ADVERTISEMENT

IND v BAN T20:ನಿತೀಶ್-ರಿಂಕು ಅಬ್ಬರದ ಅರ್ಧಶತಕ; ಬಾಂಗ್ಲಾ ವಿರುದ್ಧ ಭಾರತಕ್ಕೆ ಜಯ

ಪಿಟಿಐ
Published 9 ಅಕ್ಟೋಬರ್ 2024, 15:20 IST
Last Updated 9 ಅಕ್ಟೋಬರ್ 2024, 15:20 IST
<div class="paragraphs"><p>ನಿತೀಶ್ ಕುಮಾರ್ ರೆಡ್ಡಿ ಮತ್ತು ರಿಂಕು ಸಿಂಗ್‌ </p></div>

ನಿತೀಶ್ ಕುಮಾರ್ ರೆಡ್ಡಿ ಮತ್ತು ರಿಂಕು ಸಿಂಗ್‌

   

ನವದೆಹಲಿ: ಭರವಸೆಯ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಮತ್ತು ರಿಂಕು ಸಿಂಗ್ ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಬಾಂಗ್ಲಾದೇಶ ಎದುರಿನ ಎರಡನೇ ಟಿ20 ಪಂದ್ಯವನ್ನು 86 ರನ್‌ಗಳಿಂದ ಜಯಿಸಿತು. ಇದರೊಂದಿಗೆ 2–0ಯಿಂದ ಸರಣಿಯನ್ನು ತನ್ನದಾಗಿಸಿಕೊಂಡಿತು.  

ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ನಿತೀಶ್ ರೆಡ್ಡಿ (74; 34ಎಸೆತ) ಅತ್ಯಂತ ಆಕರ್ಷಕ ಬ್ಯಾಟಿಂಗ್ ಮಾಡಿದರು. 7 ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಸಿಡಿಸಿದ ಅವರು ಪ್ರೇಕ್ಷಕರಿಗೆ ರಸದೌತಣ ನೀಡಿದರು. ಇನ್ನೊಂದೆಡೆ ರಿಂಕು (53; 29ಎ) ಅವರೂ ತಮ್ಮ ಎಂದಿನ ಬೀಸಾಟದಿಂದ ಗಮನ ಸೆಳೆದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಇವರಿಬ್ಬರೂ ಸೇರಿಸಿದ 108 ರನ್‌ಗಳಿಂದಾಗಿ ಭಾರತ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 221 ರನ್ ಗಳಿಸಿತು.  

ADVERTISEMENT

ಕಠಿಣ ಗುರಿಯನ್ನು ಬೆನ್ನಟ್ಟಿದ ಪ್ರವಾಸಿ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 135 ರನ್ ಗಳಿಸಿತು. ತಂಡದ ಮೆಹಮುದುಲ್ಲಾ (41; 39ಎ) ಒಬ್ಬರೇ ಒಂದಿಷ್ಟು ಹೋರಾಟ ಮಾಡಿದರು. ಅವರು 3 ಸಿಕ್ಸರ್‌ ಕೂಡ ಹೊಡೆದರು. ಆದರೆ ಉಳಿದ ಬ್ಯಾಟರ್‌ಗಳು ಭಾರತದ ಬೌಲರ್‌ಗಳ ಮುಂದೆ ಮಂಡಿಯೂರಿದರು.  ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲಿಯೂ ಮಿಂಚಿದ ನಿತೀಶ್ 2 ವಿಕೆಟ್ ಗಳಿಸಿದರು. ವರುಣ್ ಚಕ್ರವರ್ತಿ ಕೂಡ 2 ವಿಕೆಟ್ ಪಡೆದರು.

ನಿತೀಶ್–ರಿಂಕು ಜೊತೆಯಾಟ: ಬಾಂಗ್ಲಾ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಗ್ರ ಮೂವರು ಬ್ಯಾಟರ್‌ಗಳು ಪವರ್‌ಪ್ಲೇ ಮುಗಿಯುವ ಮುನ್ನವೇ ನಿರ್ಗಮಿಸಿದರು. ಉತ್ತಮ ಆರಂಭ ನೀಡಿದ  ಸಂಜು ಸ್ಯಾಮ್ಸನ್ (10 ರನ್), ಅಭಿಷೇಕ್ ಶರ್ಮಾ (15 ರನ್) ಅವರು ದೀರ್ಘ ಇನಿಂಗ್ಸ್‌ ಆಡಲಿಲ್ಲ. ಅವರಿಬ್ಬರು ಮತ್ತು ನಾಯಕ ಸೂರ್ಯಕುಮಾರ್ ಯಾದವ್ (8 ರನ್) ಅವರು ಪೆವಿಲಿಯನ್ ಸೇರಿದಾಗ ತಂಡದ ಮೊತ್ತ 41 ರನ್‌ಗಳಾಗಿದ್ದವು. ಈ ಹಂತದಲ್ಲಿ ಜೊತೆಗೂಡಿದ ಯುವ ಆಟಗಾರ ನಿತೀಶ್ ಮತ್ತು ರಿಂಕು ಇನಿಂಗ್ಸ್‌ ದಿಕ್ಕನ್ನೇ ಬದಲಿಸಿಬಿಟ್ಟರು.  ಬೌಲರ್‌ಗಳು ಬಸವಳಿದರು. 

