ADVERTISEMENT

ಬೂಮ್ರಾ ನಾಯಕತ್ವದ ’ಟೆಸ್ಟ್’: ಸರಣಿ ಜಯದತ್ತ ಭಾರತದ ಚಿತ್ತ; ಬೆನ್ ಪಡೆಗೆ ಸಮಬಲದ ಛಲ

ಪಿಟಿಐ
Published 1 ಜುಲೈ 2022, 3:06 IST
Last Updated 1 ಜುಲೈ 2022, 3:06 IST
ಭಾರತ ತಂಡದ ನಾಯಕ ಜಸ್‌ಪ್ರೀತ್ ಬೂಮ್ರಾ ಹಾಗೂ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್‌ –ಎಎಫ್‌ಪಿ ಚಿತ್ರ
ಭಾರತ ತಂಡದ ನಾಯಕ ಜಸ್‌ಪ್ರೀತ್ ಬೂಮ್ರಾ ಹಾಗೂ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್‌ –ಎಎಫ್‌ಪಿ ಚಿತ್ರ   

ಎಜ್‌ಬಾಸ್ಟನ್: ’ಯಾರ್ಕರ್ ಕಿಂಗ್’ ಜಸ್‌ಪ್ರೀತ್ಬೂಮ್ರಾ ಮುಂದೆ ಈಗ ಹೊಸ ಸವಾಲು ಎದುರಾಗಿದೆ.ಶುಕ್ರವಾರ ಇಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಅವರು ತಮ್ಮ ನಾಯಕತ್ವದ ಸಾಮರ್ಥ್ಯ ಸಾಬೀತುಪಡಿಸಬೇಕಿದೆ.

ಒಂಬತ್ತು ತಿಂಗಳುಗಳ ಹಿಂದೆ ನಡೆದಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವು 2–1ರ ಮುನ್ನಡೆ ಸಾಧಿಸಿತ್ತು. ಆದರೆ, ಕೊನೆಯ ಟೆಸ್ಟ್ ಸಮಯಕ್ಕೆ ಆಟಗಾರರನ್ನು ಕೋವಿಡ್ ಕಾಡಿತ್ತು. ಅದರಿಂದಾಗಿ ಆ ಪಂದ್ಯವನ್ನು ಈಗ ಆಯೋಜಿಸಲಾಗುತ್ತಿದೆ.

ಈ ಅವಧಿಯಲ್ಲಿ ಥೇಮ್ಸ್‌ ನದಿಯಲ್ಲಿ ಬಹಳಷ್ಟು ನೀರು ಹರಿದುಹೋಗಿದೆ. ಉಭಯ ತಂಡಗಳಲ್ಲಿಯೂ ಹಲವು ಬದಲಾವಣೆಗಳು ಆಗಿವೆ. ಆಗ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕತ್ವ ವಹಿಸಿದ್ದರು. ನಂತರದ ಬೆಳವಣಿಗೆಯಲ್ಲಿ ರೋಹಿತ್ ಶರ್ಮಾ ನಾಯಕರಾದರು. ಇದೀಗ ಅವರಿಗೆ ಕೋವಿಡ್ ಖಚಿತವಾಗಿರುವುದರಿಂದ ಪ್ರತ್ಯೇಕವಾಸಕ್ಕೆ ತೆರಳಿದ್ದಾರೆ. ಉಪನಾಯಕ ಕೆ.ಎಲ್. ರಾಹುಲ್ ಜರ್ಮನಿಯಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ವಿಶ್ರಾಂತಿಯಲ್ಲಿದ್ದಾರೆ. ಅದರಿಂದಾಗಿ ವೇಗಿ ಬೂಮ್ರಾಗೆ ನಾಯಕತ್ವದ ಹೊಣೆ ವಹಿಸಲಾಗಿದೆ.

ADVERTISEMENT

ಕಪಿಲ್ ದೇವ್ ನಂತರ ಟೆಸ್ಟ್‌ ತಂಡಕ್ಕೆ ನಾಯಕರಾದ ವೇಗದ ಬೌಲರ್‌ ಎಂಬ ಹೆಗ್ಗಳಿಕೆ ಬೂಮ್ರಾ ಅವರದ್ದು. ಕಪಿಲ್ ನಂತರ ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅವರು ಭಾರತ ಕಂಡ ಶ್ರೇಷ್ಠ ವೇಗಿಗಳು. ಆದರೆ ಅವರಿಬ್ಬರಿಗೂ ನಾಯಕತ್ವದ ಅವಕಾಶ ಸಿಕ್ಕಿರಲಿಲ್ಲ.

ಬೂಮ್ರಾಗೆ ಸದ್ಯದ ಸವಾಲು ಸುಲಭದ್ದಲ್ಲ. ತಂಡವು ಈ ಪಂದ್ಯದಲ್ಲಿ ಸೋತರೆ ಸರಣಿ ಸಮಬಲ ಆಗುತ್ತದೆ. ಆದರೆ ಇಂಗ್ಲೆಂಡ್ ನೆಲದಲ್ಲಿ ಸರಣಿಜಯದ ಶ್ರೇಯ ಸಿಗುವುದಿಲ್ಲ. ಒಂದೊಮ್ಮೆ ಪಂದ್ಯ ಡ್ರಾ ಆದರೂ ಗೆಲುವಿನ ಸಂಭ್ರಮ ಭಾರತದ್ದಾಗಲಿದೆ. ಅಲ್ಲದೇ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಅಂಕಪಟ್ಟಿಯಲ್ಲಿ ಬಡ್ತಿಯೂ ಸಿಗಲಿದೆ.

