ಕಾನ್ಪುರ: ಭಾರತ ತಂಡದ ಆಟಗಾರರು ಸೋಮವಾರ ಗ್ರೀನ್ ಪಾರ್ಕ್‌ನಲ್ಲಿ ಕಂಡಿದ್ದ ಕನಸು ಮಂಗಳವಾರ ನನಸಾಯಿತು. ಇಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗವು 7 ವಿಕೆಟ್‌ಗಳಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿತು.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಅಪರೂಪದ ಜಯ ಇದಾಗಿದೆ. ಟೆಸ್ಟ್ ಪಂದ್ಯದ ಮೊದಲ ದಿನ ಬಾಂಗ್ಲಾ ತಂಡವು 35 ಓವರ್‌ಗಳನ್ನು ಆಡಿದ್ದಾಗ ಮಳೆ ಸುರಿದಿತ್ತು. ಇದರಿಂದಾಗಿ ಆ ದಿನದಾಟ ಮೊಟಕುಗೊಂಡಿತ್ತು. ಅಲ್ಲದೇ ಎರಡು ಮತ್ತು ಮೂರನೇ ದಿನದಾಟಗಳೂ ರದ್ದಾಗಿದ್ದವು. ಇದರಿಂದಾಗಿ ಕೊನೆಯ ಎರಡು ದಿನಗಳಲ್ಲಿ ಫಲಿತಾಂಶ ಹೊರಹೊಮ್ಮುವ ನಿರೀಕ್ಷೆ ಇರಲಿಲ್ಲ. ಆದರೆ ಇದನ್ನು ಸಾಧ್ಯವಾಗಿಸಿದ ಶ್ರೇಯ ಭಾರತ ತಂಡಕ್ಕೆ ಸಲ್ಲಬೇಕು. ಪಾಕಿಸ್ತಾನವನ್ನು ಅದರ ನೆಲದಲ್ಲಿಯೇ ಮಣಿಸಿ ಅಪಾರ ಆತ್ಮವಿಶ್ವಾಸದಿಂದ ಇಲ್ಲಿಗೆ ಬಂದಿದ್ದ ಬಾಂಗ್ಲಾ ತಂಡವು ನಿರಾಶೆ ಅನುಭವಿಸಿತು.
ಆದರೆ ನಾಲ್ಕನೇ ದಿನದಾಟದಲ್ಲಿ ಭಾರತ ತನ್ನ ಪರಾಕ್ರಮ ಮೆರೆದಿತ್ತು. ಬಾಂಗ್ಲಾ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 233 ರನ್‌ಗಳಿಗೆ ಭಾರತ ನಿಯಂತ್ರಿಸಿತ್ತು. ನಂತರ ಬ್ಯಾಟರ್‌ಗಳು 8.22ರ ಸರಾಸರಿಯಲ್ಲಿ ರನ್ ಸೂರೆ ಮಾಡಿದ್ದರು. 52 ರನ್‌ಗಳ ಮುನ್ನಡೆ ಪಡೆದು ಡಿಕ್ಲೇರ್ ಮಾಡಿಕೊಂಡಿತ್ತು. ಎರಡನೇ ಇನಿಂಗ್ಸ್ ಆರಂಭಿಸಿದ್ದ ಬಾಂಗ್ಲಾ, ದಿನದಾಟದ ಕೊನೆಗೆ 26 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಕೊನೆಯ ದಿನದಾಟದಲ್ಲಿ ಉಳಿದ ವಿಕೆಟ್‌ಗಳನ್ನು ಗಳಿಸಿದ ಭಾರತ ತಂಡವು ಬಾಂಗ್ಲಾ ಬಳಗವನ್ನು 146 ರನ್‌ಗಳಿಗೆ ನಿಯಂತ್ರಿಸಿತು. ಜಸ್‌ಪ್ರೀತ್ ಬೂಮ್ರಾ (17ಕ್ಕೆ3), ಆರ್. ಅಶ್ವಿನ್ (50ಕ್ಕೆ3) ಮತ್ತು ರವೀಂದ್ರ ಜಡೇಜ (34ಕ್ಕೆ3) ದಾಳಿಯ ಮುಂದೆ ಬಾಂಗ್ಲಾದ ಹೋರಾಟ ನಡೆಯಲಿಲ್ಲ.
