ADVERTISEMENT

IND vs ENG ಮಹಿಳಾ ಕ್ರಿಕೆಟ್: ದೀಪ್ತಿ ಶರ್ಮಾ ಮಾಡಿದ ರನೌಟ್ ಬಗ್ಗೆ ವ್ಯಾಪಕ ಚರ್ಚೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2022, 10:49 IST
Last Updated 25 ಸೆಪ್ಟೆಂಬರ್ 2022, 10:49 IST
ದೀಪ್ತಿ ಶರ್ಮಾ
ದೀಪ್ತಿ ಶರ್ಮಾ   

ಲಂಡನ್‌: ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಇಂಗ್ಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತದ ದೀಪ್ತಿ ಶರ್ಮಾ ಅವರು ಚಾರ್ಲಿ ಡೀನ್ ಅವರನ್ನು ರನೌಟ್ ಮಾಡಿದ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ದೀಪ್ತಿ ಶರ್ಮಾ ಅವರು ಬೌಲಿಂಗ್ ಮಾಡಲು ಓಡಿ ಬರುತ್ತಿದ್ದಾಗ ನಾನ್‌ ಸ್ಟ್ರೈಕರ್ ಎಂಡ್‌ನಲ್ಲಿದ್ದ ಚಾರ್ಲಿ ಡೀನ್ ಕ್ರೀಸ್ ಬಿಟ್ಟು ಓಡಲು ಆರಂಭಿಸಿದ್ದರು. ತಕ್ಷಣವೇ ಅದನ್ನು ಗಮನಿಸಿದ ದೀಪ್ತಿ, ಬೌಲ್ ಮಾಡುವ ಬದಲು ರನೌಟ್ ಮಾಡಿದರು.

ಈ ರೀತಿ ಔಟ್ ಮಾಡುವುದನ್ನು ‘ಮಂಕಡಿಂಗ್’ ಎಂದು ಕರೆಯಲಾಗುತ್ತಿತ್ತು. ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿಯಮಗಳಲ್ಲಿ ತಿದ್ದುಪಡಿ ಮಾಡಿದ್ದು, ನಾನ್‌ ಸ್ಟ್ರೈಕರ್ ಎಂಡ್‌ನಲ್ಲಿದ್ದವರನ್ನು ರನೌಟ್ ಮಾಡುವುದಕ್ಕೆ ಅವಕಾಶ ಕಲ್ಪಿಸಿದೆ.

ADVERTISEMENT

ದೀಪ್ತಿ ಶರ್ಮಾ ಅವರ ನಡೆಗೆ ಕೆಲವು ಮಂದಿ ಕ್ರಿಕೆಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಇನ್ನು ಕೆಲವು ಮಂದಿ ಸಮರ್ಥಿಸಿಕೊಂಡಿದ್ದಾರೆ. ದೀಪ್ತಿ ಅವರು ಕ್ರಿಕೆಟ್ ನಿಯಮದ ಪ್ರಕಾರವೇ ಔಟ್ ಮಾಡಿದ್ದಾರೆ ಎಂದು ಸಮರ್ಥಿಸಿದ್ದಾರೆ.

ವಾಸಿಮ್ ಜಾಫರ್, ವೀರೇಂದ್ರ ಸೆಹ್ವಾಗ್, ಮಾಂಟಿ ಪನೇಸರ್ ಮತ್ತಿತರರು ದೀಪ್ತಿ ಶರ್ಮಾರನ್ನು ಸಮರ್ಥಿಸಿಕೊಂಡಿದ್ದಾರೆ.

ದೀಪ್ತಿ ಅವರನ್ನು ಬೆಂಬಲಿಸಿ ಟೀಕಾಕಾರರಿಗೆ ತಿರುಗೇಟು ನೀಡಿದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, ಇಂಗ್ಲೆಂಡ್ ತಂಡವನ್ನು ಲೂಸರ್ ಎಂದು ಗೇಲಿ ಮಾಡಿದ್ದಾರೆ.

