ಕಾನ್ಪುರ: ಹವಾಮಾನ ಇಲಾಖೆಯ ಮುನ್ಸೂಚನೆ ನಿಜವಾಯಿತು. ಶುಕ್ರವಾರ ಮಳೆ ಸುರಿಯಿತು. ಇದರಿಂದಾಗಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಪೂರ್ಣವಾಯಿತು.
ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆಕಾಶದೀಪ್ (34ಕ್ಕೆ2) ಅವರು ಪರಿಣಾಮಕಾರಿ ದಾಳಿ ನಡೆಸಿದರು. ಮಧ್ಯಾಹ್ನ 2.08ಕ್ಕೆ ಮಂದ ಬೆಳಕಿನಿಂದಾಗಿ ಆಟ ನಿಂತಾಗ ಬಾಂಗ್ಲಾ ತಂಡವು 35 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 107 ರನ್ ಗಳಿಸಿತು. ಈ ಸಂದರ್ಭದಲ್ಲಿ ಸುಮಾರು ಅರ್ಧಗಂಟೆ ಮಳೆ ಸುರಿಯಿತು. ನಂತರ ಉಭಯ ತಂಡಗಳು ಮೈದಾನಕ್ಕೆ ಮರಳಲಿಲ್ಲ. ದಿನದಾಟವನ್ನು ಮುಕ್ತಾಯಗೊಳಿಸಲಾಯಿತು.
ಮೊಮಿನುಲ್ ಹಕ್ (ಬ್ಯಾಟಿಂಗ್ 40; 81ಎ) ಮತ್ತು ಮುಷ್ಫಿಕುರ್ ರಹೀಂ (ಬ್ಯಾಟಿಂಗ್ 6) ಅವರು ಕ್ರೀಸ್‌ನಲ್ಲಿದ್ದಾರೆ. ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ.
ಸಂಜೆ 4 ಗಂಟೆ ಒಂದಿಷ್ಟು ಹೊತ್ತು ಮತ್ತು 5 ಗಂಟೆಯ ನಂತರ ಮತ್ತೊಂದಿಷ್ಟು ಹೊತ್ತು ಮಳೆ ಸುರಿಯಿತು. ಮೈದಾನದಲ್ಲಿ ನೀರು ಇಂಗಲು ಮತ್ತು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇರಲಿಲ್ಲ. ಭಾರತದ ಅತ್ಯಂತ ಹಳೆಯ ಟೆಸ್ಟ್ ಕ್ರಿಕೆಟ್ ತಾಣಗಳಲ್ಲಿ ಒಂದಾಗಿರುವ ಈ ಕ್ರೀಡಾಂಗಣದಲ್ಲಿ ಒಳಚರಂಡಿ ಸೌಲಭ್ಯದ ಕೊರತೆಯು ಕಣ್ಣಿಗೆ ರಾಚಿತು. ಇಂತಹ ಪರಿಸ್ಥಿತಿಯನ್ನು ನಿಭಾಯಿಸುವ ಸೂಕ್ತ ತರಬೇತಿ ಇಲ್ಲದ ಸಿಬ್ಬಂದಿಯು ಪರದಾಡುತ್ತಿದ್ದದ್ದೂ ಕಂಡಿತು.
ದೊಡ್ಡ ಕ್ರೀಡಾಂಗಣದಲ್ಲಿ ಶೇಖರವಾದ ನೀರನ್ನು ಹೊರಹಾಕಲು ಕೇವಲ ಎರಡು ಸೂಪರ್‌ಸಾಪರ್‌ಗಳಿದ್ದವು. ಪಿಚ್‌ಗಳಿಗೆ ಹೊದಿಕೆಗಳನ್ನು ಎಳೆದು ತಂದು ಹಾಕುವ ಕಾರ್ಯವನ್ನೂ ಸಿಬ್ಬಂದಿ ವೇಗವಾಗಿ ನಿರ್ವವಹಿಸಲಿಲ್ಲ. ಔಟ್‌ಫೀಲ್ಡ್ ಕೂಡ ಪೂರ್ಣವಾಗಿ ಕವರ್ ಆಗಿರಲಿಲ್ಲ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಲ್ಲಿಗೆ ಟೆಸ್ಟ್ ಪಂದ್ಯದ ಆಯೋಜನೆಗೆ ಅನುಮತಿ ನೀಡುವ ಮುನ್ನ ಇಲ್ಲಿರುವ ಕೊರತೆಗಳ ಕುರಿತು ಪರಿಶೀಲನೆ ನಡೆಸಿದ್ದರೆ ಸೂಕ್ತ ವಾಗಿ ರುತ್ತಿತ್ತು.
