ADVERTISEMENT

WTC ಫೈನಲ್ ಮೊದಲ ಇನಿಂಗ್ಸ್: 296 ರನ್‌ಗಳಿಗೆ ಸರ್ವಪತನ ಕಂಡ ಭಾರತಕ್ಕೆ 173 ರನ್ ಹಿನ್ನಡೆ

ಹಿನ್ನಡೆಯ ಅಂತರ ತಗ್ಗಿಸಿದ ರಹಾನೆ–ಠಾಕೂರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜೂನ್ 2023, 13:44 IST
Last Updated 9 ಜೂನ್ 2023, 13:44 IST
ಅಜಿಂಕ್ಯ ರಹಾನೆ ವಿಕೆಟ್ ಪಡೆದ ಸಂಭ್ರಮದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌
ಅಜಿಂಕ್ಯ ರಹಾನೆ ವಿಕೆಟ್ ಪಡೆದ ಸಂಭ್ರಮದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌   @ICC

ಲಂಡನ್: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ಕ್ರಿಕೆಟ್‌ ತಂಡವು 296 ರನ್‌ ಗಳಿಸಿ ಸರ್ವಪತನ ಕಂಡಿದ್ದು, 173 ರನ್‌ಗಳ ಹಿನ್ನಡೆ ಅನುಭವಿಸಿದೆ.

ಶತಕದ ಹೊಸ್ತಿಲಲ್ಲಿ ವಿಕೆಟ್‌ ಒಪ್ಪಿಸಿದ ಅಜಿಂಕ್ಯ ರಹಾನೆ ಹಾಗೂ ಕೆಳ ಕ್ರಮಾಂಕದಲ್ಲಿ ಅರ್ಧಶತಕ ಗಳಿಸಿದ ಶಾರ್ದೂಲ್‌ ಠಾಕೂರ್‌ ಭಾರತ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕದಿಂದ ಪಾರು ಮಾಡಿದರು. ಇವರಿಬ್ಬರೂ 7ನೇ ವಿಕೆಟ್‌ ಪಾಲುದಾರಿಕೆಯಲ್ಲಿ ಶತಕದ ಜೊತೆಯಾಟವಾಡಿದ್ದು, ರೋಹಿತ್ ಶರ್ಮಾ ಪಡೆಯ ಮೊತ್ತ 300 ರನ್‌ ಸನಿಹಕ್ಕೆ ತಲುಪಲು ಸಾಧ್ಯವಾಯಿತು.

ರಹಾನೆ–ಶಾರ್ದೂಲ್‌ ಆಸರೆ
ಇಲ್ಲಿನ 'ದ ಒವಲ್‌' ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಪಂದ್ಯದಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ 151 ರನ್‌ ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಇಂದು ತಾವಾಡಿದ ಮೊದಲ ಎಸೆತದಲ್ಲೇ ಶ್ರೀಕರ್‌ ಭರತ್‌ (5) ವಿಕೆಟ್‌ ಕೈ ಚೆಲ್ಲಿದರು.

ADVERTISEMENT

ಈ ವೇಳೆ ಜೊತೆಯಾದ ಅಜಿಂಕ್ಯ ರಹಾನೆ ಮತ್ತು ಶಾರ್ದೂಲ್‌ ಠಾಕೂರ್‌ 7ನೇ ವಿಕೆಟ್‌ ಪಾಲುದಾರಿಕೆಯಲ್ಲಿ 109 ರನ್‌ ಸೇರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು.

129 ಎಸೆತಗಳನ್ನು ಎದುರಿಸಿದ ರಹಾನೆ 89 ರನ್‌ ಕಲೆಹಾಕಿದರೆ, ಠಾಕೂರ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಲ್ಕನೇ ಅರ್ಧಶತಕ (51 ರನ್‌) ಗಳಿಸಿ ಔಟಾದರು. ಇದರೊಂದಿಗೆ ಆರ್‌. ಅಶ್ವಿನ್‌ ಬದಲು ತಮಗೆ, ತಂಡದಲ್ಲಿ ನಾಲ್ಕನೇ ವೇಗಿಯಾಗಿ ಸ್ಥಾನ ನೀಡಿದ್ದನ್ನು ಠಾಕೂರ್‌ ಸಮರ್ಥಿಸಿಕೊಂಡರು.

ರಹಾನೆ ಔಟಾದ ಬಳಿಕ ಭಾರತದ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಅಂತಿಮವಾಗಿ ರೋಹಿತ್‌ ಪಡೆಯ ಆಟ 296 ರನ್‌ಗಳಿಗೆ ಕೊನೆಗೊಂಡಿತು.

ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 469 ರನ್‌ ಕಲೆಹಾಕಿ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಎರಡನೇ ದಿನ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ.

ಇತ್ತೀಚೆಗೆ ಮುಕ್ತಾಯವಾದ ಐಪಿಎಲ್‌ ಟಿ20 ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ್ದ ಶುಭಮನ್‌ ಗಿಲ್‌ ಹಾಗೂ ನಾಯಕ ರೋಹಿತ್‌ ಶರ್ಮಾ ಟೀಂ ಇಂಡಿಯಾಗೆ ಉತ್ತಮ ಆರಂಭ ಒದಗಿಸಲಿಲ್ಲ. ಗಿಲ್‌ ಕೇವಲ 13 ರನ್‌ ಹಾಗೂ ರೋಹಿತ್‌ 15 ರನ್‌ ಗಳಿಸಿ ಔಟಾದರು.

ಭರವಸೆಯ ಬ್ಯಾಟರ್‌ಗಳೆನಿಸಿದ್ದ ಅನುಭವಿಗಳಾದ ಚೇತೇಶ್ವರ ಪೂಜಾರ ಮತ್ತು ವಿರಾಟ್‌ ಕೊಹ್ಲಿ ತಲಾ 14 ರನ್‌ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ಭಾರತ ಕೇವಲ 71 ರನ್‌ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ಅಜಿಂಕ್ಯ ರಹಾನೆ ಮತ್ತು ರವೀಂದ್ರ ಜಡೇಜ 5ನೇ ವಿಕೆಟ್‌ಗೆ 71 ರನ್ ಗಳಿಸಿ ನಿರಂತರ ವಿಕೆಟ್‌ ಉರುಳುವಿಕೆಗೆ ತಡೆಯೊಡ್ಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.