‘ನೀವು ಅಶ್ವಿನ್ ಅನ್ನು ಯಾಕೆ ಟ್ರೆಂಡ್ ಮಾಡುತ್ತಿದ್ದೀರಿ? ಇವತ್ತು ರಾತ್ರಿ ಮತ್ತೊಬ್ಬ ಬೌಲಿಂಗ್ ಹೀರೋ ಆಗಿ ದೀಪ್ತಿ ಶರ್ಮಾ ಹೊರಹೊಮ್ಮಿದ್ದಾರೆ’ ಎಂದು ಟೀಮ್ ಇಂಡಿಯಾ ಸ್ಪಿನ್ನರ್ ಆರ್. ಅಶ್ವಿನ್ ಟ್ವೀಟ್ ಮಾಡಿದ್ದಾರೆ.

2019ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಇಲೆವನ್ ತಂಡದ ಆಗಿನ ನಾಯಕರಾಗಿದ್ದ ಆರ್. ಆಶ್ವಿನ್ ಅವರು ಜಾಸ್ ಬಟ್ಲರ್ ಅವರನ್ನು‘ಮಂಕಡ್‌’ ರೀತಿಯ ರನ್‌ಔಟ್ ಮಾಡಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

‘ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಯಾವ ಕ್ರೀಡೆಯಲ್ಲೂ ಈ ರೀತಿ ಮಾಡುವುದು ಸ್ವೀಕಾರಾರ್ಹವಲ್ಲ’ ಎಂದು ಸ್ಯಾಮ್ ಬಿಲ್ಲಿಂಗ್ಸ್ ಟ್ವೀಟ್ ಮಾಡಿದ್ದಾರೆ.

ದೀಪ್ತಿ ಅವರಿಗೆ ಬೌಲಿಂಗ್ ಮಾಡುವ ಉದ್ದೇಶವೇ ಇರಲಿಲ್ಲ ಎಂದು ಬಿಲ್ಲಿಂಗ್ಸ್ ಟ್ವೀಟ್‌ಗೆ ಜೇಮ್ಸ್ ಆ್ಯಂಡರ್‌ಸನ್ ಪ್ರತಿಕ್ರಿಯಿಸಿದ್ದಾರೆ.

ಕ್ರಿಕೆಟ್ ಅಭಿಮಾನಿಗಳು ಸಹ ಹಲವು ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೀಪ್ತಿ ಶರ್ಮಾ ಮಾಡಿರುವ ರನೌಟ್‌ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಇಂಗ್ಲೆಂಡ್ ಆಟಗಾರರ ವಿರುದ್ಧವೂ ಅಭಿಮಾನಿಗಳು ಕಿಡಿ ಕಾರಿದ್ದಾರೆ.

‘ನನ್ನಲ್ಲಿ ದೋಷ ಇದೆ ಎಂದಾದರೆ, ಇಡೀ ಜಗತ್ತಿನಲ್ಲೇ ದೋಷ ಇದೆ ಎನ್ನುವುದು ಇಂಗ್ಲೆಂಡ್‌ನ ನೀತಿ. ನಾನ್‌ ಸ್ಟ್ರೈಕರ್‌ನಲ್ಲಿರುವ ಬ್ಯಾಟರ್ ಅನ್ನು ರನೌಟ್ ಮಾಡುವುದು ಚರ್ಚೆಯ ವಿಷಯವಾದರೆ, ವಿಶ್ವಕಪ್ ಫೈನಲ್ ಫಲಿತಾಂಶವನ್ನು ಬೌಂಡರಿಗಳ ಒಟ್ಟು ಲೆಕ್ಕಾಚಾರ ಹಾಕಿ ನಿರ್ಧರಿಸುವುದು ಸರಿಯೇ?’ ಎಂದು ಹಾರ್ದಿಕ್ ಖಂಡೇಲ್ವಾಲ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಇನ್ನೂ ಅನೇಕ ಅಭಿಮಾನಿಗಳು ದೀಪ್ತಿ ಶರ್ಮಾ ಅವರನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.