ್ರಮಾಂಕದಲ್ಲಿ ಕನ್ನಡಿಗ ದೇವದತ್ತ ಪಡಿಕ್ಕಲ್‌ ತಮ್ಮ ಎರಡನೇ ಟೆಸ್ಟ್‌ ಆಡಲು ಸಿದ್ಧರಾಗಿದ್ದಾರೆ. ವೇಗದ ಬೌಲಿಂಗ್ ಆಲ್‌ರೌಂಡರ್ ನಿತೀಶ್ ಕುಮಾರ್‌ ರೆಡ್ಡಿ ಅವರಿಗೆ ದೀರ್ಘ ಮಾದರಿಯಲ್ಲಿ ಪರೀಕ್ಷೆ ಎದುರಾಗಿದೆ. ಮೂರನೇ ವೇಗಿಯಾಗಿ ಪ್ರಸಿದ್ಧ ಕೃಷ್ಣ (ಎರಡು ಟೆಸ್ಟ್‌ ಆಡಿದ್ದಾರೆ) ಮತ್ತು ಹರ್ಷಿತ್ ರಾಣಾ (ಇನ್ನೂ ಪದಾರ್ಪಣೆ ಮಾಡಿಲ್ಲ) ಇವರಲ್ಲಿ ಒಬ್ಬರು ಆಡಬಹುದು.

ಆಸ್ಟ್ರೇಲಿಯಾ ಅನುಭವಿ ಬ್ಯಾಟರ್‌ಗಳ ಜೊತೆಗೆ ವಿಶ್ವದಲ್ಲೇ ಪ್ರಬಲ ದಾಳಿ ಹೊಂದಿದೆ. ಈಗ ತಂಡದಲ್ಲಿರುವ ಪ್ರಮುಖ ವೇಗದ ಬೌಲರ್‌ಗಳು 900 ವಿಕೆಟ್‌ಗಳನ್ನು ಹಂಚಿಕೊಂಡಿದ್ದಾರೆ. ಸ್ಪಿನ್‌ ಸ್ನೇಹಿ ವಾತಾವರಣದಲ್ಲಿ ಆಡಿ ನ್ಯೂಜಿಲೆಂಡ್ ಎದುರು 3–0 ಮುಖಭಂಗ ಅನುಭವಿಸಿದ್ದ, ಭಾರತ ತಂಡದ ಮನೋಬಲ ಈಗ
ಉತ್ತಮವಾಗಿಲ್ಲ.

ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ಅವಕಾಶದ ಬಾಗಿಲುಗಳಿರುತ್ತವೆ. ಈ ಹಿಂದೆ ಅಡಿಲೇಡ್‌ನಲ್ಲಿ ಅತ್ಯಂತ ಕಳಪೆಯಾಗಿ ಆಡಿದ ಭಾರತ 36 ರನ್ನಿಗೆ ಆಲೌಟ್‌ ಆಗಿತ್ತು. ಆದರೆ ಆ ಸರಣಿಯಲ್ಲಿ ಹೀನಾಯ ಸ್ಥಿತಿಯಿಂದ ಕೆಚ್ಚೆದೆಯ ಆಟವಾಡಿ ತಿರುಗಿಬಿದ್ದ ಪರಿಯನ್ನು ಕ್ರಿಕೆಟ್‌ಪ್ರಿಯರು ಮರೆತಿರಲಿಕ್ಕಿಲ್ಲ. ಅದು ಭಾರತದ ಶ್ರೇಷ್ಠ ಸರಣಿ ಜಯಗಳಲ್ಲಿ ಸ್ಮರಣೀಯವಾಯಿತು.

ಭಾರತ ಮೊದಲ ಟೆಸ್ಟ್‌ಗೆ, ನಿತೀಶ್ ಸೇರಿದಂತೆ ನಾಲ್ವರು ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಬೂಮ್ರಾ, ಸಿರಾಜ್ ಜೊತೆ ಹರ್ಷಿತ್‌ ರಾಣಾ ಮೂರನೇ ವೇಗದ ಆಯ್ಕೆಯಾಗಬಹುದು.
ಆದರೆ ಭಾರತ ‘ಎ’ ತಂಡದ ಪರ ನೀಡಿದ ಪ್ರದರ್ಶನದಿಂದ ಪ್ರಸಿದ್ಧ ಅವರಿಗೂ ಈಗ ಅವಕಾಶ ಹೆಚ್ಚಿದೆ. ನಿತೀಶ್ ಆಡಿದಲ್ಲಿ ಅಶ್ವಿನ್ ತಂಡದಲ್ಲಿ ಏಕೈಕ ಸ್ಪಿನ್ನರ್ ಆಗಿ ಕಣಕ್ಕಿಳಿಯಲಿದ್ದಾರೆ. ಈ ಹಿಂದೆ ಬ್ಯಾಟಿಂಗ್ ಕಾರಣದಿಂದ ರವೀಂದ್ರ ಜಡೇಜ ಆ ಸ್ಥಾನ ತುಂಬುತ್ತಿದ್ದರು.

