ಚೆನ್ನೈ: ಶುಭಮನ್ ಗಿಲ್ ತಾವು ಮೂರನೇ ಕ್ರಮಾಂಕಕ್ಕೆ ಅತ್ಯಂತ ಸೂಕ್ತ ಬ್ಯಾಟರ್ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಇನ್ನೊಂದೆಡೆ ರಿಷಭ್ ಪಂತ್ ದೀರ್ಘ ಸಮಯದ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳಿರುವುದನ್ನು ಘೋಷಿಸಿದರು.
ಇವರಿಬ್ಬರೂ ಗಳಿಸಿದ ಶತಕಗಳ ಬಲದಿಂದ ಭಾರತ ತಂಡವು ಬಾಂಗ್ಲಾ ತಂಡಕ್ಕೆ 515 ರನ್‌ಗಳ ಗೆಲುವಿನ ಗುರಿಯೊಡ್ಡಿತು. ಬೆನ್ನಟ್ಟಿರುವ ಪ್ರವಾಸಿ ಬಳಗವು ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ 4 ವಿಕೆಟ್‌ಗಳಿಗೆ 158 ರನ್ ಗಳಿಸಿದೆ. ನಾಯಕ ನಜ್ಮುಲ್ ಹುಸೇನ್ ಶಾಂತೊ (ಔಟಾಗದೆ 51) ಕ್ರೀಸ್‌ನಲ್ಲಿದ್ದಾರೆ. ಈ ಹಂತದಲ್ಲಿ ಬಾಂಗ್ಲಾದ ಬ್ಯಾಟರ್‌ಗಳು ಹೋರಾಟ ಮಾಡಿದರು. ಚುರುಕಾಗಿ ರನ್ ಗಳಿಸಲು ಗಮನ ನೀಡಿದರು. ಆದರೆ ಆತಿಥೇಯ ತಂಡದ ಬೌಲರ್‌ಗಳು ತಮ್ಮ ಅನುಭವ ಮತ್ತು ಶ್ರೇಷ್ಠ ಕೌಶಲವನ್ನು ಮೆರೆದರು.
ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿ ಮಿಂಚಿದ್ದ ಆರ್. ಅಶ್ವಿನ್ ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್‌ನಲ್ಲಿ ತಮ್ಮ ಕೈಚಳಕ ತೋರಿಸಿದರು. ಅವರು 3 ವಿಕೆಟ್ ಗಳಿಸಿದರು. ಇದರಿಂದಾಗಿ ನಾಲ್ಕನೇ ದಿನವಾದ ಭಾನುವಾರ ಭಾರತ ತಂಡವು ಗೆಲುವಿನ ಕೇಕೆ ಹಾಕುವ ಕನಸು ಕಾಣುತ್ತಿದೆ.
ಆತಿಥೇಯ ತಂಡವು ಮೊದಲ ಇನಿಂಗ್ಸ್‌ನಲ್ಲಿ 227 ರನ್‌ಗಳ ದೊಡ್ಡ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ 64 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 287 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಗಿಲ್ (ಅಜೇಯ 119, 176ಎ) ಮತ್ತು ಪಂತ್ (109; 128ಎ) ಅವರು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 167 ರನ್ ಸೇರಿಸಿದರು.
ಶುಕ್ರವಾರ ಎರಡನೇ ಇನಿಂಗ್ಸ್‌ನಲ್ಲಿ 81 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡವು ಕುಸಿಯದಂತೆ ಗಿಲ್ ಮತ್ತು ಪಂತ್ ನೋಡಿಕೊಂಡರು. ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಪಂತ್ ತಮ್ಮ ಎಂದಿನ ಶೈಲಿಯಲ್ಲಿಯೇ ಬ್ಯಾಟಿಂಗ್ ಮಾಡಿದರು. ಗಿಲ್ ಮಾತ್ರ ಸ್ವಲ್ಪ ತಾಳ್ಮೆಯಿಂದ ಇನಿಂಗ್ಸ್ ಕಟ್ಟಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಐದನೇ ಶತಕ ಪೂರೈಸಿದರು. ರಿಷಭ್ ಪಂತ್ ಆರನೇಯ ಶತಕ ತಮ್ಮದಾಗಿಸಿಕೊಂಡರು. ಅದರೊಂದಿಗೆ ಮಹೇಂದ್ರಸಿಂಗ್ ಧೋನಿಯವರ ದಾಖಲೆಯನ್ನು ಸರಿಗಟ್ಟಿದರು.