ರೋಹಿತ್ ಗೈರುಹಾಜರಿಯಲ್ಲಿ; ಚೇತೇಶ್ವರ್ ಪೂಜಾರ ಅಥವಾ ಹನುಮವಿಹಾರಿ ಅವರಲ್ಲಿ ಒಬ್ಬರು ಶುಭಮನ್ ಗಿಲ್ ಜೊತೆಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಇದರಿಂದಾಗಿ ಮಯಂಕ್ ಅಗರವಾಲ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ.ಕೌಂಟಿಯಲ್ಲಿ ಆಡಿರುವ ಪೂಜಾರ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಹಳೆಯ ಆಟಕ್ಕೆ ಮರಳುವ ನಿರೀಕ್ಷೆ ಇದೆ. ಆದರೆ ಕಳೆದ ಎರಡು ವರ್ಷಗಳಿಂದ ಯಾವುದೇ ಮಾದರಿಯಲ್ಲಿಯೂ ಶತಕ ಗಳಿಸದ ಕೊಹ್ಲಿ ಲಯಕ್ಕೆ ಮರಳುವರೇ ಎಂಬ ಕುತೂಹಲ ಗರಿಗೆದರಿದೆ.

‘ಕೊಹ್ಲಿ ಶತಕ ಗಳಿಸಬೇಕೆಂದೇನೂ ಇಲ್ಲ. ಪಂದ್ಯ ಜಯಿಸಿಕೊಡುಂತಹ ಇನಿಂಗ್ಸ್ ಆಡಿದರೆ ಸಾಕು’ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಮಧ್ಯಕ್ರಮಾಂಕದಲ್ಲಿ ರಿಷಭ್ ಪಂತ್, ರವೀಂದ್ರ ಜಡೇಜ, ಶ್ರೇಯಸ್ ಅಯ್ಯರ್ ನೀಡುವ ಕಾಣಿಕೆಯೂ ಮಹತ್ವದ್ದಾಗಲಿದೆ. ಬೌಲಿಂಗ್‌ನಲ್ಲಿ ಬೂಮ್ರಾಗೆ ಮೊಹಮ್ಮದ್ ಶಮಿ, ಶಾರ್ದೂಲ್ ಮತ್ತು ಸಿರಾಜ್ ಅವರು ಜೊತೆಗೂಡಲಿದ್ದಾರೆ.

ಇಂಗ್ಲೆಂಡ್ ತಂಡದಲ್ಲಿಯೂ ನಾಯಕತ್ವದ ಬದಲಾವಣೆಯಾಗಿದೆ. ವಿಶ್ವಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿರುವ ಬೆನ್ ಸ್ಟೋಕ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈಚೆಗೆ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ಎದುರು ಸ್ಟೋಕ್ಸ್‌ ಬಳಗವು ಕ್ಲೀನ್‌ಸ್ವೀಪ್ ಮಾಡಿತ್ತು. ಸರಣಿಯ ಎರಡು ಪಂದ್ಯಗಳಲ್ಲಿ ಕಠಿಣ ಗುರಿ ಬೆನ್ನಟ್ಟಿ ಜಯಸಿತ್ತು.

ಅಮೋಘ ಲಯದಲ್ಲಿರುವ ಜೋ ರೂಟ್, ಜಾನಿ ಬೆಸ್ಟೊ ಅವರನ್ನು ಕಟ್ಟಿಹಾಕುವ ಸವಾಲು ಭಾರತದ ಬೌಲರ್‌ಗಳ ಮುಂದಿದೆ. ಭಾರತದ ಬ್ಯಾಟರ್‌ಗಳೂ ಅನುಭವಿ ಜೇಮ್ಸ್ ಆ್ಯಂಡರ್ಸನ್ ಮತ್ತು ಸ್ಟುವರ್ಟ್‌ ಬ್ರಾಡ್ ಅವರನ್ನು ಎದುರಿಸಿ ನಿಂತರೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿದೆ.

ಪಂದ್ಯ ಆರಂಭ: ಮಧ್ಯಾಹ್ನ 3ರಿಂದ
ನೇರಪ್ರಸಾರ: ಸೋನಿ ಸಿಕ್ಸ್‌, ಸೋನಿ ಟೆನ್‌ 3 ಮತ್ತು 4

ತಂಡಗಳು
ಭಾರತ: ಜಸ್‌ಪ್ರೀತ್ ಬೂಮ್ರಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಹನುಮವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ ಕೀಪರ್), ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಆರ್. ಅಶ್ವಿನ್, ಪ್ರಸಿದ್ಧಕೃಷ್ಣ, ಕೋನಾ ಶ್ರೀಕರ್ ಭರತ್ (ವಿಕೆಟ್‌ಕೀಪರ್), ಮಯಂಕ್ ಅಗರವಾಲ್, ಉಮೇಶ್ ಯಾದವ್.

ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ), ಅಲೆಕ್ಸ್ ಲೀಸ್, ಜಾಕ್ ಕ್ರಾಲಿ, ಒಲಿ ಪೊಪ್, ಜೊ ರೂಟ್, ಜಾನಿ ಬೆಸ್ಟೊ, ಸ್ಯಾಮ್ ಬಿಲಿಂಗ್ಸ್ (ವಿಕೆಟ್‌ಕೀಪರ್), ಮ್ಯಾಥ್ಯೂ ಪಾಟ್ಸ್‌, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆ್ಯಂಡರ್ಸನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.