ಉತ್ತರ ಪ್ರದೇಶ ರಾಜ್ಯ ಸರ್ಕಾರದ ಕ್ರೀಡಾ ನಿರ್ದೇಶ ನಾಲಯಕ್ಕೆ ಸೇರಿದ ಈ ಮೈದಾನವನ್ನು ಉತ್ತರಪ್ರದೇಶ ಕ್ರಿಕೆಟ್ ಸಂಸ್ಥೆ (ಯುಪಿಸಿಎ) ಲೀಸ್ ಪಡೆದುಕೊಂಡಿದೆ. ಇಲಾಖೆ ಮತ್ತು ಯುಪಿಸಿಎ ನಡುವೆ ಒಪ್ಪಂದವಾಗಿದೆ. ಆದರೆ ದೀರ್ಘ ಸಮಯದಿಂದ ಇಲಾಖೆ ಮತ್ತು ಸಂಸ್ಥೆಯ ನಡುವೆ ಇರುವ ಭಿನ್ನಾಭಿಪ್ರಾಯಗಳಿಂದಾಗಿ ಅಭಿವೃದ್ಧಿ ಕುಂಠಿತಗೊಂಡಿದೆ.
ಒಳಚರಂಡಿ ವ್ಯವಸ್ಥೆ ಅಷ್ಟೇ ಅಲ್ಲ, ಕ್ರೀಡಾಂಗಣದ ಸಿ ಬ್ಲಾಕ್ ಜನಬಳಕೆಗೆ ಸೂಕ್ತವಾಗಿಲ್ಲ ಮತ್ತು ಅಪಾಯಕಾರಿಯೂ ಆಗಿದೆ ಎಂದು ಹೇಳಲಾಗಿದೆ. ಈ ವರದಿಯನ್ನು ಕ್ರೀಡಾಂಗಣದ ನಿರ್ದೇಶಕ ಸಂಜಯ್ ಕಪೂರ್ ಅವರು ಅಲ್ಲಗಳೆದಿದ್ದಾರೆ. ಆದರೆ ಇಲ್ಲಿ ಸ್ವಚ್ಛತೆಯ ಕೊರತೆಯೂ ಇದೆ. ಪಾನ್ ಮಸಾಲಾ ಜಗಿದು ಗೋಡೆಗಳ ಮೇಲೆ ಉಗಿದ ಕಲೆಗಳು ಇವೆ. ಗೋಡೆಗುಂಟ, ರಸ್ತೆಬದಿಯಲ್ಲಿರುವ ಮೂತ್ರ ವಿಸರ್ಜನೆಯ ಕಲೆಗಳನ್ನು ಮರೆಮಾಚಲು ಕ್ರಿಮಿನಾಶಕ ಪುಡಿ ಎರಚಲಾಗಿದೆ. ಅಲ್ಲದೇ ಈ ಊರಿನಲ್ಲಿ ಪಂಚತಾರಾ ಹೋಟೆಲ್‌ಗಳು ಇಲ್ಲ. ತ್ರೀಸ್ಟಾರ್ ಹೋಟೆಲ್‌ಗಳಿವೆ. ಇದರಿಂದಾಗಿ ಇತ್ತೀಚೆಗೆ ಭಾರತ ತಂಡದ ಕೆಲವು ಹಿರಿಯ ಆಟಗಾರರೇ ಇಲ್ಲಿ ಪಂದ್ಯ ಆಯೋಜಿಸಿರುವುದರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.
ಆದರೆ ಇಲ್ಲಿ ಮೊದಲಿನಿಂದಲೂ ಮಹತ್ವದ ಟೆಸ್ಟ್ ಪಂದ್ಯಗಳು ನಡೆದಿವೆ. ಈ ಕ್ರೀಡಾಂಗಣದಲ್ಲಿ 2016ರಲ್ಲಿ ಭಾರತದ 500ನೇ ಟೆಸ್ಟ್ ಪಂದ್ಯ ನಡೆದಿತ್ತು. ಆಗ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು.