3ನೇ ದಿನದಾಟದಲ್ಲಿ ಊಟದ ವಿರಾಮದವರೆಗೂ ಈ ಜೊತೆಯಾಟವನ್ನು ಮುರಿಯಲು ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. 2022ರಲ್ಲಿ ಸಂಭವಿಸಿದ್ದ ಕಾರು ಆಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪಂತ್ ಕಳೆದ ಐಪಿಎಲ್ ಸಂದರ್ಭದಲ್ಲಿ ಕ್ರಿಕೆಟ್‌ಗೆ ಮರಳಿದ್ದರು. ಸುಮಾರು ಎರಡು ವರ್ಷಗಳ ನಂತರ ಈಗ ಟೆಸ್ಟ್ ಕ್ರಿಕೆಟ್ ಪಂದ್ಯವಾಡುತ್ತಿದ್ಧಾರೆ.
ಮೊದಲ ಇನಿಂಗ್ಸ್‌ನಲ್ಲಿ ಪಂತ್ ಉತ್ತಮವಾಗಿ ವಿಕೆಟ್ ಕೀಪಿಂಗ್ ಮಾಡಿದ್ದರು. ಫುಲ್ ಲೆಂಥ್ ಡೈವಿಂಗ್ ಮಾಡಿ ಚೆಂಡು ತಡೆದಿದ್ದರು. ಬ್ಯಾಟಿಂಗ್‌ನಲ್ಲಿಯೂ ತಮ್ಮ ಹಳೆಯ ಆಕ್ರಮಣಕಾರಿ ಶೈಲಿಯನ್ನು ಮತ್ತೊಮ್ಮೆ ಇಲ್ಲಿ ತೋರಿದರು. ಇದರಿಂದಾಗಿ ರನ್ ಗಳಿಕೆಗೆ ವೇಗ ಲಭಿಸಿತು.
ಸ್ಪಿನ್ನರ್‌ಗಳಾದ ಶಕೀಬ್ ಅಲ್ ಹಸನ್ ಮತ್ತು ಮೆಹದಿ ಹಸನ್ ಮಿರಾಜ್ ಅವರ ಎಸೆತಗಳನ್ನೂ ಪಂತ್ ನಿರ್ದಯವಾಗಿ ದಂಡಿಸಿದರು. ಇನಿಂಗ್ಸ್‌ನ 49ನೇ ಓವರ್‌ನಲ್ಲಿ ಪಂತ್ ಅವರ ಕ್ಯಾಚ್ ಕೈಚೆಲ್ಲಿದ ಫೀಲ್ಡರ್ ಶಾಂತೋ ಪರಿತಪಿಸುವಂತಾಯಿತು. ಇದಾಗಿ ಏಳು ಓವರ್‌ಗಳ ನಂತರ ಪಂತ್ ವಿಕೆಟ್ ಗಳಿಸಿದ ಮೆಹದಿ ಹಸನ್ ಮಿರಾಜ್ ಜೊತೆಯಾಟವನ್ನೂ ಮುರಿದರು.
ಕ್ರೀಸ್‌ಗೆ ಬಂದ ಕೆ.ಎಲ್. ರಾಹುಲ್ 19 ಎಸೆತಗಳಲ್ಲಿ 22 ರನ್ ಗಳಿಸಿದರು. ಅದರಲ್ಲಿ ನಾಲ್ಕು ಬೌಂಡರಿಗಳಿದ್ದವು. ಈ ಸಂದರ್ಭದಲ್ಲಿ ತಂಡವು ಡಿಕ್ಲೇರ್ ಮಾಡಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.