ಪುಣೆ: ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ವಿಶ್ವಕಪ್ ಟೂರ್ನಿಯಲ್ಲಿ ‘ಹ್ಯಾಟ್ರಿಕ್ ಜಯ’ದ ಸಾಧನೆ ಮಾಡಿದೆ. ಅದೇ ಲಯವನ್ನು ಮುಂದುವರಿಸುವತ್ತ ಚಿತ್ತ ನೆಟ್ಟಿದೆ.
ಗುರುವಾರ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂ.ಸಿ.ಎ) ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶವನ್ನು ಎದುರಿಸಲಿದೆ. ಮೇಲ್ನೋಟಕ್ಕೆ ಭಾರತ ತಂಡವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. ಕಳೆದ ಮೂರು ಪಂದ್ಯಗಳಲ್ಲಿ ಆಸ್ಟ್ರೇಲಿಯಾ, ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನ ತಂಡಗಳನ್ನು ಮಣಿಸಿರುವ ಭಾರತವು ಭರ್ತಿ ಆತ್ಮವಿಶ್ವಾಸದಲ್ಲಿದೆ.
ಆದರೆ ಟೂರ್ನಿಯಲ್ಲಿ ಈಗಾಗಲೇ ಎರಡು ಅಚ್ಚರಿಯ ಫಲಿತಾಂಶಗಳು ಹೊರಬಿದ್ದಿವೆ. ಸಾಧಾರಣ ತಂಡಗಳಾದ ಅಫ್ಗಾನಿಸ್ತಾನವು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಮತ್ತು ನೆದರ್ಲೆಂಡ್ಸ್ ತಂಡವು ಬಲಿಷ್ಠ ದಕ್ಷಿಣ ಆಫ್ರಿಕಾಕ್ಕೆ ಆಘಾತ ನೀಡಿವೆ. ಆದ್ದರಿಂದ ಈಗ ಯಾವ ತಂಡವನ್ನು ಹಗುರವಾಗಿ ಪರಿಗಣಿಸುವುದು ಕಷ್ಟವಾಗಿದೆ.
ಅಫ್ಗನ್ ಮತ್ತು ನೆದರ್ಲೆಂಡ್ಸ್ ತಂಡಗಳಿಗೆ ಹೋಲಿಕೆ ಮಾಡಿದರೆ ಬಾಂಗ್ಲಾದೇಶವು ಹೆಚ್ಚು ಅನುಭವಿ ಮತ್ತು ಬಲಶಾಲಿಯೇ ಆಗಿದೆ. ಆದ್ದರಿಂದ ಭಾರತ ತಂಡಕ್ಕೆ ಕಠಿಣ ಪೈಪೋಟಿಯೊಡ್ಡುವ ಸಾಮರ್ಥ್ಯವೂ ಅದಕ್ಕಿದೆ. ತಮ್ಮ ವೃತ್ತಿಜೀವನದ ಕೊನೆಯ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ ಶಕೀಬ್ ಅಲ್ ಹಸನ್ ನಾಯಕತ್ವದ ತಂಡವು ಕಳೆದ ಮೂರು ಪಂದ್ಯಗಳಲ್ಲಿ ಅಫ್ಗಾನಿಸ್ತಾನ ಎದುರು ಜಯಿಸಿತ್ತು. ಆದರೆ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಎದುರು ಶರಣಾಗಿತ್ತು. ನಾಲ್ಕರ ಘಟ್ಟಕ್ಕೆ ಹೋಗುವ ಕನಸು ಉಳಿಯಬೇಕಾದರೆ ಬಾಂಗ್ಲಾ ತಂಡವು ತನ್ನ ಪಾಲಿನಲ್ಲಿ ಉಳಿದಿರುವ ಆರು ಪಂದ್ಯಗಳಲ್ಲಿ ಕನಿಷ್ಠ ನಾಲ್ಕರಲ್ಲಿ ಜಯಿಸಲೇಬೇಕು.
ಅದಕ್ಕಾಗಿ ಭಾರತ ಎದುರಿನ ಪಂದ್ಯದಲ್ಲಿ ಗೆಲುವಿನ ಅಭಿಯಾನ ಆರಂಭಿಸುವ ಸವಾಲು ಬಾಂಗ್ಲಾಗೆ ಇದೆ. ಆದರೆ, ಭಾರತ ತಂಡವು ಈಗ ಎಲ್ಲ ವಿಭಾಗಗಳಲ್ಲಿಯೂ ಉತ್ತಮ ಲಯದಲ್ಲಿದೆ. ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಅವರಂತೂ ಕಳೆದ ಎರಡೂ ಪಂದ್ಯಗಳಲ್ಲಿ ತಮ್ಮ ‘ಹಿಟ್‌ಮ್ಯಾನ್’ ಖ್ಯಾತಿಗೆ ತಕ್ಕಂತೆ ಆಡಿದ್ದಾರೆ. ಡೆಂಗಿ ಜ್ವರದಿಂದ ಚೇತರಿಸಿಕೊಂಡು ಬಂದಿರುವ ಶುಭಮನ್ ಗಿಲ್ ಕೂಡ ಉತ್ತಮ ಲಯಕ್ಕೆ ಮರಳುವ ಸೂಚನೆ ತೋರಿದ್ದಾರೆ. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್. ರಾಹುಲ್ ಅವರು ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ.