ಇಡೀ ದಿನ ಬ್ಯಾಟಿಂಗ್ ಮಾಡಿ ಡ್ರಾ ಸಾಧಿಸುವ ಏಕೈಕ ಅವಕಾಶ ಬಾಂಗ್ಲಾಗೆ ಇತ್ತು. ಈ ಹಾದಿಯಲ್ಲಿ ತಂಡದ ಶಾದ್ಮನ್ ಇಸ್ಲಾಂ (50; 101ಎ) ಮತ್ತು ಮುಷ್ಫಿಕುರ್ ರಹೀಮ್ (37; 63ಎ) ಅವರಿಬ್ಬರೂ ಪ್ರಯತ್ನಿಸಿದರು.
ಆದರೆ ಊಟದ ವಿರಾಮದ ವೇಳೆಗೆ ಎಲ್ಲ ವಿಕೆಟ್‌ಗಳೂ ಪತನವಾದವು. ನಂತರ 95 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡವು 17.1 ಓವರ್‌ಗಳಲ್ಲಿ ಮುಟ್ಟಿತು. ಎರಡನೇ ಇನಿಂಗ್ಸ್‌ನಲ್ಲಿಯೂ ಯಶಸ್ವಿ ಜೈಸ್ವಾಲ್ ಅರ್ಧಶತಕ ಗಳಿಸಿದರು. ವಿರಾಟ್ ಕೊಹ್ಲಿ 29 ರನ್ ಗಳಿಸಿ ಪ್ರೇಕ್ಷಕರಿಗೆ ಮನರಂಜನೆ ನೀಡಿದರು. ಇದರೊಂದಿಗೆ ಆತಿಥೇಯ ತಂಡವು 2–0ಯಿಂದ ಸರಣಿಯನ್ನು ತನ್ನದಾಗಿಸಿಕೊಂಡಿತು. ಭಾರತ ತಂಡಕ್ಕೆ ತವರಿನಲ್ಲಿ ಇದು 18ನೇ ಸರಣಿ ಗೆಲುವಾಗಿದೆ.
ಸಂಕ್ಷಿಪ್ತ ಸ್ಕೋರ್ ಪಟ್ಟಿ:
ಬಾಂಗ್ಲಾದೇಶ ಮೊದಲ ಇನಿಂಗ್ಸ್ 233ಕ್ಕೆ ಆಲೌಟ್ (ಮೊಮಿನುಲ್ 107*, ಬೂಮ್ರಾ 50/3)
ಭಾರತ ಮೊದಲ ಇನಿಂಗ್ಸ್ 285/9 ಡಿಕ್ಲೇರ್ (ಜೈಸ್ವಾಲ್ 72, ರಾಹುಲ್ 68, ಮೆಹಿದಿ ಹಸನ್ 41/4, ಶಕೀಬ್ 78/4)
ಬಾಂಗ್ಲಾದೇಶ ದ್ವಿತೀಯ ಇನಿಂಗ್ಸ್ 146ಕ್ಕೆ ಆಲೌಟ್ (ಶದ್ಮನ್ 50, ಬೂಮ್ರಾ 17/3)
ಭಾರತ ದ್ವಿತೀಯ ಇನಿಂಗ್ಸ್ 98/3 (ಜೈಸ್ವಾಲ್ 51, ಮೆಹಿದಿ ಹಸನ್ 44/2)
ಫಲಿತಾಂಶ: ಭಾರತಕ್ಕೆ 7 ವಿಕೆಟ್ ಜಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.