ಲಂಡನ್: ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಸೋತಿರುವ ಭಾರತ ತಂಡದ ಕ್ರೀಡಾಸ್ಫೂರ್ತಿಯನ್ನು ಪಾಕಿಸ್ತಾನ ತಂಡದ ಮಾಜಿ ನಾಯಕ ವಕಾರ್ ಯೂನಸ್ ಪ್ರಶ್ನಿಸಿದ್ದಾರೆ. ಬರ್ಮಿಂಗಂನಲ್ಲಿ ಭಾನುವಾರ ಆತಿಥೇಯ ದೇಶ ಗೆದ್ದ ಕಾರಣ ಈಗ ಪಾಕಿಸ್ತಾನ ತಂಡದ ಸೆಮಿಫೈನಲ್ ಸಾಧ್ಯತೆ ತೂಗುಯ್ಯಾಲೆಯಲ್ಲಿದೆ.
ಭಾನುವಾರದ ಪಂದ್ಯಕ್ಕೆ ಮೊದಲು ಟೂರ್ನಿಯಲ್ಲಿ ಅಜೇಯವಾಗುಳಿದಿದ್ದ ಬದ್ಧ ಎದುರಾಳಿ ಭಾರತ, ಇಂಗ್ಲೆಂಡ್ ವಿರುದ್ಧ ಗೆಲ್ಲಬಹುದೆಂದು ಪಾಕಿಸ್ತಾನ ಆಶಿಸಿತ್ತು. ಬಯಸಿದ ಫಲಿತಾಂಶ ಬಂದಲ್ಲಿ ಸರ್ಫರಾಜ್ ಅಹಮದ್ ಬಳಗದ ಸೆಮಿಫೈನಲ್ ಪ್ರವೇಶದ ಸಾಧ್ಯತೆ ಉಜ್ವಲವಾಗುತಿತ್ತು.
‘ನೀವು ಯಾರು ಎಂಬುದು ಮುಖ್ಯವಲ್ಲ. ಏನು ಮಾಡುತ್ತೀರಿ ಎಂಬುದರ ಮೇಲೆ ನೀವೇನು ಎಂಬುದು ತಿಳಿಯುತ್ತದೆ. ಪಾಕಿಸ್ತಾನ ಸೆಮಿಫೈನಲ್ ತಲುಪುತ್ತದೆಯೇ, ಇಲ್ಲವೇ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಒಂದಂತೂ ಖಚಿತ– ಕೆಲವು ಚಾಂಪಿಯನ್‌ಗಳ ಕ್ರೀಡಾಮನೋಭಾವ ಪರೀಕ್ಷೆಗೊಳಗಾಗಿದೆ. ಅವರು ಅದರಲ್ಲಿ ದಯನೀಯವಾಗಿ ವಿಫಲರಾಗಿದ್ದಾರೆ’ ಎಂದು ಟ್ವಿಟರ್‌ನಲ್ಲಿ ಸೂಚ್ಯವಾಗಿ ದಾಯಾದಿ ತಂಡವನ್ನು ಕೆಣಕಿದ್ದಾರೆ.
ಇದಕ್ಕೆ ಮೊದಲೇ, ಮಾಜಿ ಆಟಗಾರರಾದ ಬಾಸಿತ್ ಅಲಿ ಮತ್ತು ಸಿಕಂದರ್ ಬಕ್ತ್ ಕೂಡ, ಪಾಕಿಸ್ತಾನವನ್ನು ಟೂರ್ನಿಯಿಂದ ಹೊರದೂಡಲು ಭಾರತ, ಆತಿಥೇಯರಿಗೆ ಸೋಲಬಹುದು ಎಂದು ಆರೋಪಿಸಿದ್ದರು.
ಭಾನುವಾರದ ಗೆಲುವಿನೊಡನೆ ಇಂಗ್ಲೆಂಡ್ 10 ಅಂಕಗಳನ್ನು ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ನಾಲ್ಕರೊಳಗೆ ಬಂದಿದೆ. ಇಬ್ಬರಿಗೂ ತಲಾ ಒಂದು ಪಂದ್ಯ ಆಡಲು ಇದೆ. ಇಂಗ್ಲೆಂಡ್‌ಗೆ ಕೊನೆಯ ಪಂದ್ಯ ನ್ಯೂಜಿಲೆಂಡ್ ವಿರುದ್ಧ ಇದೆ. ಪಾಕಿಸ್ತಾನಕ್ಕೆ, ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ ಎದುರಾಳಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.