ಈ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವುದು ಬಾಂಗ್ಲಾದ ವೇಗಿ ಮುಸ್ತಫಿಜುರ್ ರೆಹಮಾನ್, ಶೊರಿಫುಲ್ ಇಸ್ಲಾಂ ಮತ್ತು ಸ್ಪಿನ್ನರ್ ಮೆಹದಿ ಹಸನ್ ಮಿರಾಜ್ ಅವರ ಮುಂದಿರುವ ಪ್ರಮುಖ ಸವಾಲು. ಆದರೆ ಇದಕ್ಕಿಂತಲೂ ಕಠಿಣ ಸವಾಲು ಬಾಂಗ್ಲಾ ಬ್ಯಾಟರ್‌ಗಳ ಮುಂದಿದೆ. ಭಾರತದ ಸ್ಪಿನ್ ಜೋಡಿ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜ, ವೇಗದ ಜೋಡಿ ಜಸ್‌ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಎದುರಿಸಿ ನಿಲ್ಲುವುದು ಸುಲಭವಲ್ಲ. ಹಾರ್ದಿಕ್ ಪಾಂಡ್ಯ ಕೂಡ ವಿಕೆಟ್ ಉರುಳಿಸುವಲ್ಲಿ ಮುಂಚೂಣಿಯಲ್ಲಿದ್ದು ದೊಡ್ಡ ಜೊತೆಯಾಟಗಳನ್ನು ಮುರಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಪಂದ್ಯ; 40
ಭಾರತ ಜಯ; 31
ಬಾಂಗ್ಲಾ ಗೆಲುವು; 8
ಫಲಿತಾಂಶವಿಲ್ಲ;1
ತಂಡದ ಸಂಯೋಜನೆಯನ್ನು ಬದಲಾವಣೆ ಮಾಡುವ ಯಾವುದೇ ಮಾತುಕತೆಯೂ ನಡೆದಿಲ್ಲ. ಕಳೆದ ಮೂರು ಪಂದ್ಯಗಳ ಜಯದಲ್ಲಿ ಆಡಿರುವ ತಂಡವನ್ನೇ ಮುಂದುವರಿಸಲಾಗುವುದು. ಜಯದ ಲಯವನ್ನು ಮುಂದುವರಿಸುವುದೇ ನಮ್ಮ ಗುರಿ.– ಪಾರಸ್ ಮಾಂಬ್ರೆ ಭಾರತ ತಂಡದ ಸಹಾಯಕ ಕೋಚ್
ಭಾರತ: ರೋಹಿತ್ ಶರ್ಮಾ (ನಾಯಕ) ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್) ಶುಭಮನ್ ಗಿಲ್ ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್ ಹಾರ್ದಿಕ್ ಪಾಂಡ್ಯ ರವೀಂದ್ರ ಜಡೇಜ ಶಾರ್ದೂಲ್ ಠಾಕೂರ್ ಕುಲದೀಪ್ ಯಾದವ್ ಜಸ್‌ಪ್ರೀತ್ ಬೂಮ್ರಾ ಮೊಹಮ್ಮದ್ ಸಿರಾಜ್ ಇಶಾನ್ ಕಿಶನ್ ಸೂರ್ಯಕುಮಾರ್ ಯಾದವ್ ಮೊಹಮ್ಮದ್ ಶಮಿ ಆರ್. ಅಶ್ವಿನ್.
ಬಾಂಗ್ಲಾದೇಶ: ಶಕೀಬ್ ಅಲ್ ಹಸನ್ (ನಾಯಕ) ಮುಷ್ಫಿಕುರ್ ರಹೀಮ್ (ವಿಕೆಟ್‌ಕೀಪರ್) ಲಿಟನ್ ದಾಸ್ ತಂಜೀದ್ ಹಸನ್ ಮೆಹದಿ ಹಸನ್ ಮಿರಾಜ್ ನಜ್ಮುಲ್ ಹೊಸೇನ್ ಶಾಂತೊ ತೌಹಿದ್ ಹೃದಯ್ ಮೆಹಮುದುಲ್ಲಾ ತಸ್ಕಿನ್ ಅಹಮದ್ ಮುಸ್ತಫಿಜುರ್ ರೆಹಮಾನ್ ಶೊರಿಫುಲ್ ಇಸ್ಲಾಂ ತಂಜೀಂ ಹಸನ್ ಶಕೀಬ್ ಹಸನ್ ಮೆಹಮೂದ್ ಮೆಹೆದಿ ಹಸನ್ ನಸುಮ್ ಅಹಮದ್. ಪಂದ್ಯ ಆರಂಭ: ಮಧ್ಯಾಹ್ನ 2
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.