ತಮ್ಮ ವೃತ್ತಿಜೀವನದ ಎರಡನೇ ಅಂತರರಾಷ್ಟ್ರೀಯ ಟಿ20 ಪಂದ್ಯವಾಡಿದ ನಿತೀಶ್ 27 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಗಳಿಸಿದರು. ಇನ್ನೊಂದು ಬದಿಯಲ್ಲಿದ್ದ ರಿಂಕು ಐದು ಬೌಂಡರಿ ಮತ್ತು 3 ಸಿಕ್ಸರ್‌ ಸಿಡಿಸಿದರು. 14ನೇ ಓವರ್‌ನಲ್ಲಿ ರೆಡ್ಡಿ ವಿಕೆಟ್ ಗಳಿಸಿದ ಮುಸ್ತಫಿಜುರ್ ಈ ಜೊತೆಯಾಟವನ್ನು ಮುರಿದರು. 17ನೇ ಓವರ್‌ನಲ್ಲಿ ರಿಂಕುಸಿಂಗ್ ಅವರಿಗೆ ತಸ್ಕಿನ್ ಅಹಮದ್ ಡಗ್‌ಔಟ್ ದಾರಿ ತೋರಿಸಿದರು. 

ಸರಣಿಯ ಮೊದಲ ಪಂದ್ಯದಲ್ಲಿ ಮಿಂಚಿದ್ದ ಹಾರ್ದಿಕ್ ಇಲ್ಲಿ ಮತ್ತೆ ಅಬ್ಬರಿಸಿದರು. 19 ಎಸೆತಗಳಲ್ಲಿ 32 ರನ್‌ ಸೂರೆ ಮಾಡಿದರು. 2 ಬೌಂಡರಿ, 2 ಸಿಕ್ಸರ್ ಹೊಡೆದರು. ಅವರಿಗೆ ರಿಯಾನ್ (15; 6ಎಸೆತ) ಕೂಡ ಉತ್ತಮ ಜೊತೆ ನೀಡಿದರು. ಎರಡು ಭರ್ಜರಿ ಸಿಕ್ಸರ್ ಕೂಡ ಎತ್ತಿದರು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 221 (ನಿತೀಶ್ ರೆಡ್ಡಿ 74, ರಿಂಕು ಸಿಂಗ್ 53, ಹಾರ್ದಿಕ್ ಪಾಂಡ್ಯ 32, ರಿಯಾನ್ ಪರಾಗ್ 15, ಅಭಿಷೇಕ್ ಶರ್ಮಾ 15, ತಸ್ಕಿನ್ ಅಹಮದ್ 16ಕ್ಕೆ2, ತಂಜಿಮ್ ಹಸನ್ ಸಕೀಬ್ 50ಕ್ಕೆ2, ಮುಸ್ತಫಿಜುರ್ 36ಕ್ಕೆ2, ರಿಷಾದ್  ಹುಸೇನ್ 55ಕ್ಕೆ3)

ಬಾಂಗ್ಲಾದೇಶ: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 135 (ಮಹಮುದುಲ್ಲಾ 41, ಪರ್ವೇಜ್ ಹುಸೇನ್ ಇಮಾನ್ 16, ಮೆಹದಿ ಹಸನ್ ಮಿರಜ್ 16, ನಿತೀಶ್ ರೆಡ್ಡಿ 23ಕ್ಕೆ2, ವರುಣ್ ಚಕ್ರವರ್ತಿ 19ಕ್ಕೆ2). ಫಲಿತಾಂಶ: ಭಾರತಕ್ಕೆ 86 ರನ್‌ಗಳ ಜಯ. ಪಂದ್ಯದ ಆಟಗಾರ: ನಿತೀಶ್‌ ಕುಮಾರ್‌ ರೆಡ್ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.