ಉತ್ತರಪ್ರದೇಶದ ರಾಜಧಾನಿ ಲಖನೌನಲ್ಲಿ ಸುಸಜ್ಜಿತವಾದ ಏಕನಾ ಕ್ರೀಡಾಂಗಣವಿದೆ. ಕಾನ್ಪುರದಿಂದ 100 ಕಿಲೋಮೀಟರ್ ದೂರದಲ್ಲಿರುವ ಈ ಮೈದಾನದಲ್ಲಿ ಅ.1ರಿಂದ 5ರವರೆಗೆ ಇರಾನಿ ಟ್ರೋಫಿ ಪಂದ್ಯ ನಡೆಯಲಿದೆ. ಹೋದ ವರ್ಷ ಇಲ್ಲಿಯೇ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯಗಳು ನಡೆದಿದ್ದವು.
ಅದರಿಂದಾಗಿ ಬಿಸಿಸಿಐನ ರೊಟೇಷನ್ ನಿಯಮದ ಪ್ರಕಾರ ಒಂದೇ ಕ್ರಿಕೆಟ್ ಸಂಸ್ಥೆಯ ಎರಡನೇ ಕ್ರೀಡಾಂಗಣವಾದ ಕಾನ್ಪುರದಲ್ಲಿ ಈ ಬಾರಿ ಅಂತರರಾಷ್ಟ್ರೀಯ ಪಂದ್ಯ ಆಯೋಜನೆಗೆ ಅವಕಾಶ ನೀಡಲಾಗಿದೆ.
ಸ್ಕೋರ್ ಕಾರ್ಡ್
ಮೊದಲ ಇನಿಂಗ್ಸ್: ಬಾಂಗ್ಲಾದೇಶ 3ಕ್ಕೆ 107 (35 ಓವರ್‌ಗಳಲ್ಲಿ)
ಹಸನ್ ಸಿ ಜೈಸ್ವಾಲ್ ಬಿ ಆಕಾಶ್ ದೀಪ್ 0 (24ಎ), ಶಾದ್ಮನ್ ಎಲ್‌ಬಿಡಬ್ಲ್ಯು ಬಿ ಆಕಾಶ್ ದೀಪ್ 24 (36, 4x4)
ಮೊಮಿನುಲ್ ಹಕ್ ಔಟಾಗದೇ 40 (81ಎ, 4x7), ನಜ್ಮುಲ್ ಸಿ ಎಲ್‌ಬಿಡಬ್ಲ್ಯು ಬಿ ಅಶ್ವಿನ್ (31, 57ಎ, 4x6), ಮುಷ್ಫಿಕುರ್ ಔಟಾಗದೇ 6 (13ಎ, 4x1)
ಇತರೆ: 6 (ಬೈ 4, ಲೆಗ್‌ಬೈ 1, ನೋಬಾಲ್ 1)
ವಿಕೆಟ್ ಪತನ: 1- 26 (ಝಾಕಿರ್ ಹಸನ್, 8.3), 2-29 (ಶಾದ್ಮನ್ ಇಸ್ಲಾಂ, 12.1), 3-80 (ನಜ್ಮುಲ್ ಹಸನ್ ಶಾಂತೊ, 28.5).
ಬೌಲಿಂಗ್: ಜಸ್‌ಪ್ರೀತ್ ಬೂಮ್ರಾ 9–4–19–0, ಮೊಹಮ್ಮದ್ ಸಿರಾಜ್ 7–0–27–0, ರವಿಚಂದ್ರನ್ ಅಶ್ವಿನ್ 9–0–22–1, ಆಕಾಶ್ ದೀಪ್ 10–4–34–2.
ದಾಖಲೆ ಮೇಲೆ ಭಾರತ ಕಣ್ಣು...
ದೇಶದಲ್ಲಿ ಹದಿನೆಂಟನೇ ಟೆಸ್ಟ್ ಸರಣಿಯನ್ನು ಜಯಿಸಿ ದಾಖಲೆ ಬರೆಯುವತ್ತ ಆತಿಥೇಯ ಭಾರತ ತಂಡ ಕಣ್ಣಿಟ್ಟಿದೆ.
ಚೆನ್ನೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ 280 ರನ್ ಅಂತರದ ಜಯ ಸಾಧಿಸಿತ್ತು. ರವಿಚಂದ್ರನ್ ಅಶ್ವಿನ್ ಶತಕ ಹಾಗೂ ಆರು ವಿಕೆಟ್ ಸಾಧನೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.