ಹ್ಯಾಮಿಲ್ಟನ್ (ನ್ಯೂಜಿಲೆಂಡ್): ಬಾಂಗ್ಲಾದೇಶ ತಂಡದ ಎದುರು ನಡೆಯುತ್ತಿರುವ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಿಥಾಲಿ ರಾಜ್ ನೇತೃತ್ವದ ಭಾರತ ತಂಡವು 229 ರನ್ ಕಲೆ ಹಾಕಿದೆ. ಯಷ್ಟಿಕಾ ಭಾಟಿಯಾ ಅವರ ಅರ್ಧ ಶತಕದ ನೆರವಿನಿಂದ ಭಾರತ ತಂಡವು ನಿಗದಿತ 50 ಓವರ್‌ಗಳಲ್ಲಿ 229 ರನ್ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ತಂಡಕ್ಕೆ ಸ್ಮೃತಿ ಮಂದಾನ (30) ಮತ್ತು ಶಫಾಲಿ ವರ್ಮಾ (42) ಜೋಡಿ ಉತ್ತಮ ಆರಂಭ ನೀಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ 74 ರನ್ ದಾಖಲಾಯಿತು. ಆದರೆ, 14ನೇ ಓವರ್‌ನಿಂದ ಹಿಡಿತ ಸಾಧಿಸಿದ ಬಾಂಗ್ಲಾ ಬೌಲರ್‌ಗಳು ಎರಡು ಓವರ್ ಅಂತರದಲ್ಲಿ ಮೂರು ವಿಕೆಟ್ ಕಬಳಿಸಿ ಭಾರತಕ್ಕೆ ಆಘಾತ ನೀಡಿದರು. ನಾಯಕಿ ಮಿಥಾಲಿ ರಾಜ್ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು.
ಬಾಂಗ್ಲಾದ ರಿತು ಮೋನಿ 3 ವಿಕೆಟ್ ಉರುಳಿಸಿದರೆ, ನಹೀದ ಅಕ್ತರ್ 2 ವಿಕೆಟ್ ಪಡೆಯುವ ಮೂಲಕ ಭಾರತದ ರನ್ ಓಘಕ್ಕೆ ಕಡಿವಾಣ ಹಾಕಿದರು.
43ನೇ ಓವರ್ ವರೆಗೂ ಗಟ್ಟಿಯಾಗಿ ನಿಂತು ಆಡಿದ ಯಷ್ಟಿಕಾ ಭಾಟಿಯಾ 80 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ರಿಚಾ ಘೋಷ್ (26), ಪೂಜಾ (30) ಹಾಗೂ ಸ್ನೇಹ್ ರಾಣಾ (27) ತೋರಿದ ಉತ್ತಮ ಪ್ರದರ್ಶನದಿಂದ ತಂಡದ ಮೊತ್ತ 200ರ ಗಡಿ ದಾಟಿತು.
ಭಾರತವು ವಿಶ್ವಕಪ್ ಟೂರ್ನಿಯಲ್ಲಿ ಈವರೆಗೂ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ ಹಾಗೂ ಮೂರು ಪಂದ್ಯಗಳಲ್ಲಿ ಸೋತಿದೆ. ಟೂರ್ನಿಯಲ್ಲಿ ಮುಂದಿನ ಹಂತಕ್ಕೇರಲು ಭಾರತ ತಂಡವು ಇವತ್ತಿನ ಪಂದ್ಯ ಮತ್ತು ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.