ಗ್ವಾಲಿಯರ್: ಮಿಸ್ಟರಿ ಸ್ಪಿನ್ನರ್ ಖ್ಯಾತಿಯ ವರುಣ್ ಚಕ್ರವರ್ತಿ ಮತ್ತು ಭರವಸೆ ಮೂಡಿಸಿದ ವೇಗದ ಬೌಲರ್ ಮಯಂಕ್ ಯಾದವ್ ಅವರ ಆಟದ ಬಲದಿಂದ ಭಾರತ ತಂಡವು ಬಾಂಗ್ಲಾ ಎದುರಿನ ಪಂದ್ಯದಲ್ಲಿ ಜಯಿಸಿತು.
ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು. ಹೊಸದಾಗಿ ನಿರ್ಮಾಣವಾಗಿರುವ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್‌ಗಳಿಂದ ಗೆಲುವು ಸಾಧಿಸಿತು.
ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬಾಂಗ್ಲಾ ತಂಡವು ನಾಯಕ ನಜ್ಮುಲ್ ಹುಸೇನ್ ಶಾಂತೊ (27; 25ಎ) ಮತ್ತು ಮೆಹದಿ ಹಸನ್ ಮಿರಾಜ್ (ಔಟಾಗದೆ 35; 32ಎ) ಅವರಿಬ್ಬರ ಪ್ರಯತ್ನದಿಂದಾಗಿ 19.5 ಓವರ್‌ಗಳಲ್ಲಿ 127 ರನ್ ಗಳಿಸಿತು. ಇದಕ್ಕುತ್ತರವಾಗಿ ಭಾರತ ತಂಡವು 11.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 132 ರನ್ ಗಳಿಸಿತು.
ಸ್ಪಿನ್ನರ್ ವರುಣ್ ಮತ್ತು ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರು ತಲಾ 3 ವಿಕೆಟ್ ಗಳಿಸಿದರು. ಈ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮಯಂಕ್ ಅವರು ಮೆಹಮುದುಲ್ಲಾ ವಿಕೆಟ್ ಗಳಿಸುವಲ್ಲಿ ಸಫಲರಾದರು. ಆದರೆ ಮಯಂಕ್ ಅವರು 4 ಓವರ್‌ಗಳಲ್ಲಿ 1 ಮೇಡನ್ ಹಾಕಿ ಗಮನ ಸೆಳೆದರು. ಒಟ್ಟು 21 ರನ್ ನೀಡಿದರು. ಅರ್ಷದೀಪ್ ಮಾತ್ರ 3.70ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟರು.
ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಉತ್ತಮ ಆರಂಭ ನೀಡಿದರು. ಅಭಿಷೇಕ್ 7 ಎಸೆತಗಳಲ್ಲಿ 16 ರನ್ ಗಳಿಸಿದರು. ಆದರೆ ಎರಡನೇ ಓವರ್‌ನಲ್ಲಿ ಅಭಿಷೇಕ್ ರನ್‌ಔಟ್ ಆದರು. ಸೂರ್ಯಕುಮಾರ್ ಯಾದವ್ (29; 14ಎ, 4X2, 6X3) ಅವರು 207.14ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಸೂರೆಮಾಡಿದರು .
ಆದರೆ ಬಾಂಗ್ಲಾ ಬೌಲರ್‌ಗಳು ಅವರಿಗೂ ತಡೆಯೊಡ್ಡಿದರು. ಕ್ರೀಸ್‌ಗೆ ಬಂದ ಹಾರ್ದಿಕ್ ಪಾಂಡ್ಯ (ಔಟಾಗದೆ 39; 16ಎ, 4X5, 6X2) ಅಬ್ಬರಿಸಿದರು. ತಂಡವನ್ನು ಗೆಲುವಿನ ದಡ ಸೇರಿಸಿದರು.
ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 19.5 ಓವರ್‌ಗಳಲ್ಲಿ 127 (ನಜ್ಮುಲ್ ಹುಸೇನ್ ಶಾಂತೊ 27, ಮೆಹದಿ ಹಸನ್ ಮಿರಾಜ್ 35, ಅರ್ಷದೀಪ್ ಸಿಂಗ್ 14ಕ್ಕೆ3, ವರುಣ್ ಚಕ್ರವರ್ತಿ 31ಕ್ಕೆ3, ಮಯಂಕ್ ಯಾದವ್ 21ಕ್ಕೆ1, ವಾಷಿಂಗ್ಟನ್ ಸುಂದರ್ 12ಕ್ಕೆ1)
ಭಾರತ: 11.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 132 (ಸಂಜು ಸ್ಯಾಮ್ಸನ್ 29, ಅಭಿಷೇಕ್ ಶರ್ಮಾ 16, ಸೂರ್ಯಕುಮಾರ್ ಯಾದವ್ 29, ಹಾರ್ದಿಕ್ ಪಾಂಡ್ಯ ಔಟಾಗದೆ 39, ಮುಸ್ತಫಿಜುರ್ ರೆಹಮಾನ್ 36ಕ್ಕೆ1) ಫಲಿತಾಂಶ: ಭಾರತ ತಂಡಕ್ಕೆ 7 ವಿಕೆಟ್‌ಗಳ ಜಯ. ಸರಣಿಯಲ್ಲಿ 1–0 ಮುನ್ನಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.