ಆಸ್ಟ್ರೇಲಿಯಾ ತಂಡದಲ್ಲಿ ಆರಂಭ ಆಟಗಾರ ನಥಾನ್ ಮೆಕ್‌ಸ್ವೀನಿ ಪದಾರ್ಪಣೆಗೆ ಸಜ್ಜಾಗಿದ್ದಾರೆ. ನಿವೃತ್ತರಾಗಿರುವ ಡೇವಿಡ್ ವಾರ್ನರ್ ಸ್ಥಾನಕ್ಕೆ ಪರ್ಯಾಯ ಆಯ್ಕೆಯಾಗಿ ಅವರು ಕೆಲಸಮಯದಿಂದ  ಗುರುತಿಸಿಕೊಂಡವರು. ಪ್ರಬಲವಾಗಿರುವ ಆಸ್ಟ್ರೇಲಿಯಾದ ಬ್ಯಾಟಿಂಗ್ ಸರದಿ, ಬೂಮ್ರಾ ಪಡೆಗೆ ಸವಾಲಾಗಬಹುದು.

ತಂಡಗಳು

ಆಸ್ಟ್ರೇಲಿಯಾ: ಪ್ಯಾಟ್‌ ಕಮಿನ್ಸ್ (ನಾಯಕ), ಉಸ್ಮಾನ್ ಖ್ವಾಜಾ, ಟ್ರಾವಿಸ್ ಹೆಡ್‌, ಸ್ಟೀವ್ ಸ್ಮಿತ್‌, ಮಾರ್ನಸ್ ಲಾಬುಷೇನ್, ಜೋಸ್ ಇಂಗ್ಲಿಸ್‌ (ವಿಕೆಟ್‌ ಕೀಪರ್‌), ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್‌), ಮಿಚೆಲ್ ಮಾರ್ಷ್‌, ನಥಾನ್ ಮೆಕ್‌ಸ್ವೀನಿ, ಮಿಚೆಲ್‌ ಸ್ಟಾರ್ಕ್, ಜೋಸ್‌ ಹ್ಯಾಜಲ್‌ವುಡ್‌, ಸ್ಕಾಟ್ ಬೋಲ್ಯಾಂಡ್ ಮತ್ತು ನಥಾನ್ ಲಯನ್.

ಭಾರತ: ಜಸ್‌ಪ್ರೀತ್ ಬೂಮ್ರಾ (ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ದೇವದತ್ತ ಪಡಿಕ್ಕಲ್‌, ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಅಭಿಮನ್ಯು ಈಶ್ವರನ್, ಸರ್ಫರಾಜ್ ಖಾನ್, ರಿಷಭ್ ಪಂತ್‌ (ವಿಕೆಟ್‌ ಕೀಪರ್‌), ಧ್ರುವ್ ಜುರೇಲ್ (ವಿಕೆಟ್ ಕೀಪರ್), ಆರ್‌.ಅಶ್ವಿನ್, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್‌, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್‌, ಪ್ರಸಿದ್ಧ ಕೃಷ್ಣ ಮತ್ತು ಹರ್ಷಿತ್ ರಾಣಾ.

ಪಂದ್ಯ ಆರಂಭ: ಬೆಳಿಗ್ಗೆ 7.50.

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

24ರಂದು ಪರ್ತ್ ತಲುಪಲಿರುವ ರೋಹಿತ್

ಪರ್ತ್‌ (ಪಿಟಿಐ): ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವಾದ ಭಾನುವಾರ ಪರ್ತ್‌ನ ಒಪ್ಟಸ್ ಕ್ರೀಡಾಂಗಣದಲ್ಲಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.

ನವೆಂಬರ್‌ 15ರಂದು ರೋಹಿತ್‌– ರೀತಿಕಾ ದಂಪತಿಗೆ ಎರಡನೇ ಮಗುವಾಗಿತ್ತು. ಈ ವೇಳೆ ಕುಟುಂಬದ ಜೊತೆ ಕಳೆದ ಕಾರಣ ಭಾರತ ತಂಡದ ನಾಯಕ ರೋಹಿತ್ ಅವರು ಇತರ ಆಟಗಾರರ ಜೊತೆ ಆಸ್ಟ್ರೇಲಿಯಾಕ್ಕೆ ಹೊರಟಿರಲಿಲ್ಲ. ಮೊದಲ ಟೆಸ್ಟ್‌ನಲ್ಲಿ ಅವರು ಆಡುವುದು ಅನುಮಾನ ಎಂದು ಈ ಮೊದಲೇ ಆಯ್ಕೆ ಸಮಿತಿ ಪ್ರಕಟಿಸಿತ್ತು.

37 ವರ್ಷ ವಯಸ್ಸಿನ ರೋಹಿತ್ ಅನುಪಸ್ಥಿತಿಯಲ್ಲಿ ಉಪನಾಯಕ ಜಸ್‌ಪ್ರೀತ್ ಬೂಮ್ರಾ ಮೊದಲ ಟೆಸ್ಟ್‌ನಲ್ಲಿ ತಂಡದ ನಾಯಕತ್ವ ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.